ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಳ ಗ್ರಾಮದ ಸೊರ್ನಾಡು ಬಳಿ ಪೈಪು ಕೊರೆದು ಪೆಟ್ರೋಲಿಯಂ ಉತ್ಪನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಹಾಗೂ ಕೃತ್ಯಕ್ಕೆ ನೆರವಾದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೊರ್ನಾಡು ಅರ್ಬಿ ಮನೆ ಐವನ್ ಚಾರ್ಲ್ ಪಿಂಟೋ(43) ಬಂಧಿತ ಪ್ರಮುಖ ಆರೋಪಿಯಾಗಿದ್ದು, ಕೃತ್ಯಕ್ಕೆ ನೆರವಾದ ಪಚ್ಚನಾಡಿ ಬೋಂದೆಲ್ ನಿವಾಸಿ ಅಜಿತ್ ಮತ್ತು ಕಣ್ಣೂರು ನಿವಾಸಿ ಜೋಯೆಲ್ ಪ್ರೀತಮ್ ಡಿಸೋಜನನ್ನು ಬಂಧಿಸಲಾಗಿದೆ.
ಜುಲೈ 30ರಂದು ಆಯಿಲ್ ಮತ್ತು ನ್ಯಾಚುರಲ್ ಲಿಮಿಟೆಡ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಪೆಟ್ರೋಲಿಯಂ ಪೈಪ್‌ಲೈನ್ ಕೊರೆದು ಬೇರೊಂದು ಪೈಪ್ ಅಳವಡಿಸಿ ಪೆಟ್ರೋಲಿಯಂ ಉತ#ನ್ನ ಕಳವು ನಡೆಸುತ್ತಿರುವ ಕುರಿತು ಬೆಳಕಿಗೆ ಬಂದಿತ್ತು.
ಜು. 11ರಿಂದ ಸುಮಾರು 40 ಲಕ್ಷ ರೂ.ಗಳ ಪೆಟ್ರೋಲಿಯಂ ಉತ್ಪನ್ನ ಕಳ್ಳತನ ಮಾಡಿರುವ ಕುರಿತು ದೂರು ದಾಖಲಾಗಿದೆ. ಪ್ರಕರಣದ ಕುರಿತು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ನಿರ್ದೇಶನದಂತೆ ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಟಿ.ಡಿ ನಾಗರಾಜ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
ಇದನ್ನೂ ಓದಿ :ಕೋವಿಡ್ : ಸಂಭಾವ್ಯ 3ನೇ ಅಲೆ ಎದುರಿಸಲು ದ.ಕ. ಜಿಲ್ಲಾಡಳಿತ ಸರ್ವ ಸನ್ನದ್ಧ: ಜಿಲ್ಲಾಧಿಕಾರಿ
ಜತೆಗೆ ಆರೋಪಿಯಿಂದ ಕೃತ್ಯಕ್ಕೆ ಬಳಸಲಾದ ಒಂದು ಜೀಪ್, ಡಿಸೇಲ್ ಕೊಂಡು ಹೋಗಲು ಬಳಸಿದ ಕ್ಯಾನ್‌ಗಳು ಮತ್ತು ಡಿಸೇಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯದಲ್ಲಿ ಪೈಪ್‌ಲೈನ್‌ಗೆ ಹೋಲ್ ತೆಗೆದು ವೆಲ್ಡಿಂಗ್ ಮಾಡಿರುವ ಇಬ್ಬರು ವೆಲ್ಡರ್‌ಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಉಳಿದ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್‌ಐ ಪ್ರಸನ್ನ, ಎಚ್‌ಸಿಗಳಾದ ಜನಾರ್ದನ, ಗೋಣಿಬಸಪ್ಪ, ಸುರೇಶ್, ಪಿಸಿಗಳಾದ ಮನೋಜ್, ಪುನೀತ್ ಪಾಲ್ಗೊಂಡಿದ್ದರು.