ವ್ಯಾಪಾರಿ “ಈ ನಾಯಿಮರಿಗೆ ಒಂದು ಕಾಲಿಲ್ಲ. ಆದ್ದರಿಂದ ನನಗೆ ದುಡ್ಡೇನು ಬೇಡ. ಇದನ್ನು ಉಚಿತವಾಗಿಯೋ ತಗೊಂಡು ಹೋಗು’ ಎಂದು ಹೇಳಿದ. ಅರುಣ “ಉಚಿತವಾಗಿ ಬೇಡ. ಇದಕ್ಕೂ ಬೆಲೆ ಇದೆ.’ ಎಂದು ಹೇಳಿ ದುಡ್ಡು ತೆತ್ತು, ಆ ಕುಂಟ ನಾಯಿಮರಿಯನ್ನು ತನ್ನ ಮನೆಗೆ ಕೊಂಡುಹೋದ.
ಒಂದೂರಲ್ಲಿ ಒಬ್ಬ ನಾಯಿ ವ್ಯಾಪಾರಿ ಇದ್ದ. ಅವನು ಅನೇಕ ಜಾತಿಯ ನಾಯಿಗಳನ್ನು ಸಾಕಿದ್ದ. ನಾಯಿಗಳು ಮರಿ ಹಾಕಿದ ಮೇಲೆ ಆ ಮರಿಗಳನ್ನು ಒಳ್ಳೆಯ ಬೆಲೆಗೆ ಮಾರುತ್ತಿದ್ದ. ಅವನ ನಾಯಿಮರಿಗಳಿಗೆ ತುಂಬಾ ಬೇಡಿಕೆ ಇತ್ತು. ಗಿರಾಕಿಗಳು ನಾಯಿ ಮರಿಗಳನ್ನು ಕೊಳ್ಳಲು ಅವನ ಅಂಗಡಿ ಮುಂದೆ ಗಲಾಟೆ ಮಾಡತೊಡಗಿದರು. ಅವನಿಗೆ ಏನು ಮಾಡಬೇಕೆಂದು ತೋಚದೆ ಹರಾಜು ಕೂಗುವುದರ ಮೂಲಕ ಮಾರಾಟ ಮಾಡಲು ಶುರುಮಾಡಿದ. ಇದರಿಂದ ನಾಯಿ ಮರಿಗಳು ಹೆಚ್ಚಿನ ಬೆಲೆಗೆ ಮಾರಾಟವಾಗತೊಡಗಿತು.
ಒಮ್ಮೆ ಒಳ್ಳೆಯ ತಳಿಯ ನಾಯಿಯೊಂದು ನಾಲ್ಕು ಮರಿಗಳನ್ನು ಹಾಕಿತು. ಅದರಲ್ಲಿ ಮೂರು ಆರೋಗ್ಯವಾಗಿದ್ದವು. ಒಂದಕ್ಕೆ ಮಾತ್ರ ಹುಟ್ಟುವಾಗಲೇ ಒಂದು ಕಾಲು ಊನವಾಗಿತ್ತು. ವ್ಯಾಪಾರಿಗೆ ಬೇಸರವಾಯಿತು. ಯಾರೂ ಕೊಳ್ಳದೆ ಇದು ಹಾಗೆಯೇ ಉಳಿದುಬಿಡುತ್ತದೆಯಲ್ಲ ಎಂದು ಅವನಿಗೆ ಯೋಚನೆಯಾಯಿತು. ಗಿರಾಕಿಗಳೆಲ್ಲರೂ ಆರೋಗ್ಯವಾಗಿದ್ದ ನಾಯಿ ಮರಿಗಳತ್ತಲೇ ಗಮನ ಕೊಡುತ್ತಿದ್ದರು. ಹೀಗಾಗಿ ವ್ಯಾಪಾರಿ ಆ ಮೂರು ಮರಿಗಳನ್ನು ಮಾತ್ರ ಚೆನ್ನಾಗಿ ನೋಡಿಕೊಳ್ಳತೊಡಗಿದ. ಸಮಯ ಬಂದಾಗ ಕುಂಟು ನಾಯಿ ಮರಿಯನ್ನು ಎಲ್ಲಾದರೂ ದೂರ ಬಿಟ್ಟು ಬರೋಣ ಎಂದು ಅವನು ನಿರ್ಧರಿಸಿದ್ದ.
ಅದೊಂದು ದಿನ ಹರಾಜಿನಲ್ಲಿ ಚೆಂದದ ಆ ಮೂರು ಮರಿಗಳೂ ಮಾರಾಟವಾದವು. ಕುಂಟ ಮರಿಯನ್ನು ಯಾರೂ ಕೊಳ್ಳಲಿಲ್ಲ. ಅದನ್ನು ದೂರದಿಂದ ನೋಡುತ್ತಿದ್ದ ಹುಡುಗನೊಬ್ಬ ಬಂದು “ಸ್ವಾಮಿ, ನನ್ನ ಹೆಸರು ಅರುಣ್. ನನಗೆ ಆ ನಾಯಿಮರಿ ಕೊಡಿ. ಹಣ ಕೊಡ್ತೀನಿ’ ಅಂದ. ವ್ಯಾಪಾರಿ “ಇದಕ್ಕೆ ಒಂದು ಕಾಲು ಸರಿಯಿಲ್ಲ. ತಗೊಂಡು ಏನು ಮಾಡ್ತೀಯಾ?’ ಅಂದ. “ಪರವಾಗಿಲ್ಲ. ನನಗೆ ಅದೇ ಬೇಕು, ಕೊಡಿ’. “ತಗೋ ಆದರೆ ದುಡ್ಡೇನು ಬೇಡ. ಉಚಿತವಾಗಿಯೋ ತಗೊಂಡು ಹೋಗು’ ಎಂದು ವ್ಯಾಪಾರಿ ಹೇಳಿದಾಗ ಹುಡುಗ “ಉಚಿತವಾಗಿ ಬೇಡ. ಇದಕ್ಕೂ ಬೆಲೆ ಇದೆ.’ ಎಂದು ಹೇಳಿ ದುಡ್ಡು ತೆತ್ತು ಕುಂಟ ನಾಯಿಮರಿಯನ್ನು ತನ್ನ ಮನೆಗೆ ಕೊಂಡುಹೋದ.
