Advertisement

ಸತತ ಎರಡನೇ ದಿನ ಪೆಟ್ರೋಲ್-‌ ಡೀಸೆಲ್‌ ಬೆಲೆ ಏರಿಕೆ; ತಿಂಗಳಲ್ಲಿ 8 ಬಾರಿ ಬೆಲೆ ಬದಲಾವಣೆ

04:35 PM Jan 23, 2021 | Team Udayavani |

ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಂದು ಮತ್ತೆ ಹೆಚ್ಚಳವಾಗಿದೆ. ಸರಕಾರಿ ತೈಲ ಕಂಪೆನಿಗಳು ಸತತ ಎರಡನೇ ದಿನ ಜನವರಿ 23ರ ಶನಿವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿವೆ. ಇದರಿಂದಾಗಿ ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ 100 ರೂ. ನ ಸಮೀಪ ತಲುಪಿದಂತಾಗಿದೆ.

Advertisement

ರಾಜಸ್ಥಾನದ ಗಂಗಾ ನಗರದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 97.50 ರೂ. ನಷ್ಟಿದ್ದು, ಇದು ದೇಶದ ಅತೀ ದುಬಾರಿ ದರವಾಗಿದೆ. ಭೋಪಾಲ್‌ನಲ್ಲಿ 93.56 ರೂ., ಮುಂಬಯಿಯಲ್ಲಿ 92.28 ರೂ. ಇದೆ.

ದಿಲ್ಲಿಯಲ್ಲಿ ಡೀಸೆಲ್ ಬೆಲೆ 26 ಪೈಸೆ ಮತ್ತು ಪೆಟ್ರೋಲ್ ಬೆಲೆ ಲೀಟರ್‌ಗೆ 25 ಪೈಸೆ ಹೆಚ್ಚಾಗಿದೆ. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 85.70 ರೂ. ಮತ್ತು ಡೀಸೆಲ್ 75.88 ರೂ. ನಷ್ಟಿದೆ. ಶುಕ್ರವಾರವಷ್ಟೇ ಡೀಸೆಲ್-ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಲಾಗಿತ್ತು.

ಜನವರಿ ತಿಂಗಳೊಂದರಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 8 ಬಾರಿ ಹೆಚ್ಚಾಗಿದೆ. ಅಂದರೆ ಪೆಟ್ರೋಲ್ ಪ್ರತೀ ಲೀಟರ್‌ಗೆ 1.99 ರೂ. ತುಟ್ಟಿಯಾದಂತಾಗಿದೆ. ಇನ್ನು ಡಿಸೇಲ್‌ ಈ ತಿಂಗಳಿನಲ್ಲಿ ಲೀಟರ್‌ಗೆ 2.01 ರೂ.ಗಳಷ್ಟು ದುಬಾರಿಯಾಗಿದೆ. ಡಿಸೆಂಬರ್ 7ರಂದು ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 83.71 ರೂ. ಮತ್ತು ಡೀಸೆಲ್ ಲೀಟರ್ 73.87 ರೂ.ಗೆ ಮಾರಾಟವಾಗಿತ್ತು. ಅನಂತರ ಅವುಗಳ ಬೆಲೆಯನ್ನು 29 ದಿನಗಳ ವರೆಗೆ ಹೆಚ್ಚಿಸಲಾಗಿಲ್ಲ. ಬಳಿಕ ಜನವರಿ 6 ರಂದು ಮೊದಲ ಬಾರಿಗೆ ಬೆಲೆಗಳನ್ನು ಹೆಚ್ಚಿಸಲಾಯಿತು.

ಅಬಕಾರಿ ಸುಂಕ ಹೆಚ್ಚಳ ಪರಿಣಾಮ
ಕೋವಿಡ್‌ ಅವಧಿಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್  ನಡುವೆಯೇ ಮೇ 6ರಂದು, ಅಬಕಾರಿ ಸುಂಕವನ್ನು ಪ್ರತೀ ಲೀಟರ್‌ ಪೆಟ್ರೋಲ್‌ಗೆ 10 ರೂ. ಮತ್ತು ಡೀಸೆಲ್‌ಗೆ 13 ರೂ.ನಂತೆ ಹೆಚ್ಚಿಸಲಾಗಿತ್ತು. ತೈಲ ಮಾರುಕಟ್ಟೆ ಕಂಪೆನಿಗಳಾದ ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಸಂಸ್ಥೆಗಳು ಪೆಟ್ರೋಲ್-ಡೀಸೆಲ್ ಮೇಲೆ ವಿಧಿಸಲಾದ ಹೆಚ್ಚಿನ ಸುಂಕವನ್ನು ಭರಿಸಲಿವೆ. ಹೀಗಾಗಿ ಅದು ಗ್ರಾಹಕರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸರಕಾರ ಅಂದು ಹೇಳಿತ್ತು. ಆದರೆ ಮೇ 6ರಂದು ಹೊಸದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತೀ ಲೀಟರ್‌ಗೆ 71.26 ರೂ.ನಷ್ಟಿತ್ತು. ಈಗ ಅವುಗಳ ಬೆಲೆ 85.70 ರೂ.ಗೆ ಏರಿಕೆಯಾಗಿದೆ. 69.39 ರೂ.ಗೆ ಮಾರಾಟವಾಗುತ್ತಿದ್ದ ಡೀಸೆಲ್ ಈಗ 75.88 ರೂ.ಗೆ ಮಾರಾಟವಾಗುತ್ತಿದೆ.

