ಹೊಸದಿಲ್ಲಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸಮರ್ಥಿಸಿಕೊಂಡಿದ್ದು,”ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಲಾಗುವ ಸುಂಕ ಕೋವಿ ಡ್ ಸಂಕಷ್ಟದ ಸಮಯದಲ್ಲಿ ಕೋಟ್ಯಂತರ ಜನರಿಗೆ ಉಚಿತ ಕೋವಿಡ್ ಲಸಿಕೆಗಳು, ಊಟ ಮತ್ತು ಅಡುಗೆ ಅನಿಲವನ್ನು ಒದಗಿಸುವ ಸರಕಾರಿ ಕಾರ್ಯಕ್ರಮಗಳನ್ನು ಬೆಂಬಲಿಸಲು ಸಹಾಯ ಮಾಡಿದೆ” ಎಂದಿದ್ದಾರೆ.
ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಹರ್ ದೀಪ್ ಸಿಂಗ್ ,’ವಿವಿಧ ಕಾರಣಗಳಿಗಾಗಿ ತೈಲ ಬೆಲೆ ಏರಿಕೆಯಾಗಿದ್ದು, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ದರಗಳಿಗೆ ನೇರ ಸಂಪರ್ಕವಿದೆ, ಅದನ್ನು ಪರಿಗಣಿಸಬೇಕಾಗಿದೆ’ ಎಂದರು.
”ನಮ್ಮ ದೇಶದಲ್ಲಿ ನಾವು ಸರಳವಾದ ರಾಜಕೀಯ ನಿರೂಪಣೆ ಪಡೆಯಬಹುದು, ಸುಂಕ ಕಡಿಮೆ ಮಾಡಿ ಎಂದು ಹೇಳಬಹುದು. ಆದರೆ, ಪ್ರತೀ ಬಾರಿ ಅದರದ್ದೇ ಆದ ಕಾರಣಕ್ಕೆ ಬೆಲೆ ಏರಿಕೆ ಆಗುತ್ತಿದೆ” ಎಂದರು.
”ನಾವು 1 ಬಿಲಿಯನ್ ಕೋವಿಡ್ ಲಸಿಕೆಗಳನ್ನು ಪೂರೈಸಿದ್ದೇವೆ, ಕೋವಿಡ್ ಸಮಯದಲ್ಲಿ 90 ಕೋಟಿ ಜನರಿಗೆ ಮೂರು ಹೊತ್ತು ಆಹಾರ ದೊರಕುವಂತೆ ಮಾಡಿದ್ದೇವೆ. ಉಜ್ವಲಾ ಯೋಜನೆಯ ಮೂಲಕ 8 ಕೋಟಿ ಜನರಿಗೆ ಉಚಿತ ಎಲ್ ಪಿಜಿ ಸಿಲಿಂಡರ್ ಒದಗಿಸಿದ್ದೇವೆ” ಎಂದರು.
”ತೆರಿಗೆ ಹಣವನ್ನು ರಸ್ತೆಗಳ ನೀರ್ಮಾಣಕ್ಕೆ , ಕಲ್ಯಾಣ ಕಾರ್ಯಕ್ಕೆ ಬಳಕೆ ಮಾಡುತ್ತೇವೆ. ಇದಕ್ಕಿಂತ ಹೆಚ್ಚಿನ ವಿವರಗಳನ್ನು ನೀಡಲು, ನಾನೇನು ಹಣಕಾಸು ಸಚಿವನಲ್ಲ,ಪೆಟ್ರೋಲ್ ಮೇಲಿನ ತೆರಿಗೆ ಇಳಿಸುವುದು ಕಷ್ಟ, ನಾವು ಸಂಗ್ರಹಿಸುವ ಲೀಟರ್ ಮೇಲಿನ 32 ರೂಪಾಯಿ ತೆರಿಗೆ ನಮಗೆ 1 ಬಿಲಿಯನ್ ಲಸಿಕೆಗಳನ್ನು ಒಳಗೊಂಡಂತೆ ಎಲ್ಲಾ ಕಲ್ಯಾಣ ಸೇವೆಗಳನ್ನು ಒದಗಿಸುವ ಸಾಮರ್ಥ್ಯವನ್ನು ಒದಗಿಸಿದೆ” ಎಂದರು.
ಪೆಟ್ರೋಲ್, ಡೀಸೆಲ್ ಬೆಲೆ ಶುಕ್ರವಾರವೂ ತಲಾ 35 ಪೈಸೆಯೇರಿಕೆಯಾಗಿದೆ. ಸತತ 3ನೇ ದಿನ ಆಗುತ್ತಿರುವ ಏರಿಕೆಯಿದು. ಹೊಸ ಏರಿಕೆಯ ಪರಿಣಾಮ ದೆಹಲಿಯಲ್ಲಿ ಲೀ. ಪೆಟ್ರೋಲ್ ಬೆಲೆ 106.89, ಡೀಸೆಲ್ ಬೆಲೆ 95.62 ರೂ.ಗಳಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 112.78 ರೂ.,ಡೀಸೆಲ್ ಬೆಲೆ 103.63 ರೂ.ಗಳಾಗಿದೆ. ಬೆಂಗಳೂರಿನಲ್ಲಿ ಲೀ.ಪೆಟ್ರೋಲ್ ಬೆಲೆ 36 ಪೈಸೆ ಏರಿ, 110.61 ರೂ.ಗೆ ಮುಟ್ಟಿದೆ. ಡೀಸೆಲ್ ಬೆಲೆ 37 ಪೈಸೆ ಏರಿ 101.49 ರೂ.ಗಳಾಗಿದೆ.