ಈ ಘಟನೆಯಾಗಿ ಸುಮಾರು ವರ್ಷವೇ ಆಗಿತ್ತು. ಊರಿನಲ್ಲಿ ನಾಯಿಗಳ ಫ್ಯಾಷನ್ ಮತ್ತು ಓಟದ ಸ್ಪರ್ಧೆ ಏರ್ಪಡಿಸಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಂದ ಚಂದದ, ಬಲಾಡ್ಯ ನಾಯಿಗಳು ಬಂದಿದ್ದವು. ಅರುಣ್ ತನ್ನ ಕುಂಟು ನಾಯಿಯನ್ನೂ ಕರೆದುಕೊಂಡು ಬಂದಿದ್ದ. ನಾಯಿಯನ್ನು ನೋಡಿದವರೆಲ್ಲರೂ ಅರುಣನಿಗೆ ಹುಚ್ಚು ಹಿಡಿದಿದೆಯೇನೋ ಎಂಬಂತೆ ನೋಡಿದರು. ಇನ್ನು ಕೆಲವರು “ಅಯ್ಯೋ ಪಾಪ’ ಎಂದರು. ಅಂದು ಅಲ್ಲಿ ನಾಯಿ ವ್ಯಾಪಾರಿಯೂ ಬಂದಿದ್ದ. ಆ ನಾಯಿಯನ್ನು ನೋಡುತ್ತಲೇ ಅದು ತನ್ನಲ್ಲಿ ಇದ್ದ ನಾಯಿ ಎಂಬುದು ಅವನಿಗೆ ನೆನಪಾಯಿತು. ಅವನಿಗೆ ಹುಡುಗ ಅದನ್ನು ಬೆಳೆಸಿದ ರೀತಿ ಕಂಡು ಖುಷಿಯಾಯಿತು.
ಓಟದ ಸ್ಪರ್ಧೆ ಆರಂಭವಾಯಿತು. ಮೈದಾನದಲ್ಲಿ ನೆರೆದಿದ್ದವರೆಲ್ಲರೂ ಅಚ್ಚರಿಗೊಳ್ಳುವಂತೆ ಓಟದಲ್ಲಿ ಕುಂಟು ನಾಯಿಯೇ ಮೊದಲ ಸ್ಥಾನ ಪಡೆಯಿತು.ನಾಯಿ ವ್ಯಾಪಾರಿಗಂತೂ ತುಂಬಾ ಕುತೂಹಲವಾಯಿತು. ಯಾವ ನಾಯಿಯನ್ನು ತಾನು ಅನಾಥವಾಗಿ ಬಿಟ್ಟುಬರಬೇಕೆಂದುಕೊಂಡಿದ್ದನೋ ಅದನ್ನು ಚೆನ್ನಾಗಿ ಬೆಳೆಸಿದ್ದೇ ಅಲ್ಲದೆ ಓಟದಲ್ಲಿ ಮುಂದೆ ಬರುವಂತೆ ಮಾಡಿದ್ದು ಅವನಿಗೆ ಅಚ್ಚರಿ ತಂದಿತ್ತು. ಅರುಣನ ಬಳಿ ಬಂದು “ಇದು ಹೇಗೆ ಸಾಧ್ಯ!?’ ಅಂತ ಕೇಳಿದ. ಹುಡುಗ ಹೇಳಿದ “ಎಲ್ಲವೂ ಸಾಧ್ಯ. ಆದರೆ ಅವಕಾಶ ನೀಡಬೇಕು. ಅವುಗಳಿಗೆ ಕರುಣೆ ಬೇಡ, ಅವಕಾಶ ಬೇಕು.’ ಎನ್ನುತ್ತಾ ತನ್ನ ಪ್ಯಾಂಟನ್ನು ಎತ್ತಿ ತೋರಿಸಿದ. ಅವನಿಗೆ ಒಂದು ಕಾಲಿರಲಿಲ್ಲ. ಅವನು ಕೃತಕ ಕಾಲನ್ನು ಹಾಕಿಸಿಕೊಂಡಿದ್ದ. “ನಾನು ಕೂಡ ಮ್ಯಾರಥಾನ್ ಓಟದಲ್ಲಿ ಪದಕ ಪಡೆದಿದ್ದೇನೆ.’ ಅಂದಾಗ ಅಲ್ಲಿ ಸೇರಿದ್ದವರೆಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು.
– ಸದಾಶಿವ್ ಸೊರಟೂರು