Advertisement

Karnataka: ಕೈದಿಗಳಿಂದಲೇ ಪೆಟ್ರೋಲ್‌ ಬಂಕ್‌ ನಿರ್ವಹಣೆ!

12:33 AM Jun 30, 2023 | Team Udayavani |

ಬೆಂಗಳೂರು: ಆಂಧ್ರ, ತೆಲಂಗಾಣ ಮಾದರಿಯಲ್ಲಿ ರಾಜ್ಯದಲ್ಲೂ ಕೈದಿಗಳು ಪೆಟ್ರೋಲ್‌ ಬಂಕ್‌ ನಿರ್ವಹಿಸುವ ಕಾಲ ಸನ್ನಿಹಿತವಾಗಿದೆ.

Advertisement

ನೆರೆ ರಾಜ್ಯಗಳ ಮಾದರಿಯಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಜತೆ ಒಪ್ಪಂದ ಮಾಡಿಕೊಂಡು ಪೆಟ್ರೋಲ್‌ ಬಂಕ್‌ಗಳನ್ನು ತೆರೆದು, ಅವುಗಳಲ್ಲಿ ಸಜಾ ಕೈದಿಗಳಿಗೆ ಉದ್ಯೋಗ ನೀಡುವುದರ ಜತೆಗೆ ಇಲಾಖೆಗೆ ಆದಾಯ ತರುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದ್ದು, ಸರಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈ ಮೂಲಕ ರಾಜ್ಯ ಕಾರಾಗೃಹ ಇಲಾಖೆ ಮತ್ತೂಂದು ಸುಧಾರಣೆಯ ಹೆಜ್ಜೆ ಇರಿಸಿದೆ. ಕೈದಿಗಳ ಮೂಲಕ ಬೇಕರಿ ತಿನಿಸು, ಸಿದ್ದ ಉಡುಪು ಹಾಗೂ ಕರಕುಶಲ ವಸ್ತುಗಳನ್ನು ತಯಾರಿಸಿ, ಉತ್ತಮ ಗುಣಮಟ್ಟ ಕಾಯ್ದುಕೊಂಡು ಯಶಸ್ವಿಯಾಗಿರುವ ಇಲಾಖೆ, ತನ್ನ ಆದಾಯ ಹೆಚ್ಚಿಸಿಕೊಳ್ಳುವ ಜತೆಗೆ ಕೈದಿಗಳಿಗೆ ಜೈಲಿನಲ್ಲೇ ವೃತ್ತಿ ತರಬೇತಿ ಹಾಗೂ ಉದ್ಯೋಗ ಸೃಷ್ಟಿಸಲು ಯೋಜನೆ ರೂಪಿಸಿದೆ. ಸದ್ಯದಲ್ಲೇ ಕೇಂದ್ರ ಕಾರಾಗೃಹ ಮತ್ತು ಜಿಲ್ಲಾ ಕಾರಾಗೃಹಗಳಲ್ಲಿ ಶೂ, ಫ‌ರ್ನಿಚರ್‌ ಸೇರಿ ವಿವಿಧ ಬಗೆಯ ಉತ್ಪನ್ನಗಳ ತಯಾರಿ ಘಟಕ, ಪೆಟ್ರೋಲ್‌ ಬಂಕ್‌ ಸ್ಥಾಪನೆಗೆ ಸಿದ್ಧತೆ ನಡೆಸಿದೆ.

ಪೆಟ್ರೋಲ್‌ ಬಂಕ್‌ ಸ್ಥಾಪನೆ ಹೇಗೆ ?

ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಜೈಲುಗಳ ಸನಿಹ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ (ಐಒಸಿ) ಜತೆ ಒಪ್ಪಂದ ಮಾಡಿಕೊಂಡು ಹತ್ತಾರು ಪೆಟ್ರೋಲ್‌ ಬಂಕ್‌ಗಳನ್ನು ಸ್ಥಾಪಿಸಲಾಗಿದೆ. ಹೂಡಿಕೆಯನ್ನು ಐಒಸಿಯೇ ಮಾಡಿದ್ದು, ಬಂಕ್‌ ನಿರ್ವಹಣೆಯನ್ನು ಕಾರಾಗೃಹ ಇಲಾಖೆ ನಡೆಸುತ್ತಿದೆ. ಅವಿಭಜಿತ ಆಂಧ್ರಪ್ರದೇಶದಲ್ಲೇ 26 ಜೈಲುಗಳಲ್ಲಿ ಬಂಕ್‌ ತೆರೆಯಲಾಗಿದೆ. ಅದೇ ಮಾದರಿಯಲ್ಲಿ ಮೊದಲ ಹಂತದಲ್ಲಿ ರಾಜ್ಯದ 8 ಕೇಂದ್ರ ಕಾರಾಗೃಹಗಳ ವ್ಯಾಪ್ತಿಯ ಖಾಲಿ ಜಾಗದಲ್ಲಿ ಪೆಟ್ರೋಲ್‌ ಬಂಕ್‌ ಸ್ಥಾಪಿಸಲಾಗುತ್ತದೆ. ಇಲ್ಲಿ ಆಯ್ದ ಕೈದಿಗಳಿಗೆ ಉದ್ಯೋಗ ನೀಡಲಾಗುತ್ತದೆ. ಬಂಕ್‌ ಸ್ಥಾಪನೆಯಿಂದ ಬರುವ ಆದಾಯದಲ್ಲಿ ಐಒಸಿ ಅಂದಾಜು ಶೇ. 5-6ರಷ್ಟನ್ನು ಇಲಾಖೆಗೆ ನೀಡಬಹುದು. ಅಲ್ಲದೆ ಜೈಲಿನಲ್ಲಿ ಉತ್ಪಾದಿಸುವ ಬಟ್ಟೆ, ಬೇಕರಿ ತಿನಿಸು, ಕರಕುಶಲ ವಸ್ತುಗಳು, ಮುದ್ರಣಾಲಯ ವಸ್ತುಗಳನ್ನು ಬಂಕ್‌

