Advertisement

ಪೆತ್ತಾಜೆ ಶಾಲೆ: ವಿದ್ಯಾರ್ಥಿಗಳಿಂದಲೇ ತರಕಾರಿ ಕೃಷಿ

11:26 AM Mar 18, 2018 | |

ಬೆಳ್ಳಾರೆ : ಸುಳ್ಯ ತಾಲೂಕಿನ ಪೆತ್ತಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಬಿಸಿಯೂಟ ಸಿಬಂದಿಯ ಸಹಕಾರದಿಂದ ಸಾವಯವ ತರಕಾರಿ ಕೃಷಿ ಮಾಡಿ ಇತರ ಶಾಲೆಗಳಿಗೆ ಮಾದರಿಯಾಗಿದ್ದಾರೆ.

Advertisement

ಸರಕಾರಿ ಶಾಲೆಗಳಲ್ಲಿ ಈಗ ಮಧ್ಯಾಹ್ನ ಬಿಸಿಯೂಟ ಇದೆ. ಆದರೆ ಇದಕ್ಕೆ ತರಕಾರಿ ಹಾಗೂ ಸಂಬಾರ ಪದಾರ್ಥ ಖರೀದಿಸಲು ಸಾಕಷ್ಟು ಅನುದಾನವಿಲ್ಲ. ಕೆಲವು ಶಾಲೆಗಳು ಮಾರುಕಟ್ಟೆಯಿಂದಲೇ ತರಕಾರಿ ಖರೀದಿಸಿದರೆ, ಇನ್ನೂ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆತ್ತವರೇ ತರಕಾರಿ, ತೆಂಗಿನಕಾಯಿ ತಂದು ಕೊಡುತ್ತಾರೆ. ಆದರೆ, ಪೆತ್ತಾಜೆ ಸರಕಾರಿ ಹಿ.ಪ್ರಾ. ಶಾಲೆಯ ಅಂಗಳದಲ್ಲೇ ಸಾವಯವ ಪದ್ಧತಿಯಲ್ಲಿ ವಿದ್ಯಾರ್ಥಿಗಳು, ಬಿಸಿಯೂಟ ಅಡುಗೆ ಸಿಬಂದಿ ಹಾಗೂ ಶಿಕ್ಷಕರು ಸೇರಿ ಸುಂದರವಾದ ಕೈತೋಟ ನಿರ್ಮಾಣ ಮಾಡಿದ್ದಾರೆ.

ಐದು ತರಗತಿಗಳ ಒಟ್ಟು ಎಂಟು ವಿದ್ಯಾರ್ಥಿಗಳು ಶಾಲೆಯ 1.30 ಎಕ್ರೆ ಜಾಗದಲ್ಲಿ ತೆಂಗು, ಗೇರು ಹಾಗೂ ಇತರ ಹಣ್ಣಿನ ಗಿಡಗಳನ್ನು ಬೆಳೆಸಿದ್ದು, ಫ‌ಲ ನೀಡುತ್ತಿವೆ. ತೆಂಗಿನ ಫ‌ಸಲನ್ನು ಮಧ್ಯಾಹ್ನದ ಬಿಸಿಯೂಟದ ಅಡುಗೆಗೆ ಬಳಕೆ ಮಾಡುತ್ತಿದ್ದಾರೆ. ಗೇರು ಫ‌ಸಲನ್ನು ಪ್ರತಿವರ್ಷ ಏಲಂ ಮಾಡಲಾಗುತ್ತದೆ. ಶಾಲೆಯಲ್ಲಿ ದೂರವಾಣಿ, ವಿದ್ಯುತ್‌, ನೀರು, ಶೌಚಾಲಯ ಸಹಿತ ಎಲ್ಲ ವ್ಯವಸ್ಥೆ ಗಳಿವೆ. ಏಕೋಪಾಧ್ಯಾಯ ಶಾಲೆಯ ಶಿಕ್ಷಕ ಅರುಣ್‌ ಕುಮಾರ್‌ ಹಾಗೂ ಅಕ್ಷರ ದಾಸೋಹ ಸಿಬಂದಿ ಜಾನಕಿ ಅವರ ಮುತುವರ್ಜಿಯಿಂದ ಎಲ್ಲವೂ ಸಾಧ್ಯವಾಗಿದೆ.

