Advertisement

ನಾಯಕರ ದೌಡು; ಸಮಸ್ಯೆಗಳ ಆಲಿಕೆ

12:10 PM Mar 22, 2017 | Team Udayavani |

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಧರಣಿ ಸ್ಥಳಕ್ಕೆ ವಿವಿಧ ಪಕ್ಷಗಳ ನಾಯಕರು ಮಂಗಳವಾರ ಭೇಟಿ ನೀಡಿದ್ದರು.  ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಬೆಳಗ್ಗೆ ಹಾಗೂ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾ ನಿರತರ ಜತೆ ಚರ್ಚಿಸಿ “ನಿಮ್ಮ ಪರವಾಗಿ ಹೋರಾಟ ಮಾಡುತ್ತೇನೆ,” ಎಂದು ಭರವಸೆ ನೀಡಿದರು.

Advertisement

“ಪ್ರತಿಭಟನಾ ನಿರತರಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ ಅವರು, ಊಟ-ತಿಂಡಿ ವ್ಯವಸ್ಥೆ ಮಾಡುವುದಾಗಿಯೂ ತಿಳಿಸಿದಾಗ, ಮಹಿಳೆಯರು ಬೇಡ,” ಎಂದು ನಿರಾಕರಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್‌, ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ನಮ್ಮ ಪಕ್ಷದ ಬೆಂಬಲವಿದೆ ಎಂದು ಹೇಳಿದರು. ಬಿಜೆಪಿ ವಕ್ತಾರ ಸಿ.ಟಿ.ರವಿ ಈ ವೇಳೆ ಹಾಜರಿದ್ದರು. 

ವಿಧಾನಪರಿಷತ್‌ ಸದಸ್ಯ, ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ಭೇಟಿ ನೀಡಿ, ಶೇ.50ರಷ್ಟಾದರೂ ಕೊಡುವಂತೆ ಮನವಿ ಮಾಡುತ್ತೇವೆ ಎಂದು ಭರವಸೆ ನೀಡಿದರು. 
ಪ್ರತಿಭಟನಾ ಸ್ಥಳಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ ವಿಧಾನಪರಿಷತ್‌ ಸದಸ್ಯೆ ಜಯಮಾಲಾ, ಶೀಘ್ರವೇ ಹೋರಾಟಗಾರರಿಗೆ ಜಯ ಲಭಿಸಲಿದೆ. ನಾನು, ಸರ್ಕಾರ ಮತ್ತು ಮುಖ್ಯಮಂತ್ರಿಗಳು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪರವಾಗಿಯೇ ಇದ್ದೇವೆ.

ಹೋರಾಟದ ಬಗ್ಗೆ ಈಗಾಗಲೇ ಉಮಾಶ್ರೀಯವರು ಸರ್ಕಾರದ ಗಮನಕ್ಕೆ ತಂದಿದ್ದು, ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ. ಪ್ರತಿಭಟನಾನಿರತರಿಗೆ ಅಗತ್ಯವಾದ ನೀರು ಸರಬರಾಜಿಗೆ ಆದೇಶ ನೀಡಲಾಗಿದೆ. ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಭದ್ರತೆ ಒದಗಿಸಲು ಹೆಚ್ಚಿನ ಮಹಿಳಾ ಪೊಲೀಸರನ್ನು ನೇಮಿಸುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಲಾಗಿದೆ. ಸರ್ಕಾರ ನಿಮ್ಮ ಪರವಾಗಿದೆ. ಕುಳಿತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಕೊಳ್ಳೋಣವೆಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಯವರೇ ಆಗಮಿಸಿ, ಸಮಸ್ಯೆ ಬಗೆಹರಿಸಬೇಕು. ಅಲ್ಲಿಯವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಸಲಾಗುವುದು ಎಂದು ಪಟ್ಟುಹಿಡಿದರು. ಮಾಜಿ ಸಚಿವ ಬಸವರಾಜ ಹೊರಟಿ, ಮಾಜಿ ಸಚಿವೆ ಮೋಟಮ್ಮ, ಮಾಜಿ ಶಾಸಕ ಶಿವರಾಮರೆಡ್ಡಿ, ಆಮ್‌ಆದ್ಮಿ ರಾಜ್ಯ ಸಂಚಾಲಕ ಶಿವಕುಮಾರ್‌ ಚೆಂಗಲರಾಯ ಸೇರಿದಂತೆ ಹಲವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next