Advertisement

ಪಕ್ಕದಲ್ಲೇ ಮಾರಾಟ ಮಳಿಗೆ ಸ್ಥಾಪಿಸಿ ಮಾರಾಟಕ್ಕೆ ಚಿಂತಿಸಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹ ಸೇರಿ ರಾಜ್ಯದ 8 ಕೇಂದ್ರ ಕಾರಾಗೃಹಗಳು ಮತ್ತು 21 ಜಿಲ್ಲಾ ಕಾರಾಗೃಹಗಳಲ್ಲಿ ಕೈದಿಗಳ ಪರಿವರ್ತನೆಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದೆ. ಅವರ ವೃತ್ತಿಪರತೆ ಹೆಚ್ಚಿಸಲು ಜೈಲಿನಲ್ಲೇ ಬಟ್ಟೆ ನೇಯ್ಗೆ, ಬೇಕರಿ ಪದಾರ್ಥ ತಯಾರಿ, ಮರಗೆಲಸ, ವೆಲ್ಡಿಂಗ್‌, ಕೃಷಿ, ಹೇರ್‌ ಕಟಿಂಗ್‌, ಮುದ್ರಣಾಲಯ, ಸ್ಯಾನಿಟೈಸರ್‌ ಹೀಗೆ ವಿವಿಧ ಗುಡಿ ಕೈಗಾರಿಕೆಗಳಿವೆ. ಕಾರಾಗೃಹ ಅಭಿವೃದ್ಧಿ ಮಂಡಳಿಯಿಂದ ಇಲಾಖೆಗೆ ಆದಾಯ ತರುವ ನಿಟ್ಟಿನಲ್ಲಿ ನೀಲನಕ್ಷೆ ಸಿದ್ಧಪಡಿಸ

ಲಾಗಿದ್ದು, ಕೇಂದ್ರ ಅಥವಾ ರಾಜ್ಯ ಸರಕಾರದ ಅಧೀನ ಸಂಸ್ಥೆಗಳಿಂದ ಹೂಡಿಕೆ ಮಾಡಿಸಿ, ವಿವಿಧ ಉತ್ಪನ್ನಗಳ ಘಟಕ ಸ್ಥಾಪನೆ ಮಾಡಲಾಗುತ್ತದೆ. ಕೈದಿಗಳಿಗೆ ತರಬೇತಿ ನೀಡಿ, ಬಳಿಕ ಅದೇ ಘಟಕದಲ್ಲಿ ಉದ್ಯೋಗ ನೀಡಲಾಗುತ್ತದೆ. ಇದರಿಂದ ಕೈದಿಗಳ ದುಡಿಮೆಯೂ ಹೆಚ್ಚಾಗುತ್ತದೆ. ಶಿಕ್ಷೆ ಮುಗಿಸಿ ಬಿಡುಗಡೆಯಾದ ಬಳಿಕವೂ ಈ ವೃತ್ತಿಯಲ್ಲಿ ಮುಂದುವರಿಯಲು ಅನುಕೂಲವಾಗುತ್ತದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ಶೂ ಕಾರ್ಖಾನೆ, ಫ‌ರ್ನಿಚರ್‌ ತಯಾರಿ ಘಟಕ ಸ್ಥಾಪನೆ?

ತಮಿಳುನಾಡಿನ ಜೈಲಿನಲ್ಲಿ ಶೂ ಉತ್ಪಾದನ ಘಟಕ ತೆರೆಯಲಾಗಿದ್ದು, ಅಲ್ಲಿನ ಸರಕಾರಿ ಶಾಲೆ, ಕೆಲವು ಇಲಾಖೆಗಳಿಗೆ ಶೂಗಳನ್ನು ಪೂರೈಕೆ ಮಾಡು ತ್ತಿದೆ. ರಾಜ್ಯದ ಜೈಲುಗಳಲ್ಲಿಯೂ ಶೂ, ಫ‌ರ್ನಿಚರ್‌ ತಯಾರಿ ಘಟಕ, ಗಾರ್ಮೆಂಟ್ಸ್‌ ಸ್ಥಾಪಿಸಲಾಗುತ್ತದೆ. ಆಯಾ ಜಿಲ್ಲೆಯಲ್ಲಿ ಹೆಚ್ಚು ಬೇಡಿಕೆ ಇರುವ ಉತ್ಪನ್ನಗಳಿಗೆ ಒತ್ತು ನೀಡಲು ಇಲಾಖೆ ಸಿದ್ಧತೆ ನಡೆಸಿದೆ ಎಂದು ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

  ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next