ಈ ಹಿಂದೆ ಕೃಷಿ ಸಮ್ಮೇಳನವೊಂದಕ್ಕೆ ತೆರಳಿದ್ದ ವಿದ್ಯಾರ್ಥಿಗಳು ಅಲ್ಲಿಂದ ತರಕಾರಿ ಬೀಜಗಳನ್ನು ಖರೀದಿಸಿ ತಂದಿದ್ದರು. ಶಾಲೆ ಹಿಂಬದಿ ಐದು ಸೆಂಟ್ಸ್‌ ಜಾಗ ಹದಗೊಳಿಸಿ, ಅದರಲ್ಲಿ ಅಲಸಂಡೆ, ಬೆಂಡೆಕಾಯಿ, ಸೌತೆ, ಚಪ್ಪರ ಅವರೆ, ಹೀರೆಕಾಯಿ ಇತ್ಯಾದಿ ತರಕಾರಿಗಳ ಬೀಜ ಬಿತ್ತಿದ್ದರು. ತರಕಾರಿ ಕೃಷಿಗೆ ಬಿಸಿಯೂಟ ಸಿಬಂದಿ ಜಾನಕಿ  ಅವರು ತಮ್ಮ ಹಟ್ಟಿಯಿಂದ ಗೊಬ್ಬರ ತಂದು ಹಾಕುತ್ತಾರೆ. ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ತರಕಾರಿಯ ಕಳೆ ಕೀಳುತ್ತಾರೆ, ಗಿಡಗಳಿಗೆ ನೀರು ಬಿಡುತ್ತಾರೆ. ಈ ಕೈತೋಟ ಹಂತ ಹಂತವಾಗಿ ವಿಸ್ತರಣೆಯಾಗುತ್ತ ಬಂದು, ಈಗ ತರಕಾರಿ ಗಿಡಗಳು ಸೊಂಪಾಗಿ ಫ‌ಸಲು ನೀಡುತ್ತಿವೆ. ದಿನಕ್ಕೊಂದು ಬಗೆಯ ತರಕಾರಿಯಿಂದ ಮಾಡಿದ ರುಚಿಕರ ಅಡುಗೆಯನ್ನು ವಿದ್ಯಾರ್ಥಿಗಳು ಉಣ್ಣುತ್ತಿದ್ದಾರೆ.

ರುಚಿಕರ, ಆರೋಗ್ಯಕರ
ಮಾರುಕಟ್ಟೆಗಳಲ್ಲಿ ದೊರೆಯುವ ತರಕಾರಿಗೆ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಕಾರಣದಿಂದ ನಮ್ಮ ಬಿಸಿಯೂಟ ಸಿಬಂದಿಯೊಂದಿಗೆ ಸೇರಿಕೊಂಡು ಸಾವಯವ ತರಕಾರಿ ಕೃಷಿ ಮಾಡಿದ್ದಾರೆ. ಇದನ್ನು ಬಿಸಿಯೂಟಕ್ಕೆ ಬಳಸುತ್ತಿದ್ದು,  ತರಕಾರಿ ತುಂಬಾ ರುಚಿಕರವಾಗಿದೆ.
ಅರಣ್‌ಕುಮಾರ್‌, ಶಿಕ್ಷಕ,
  ಸರಕಾರಿ ಕಿ.ಪ್ರಾ. ಶಾಲೆ, ಪೆತ್ತಾಜೆ

Advertisement

ಫ‌ಸಲು ಚೆನ್ನಾಗಿ ಬಂದಿದೆ
ಬಡುವಿನ ಸಮಯದಲ್ಲಿ ಮಕ್ಕಳೊಂದಿಗೆ ಸೇರಿಕೊಂಡು ತರಕಾರಿ ಕೃಷಿ ಮಾಡುತ್ತೇನೆ. ನಾನು ಮನೆಯಿಂದ ಹಟ್ಟಿಗೊಬ್ಬರ ತಂದು ತರಕಾರಿ ಕೃಷಿಗೆ ಉಪಯೋಗ ಮಾಡುತ್ತೇನೆ. ಇದರಿಂದ ತರಕಾರಿ ಫ‌ಸಲು ತುಂಬಾ ಚೆನ್ನಾಗಿ ಬಂದಿದೆ. ಇದರಿಂದ ಬಿಸಿಯೂಟ ಅಡುಗೆಗೆ ನಮಗೆ ಸಮಸ್ಯೆಯೇ ಇಲ್ಲ.
ಜಾನಕಿ,
  ಅಡಿಗೆ ಸಿಬಂದಿ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next