Advertisement

ಸುಂಕಗಳೇ ದುಬಾರಿಯಾಗುತ್ತಿವೆ?
ಕಚ್ಚಾ ತೈಲದಿಂದ ಪೆಟ್ರೋಲ್-ಡೀಸೆಲ್‌ಗಳು ಗ್ರಾಹಕರಿಗೆ ದೊರೆಯುವ ಮಧ್ಯೆ ಇಂಧನ ವಿಪರೀತ ದರ ಏರಿಕೆಯನ್ನು ಕಾಣುತ್ತದೆ. ಕಚ್ಚಾತೈಲ ಹೊರ ದೇಶದಿಂದ ಬರುತ್ತದೆ. ಬಳಿಕ ಸಂಸ್ಕರಣಾ ಘಟಕಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಪ್ರತ್ಯೇಕಿಸಲಾಗುತ್ತದೆ. ಅಲ್ಲಿಂದ ಅವುಗಳು ತೈಲ ಕಂಪೆನಿಗಳಿಗೆ ಹೋಗುತ್ತದೆ. ತೈಲ ಕಂಪೆನಿಗಳು (ಡೀಲರ್‌ಗಳು) ಇವನ್ನು ಪೆಟ್ರೋಲ್ ಪಂಪ್‌ಗಳಿಗೆ ತಲುಪಿಸುತ್ತವೆ. ಇಲ್ಲಿ ಡೀಲರ್‌ಗಳಿಗೆ ಅವರ ಲಾಭವನ್ನು ಇಟ್ಟುಕೊಂಡು ಮಾರಾಟ ಮಾಡಲಾಗುತ್ತದೆ. ಪೆಟ್ರೋಲ್ ಪಂಪ್‌ಗೆ ಬಂದ ಬಳಿಕ ಕೇಂದ್ರ ಮತ್ತು ರಾಜ್ಯ ಸರಕಾರವು ನಿರ್ಧರಿಸುವ ತೆರಿಗೆಯನ್ನು ಸೇರಿಸಲಾಗುತ್ತದೆ. ಹೀಗಾಗಿ ಒಟ್ಟು ಸುಂಕಗಳ ಮೊತ್ತವನ್ನು ಸೇರಿಸಿ ಮಾರಾಟ ಮಾಡಲಾಗುತ್ತದೆ.

ಕೇಂದ್ರ ಸರಕಾರದ ಅಬಕಾರಿ ಸುಂಕವನ್ನು ವಿಧಿಸುವುದರ ಹೊರತಾಗಿ, ರಾಜ್ಯ ಸರಕಾಗಳು ಸಹ ವ್ಯಾಟ್ ವಿಧಿಸುವ ಮೂಲಕ ಇದರಿಂದ ಆದಾಯ ಗಳಿಸುತ್ತವೆ. ವ್ಯಾಟ್‌ ಅಂದರೆ ಮೌಲ್ಯವರ್ಧಿತ ತೆರಿಗೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಗಳಿಗೆ ವ್ಯಾಟ್ ದರವೂ ಬದಲಾಗುತ್ತದೆ. ರಾಜಸ್ಥಾನ ಸರಕಾರವು ಇಡೀ ದೇಶದಲ್ಲಿ ಅತೀ ಹೆಚ್ಚು ವ್ಯಾಟ್ ವಿಧಿಸುತ್ತದೆ. ಇಲ್ಲಿ ಪೆಟ್ರೋಲ್ ಮೇಲೆ ಶೇ. 38 ಮತ್ತು ಡೀಸೆಲ್ ಮೇಲೆ ಶೇ. 28 ತೆರಿಗೆ ವಿಧಿಸಲಾಗುತ್ತದೆ.

ಉದಾಹರಣೆಗೆ
ಪೆಟ್ರೋಲ್: ಮೂಲ ಬೆಲೆ 28.03 ರೂ., ಬಾಡಿಗೆ 0.37 ರೂ., ಅಬಕಾರಿ ಸುಂಕ 32.98 ರೂ., ಡೀಲರ್‌ಗಳ ಕಮಿಷನ್‌ 3.67 ರೂ., ವ್ಯಾಟ್ 19.55 ರೂ., ಒಟ್ಟು ಬೆಲೆ 84.70 ರೂ..
ಡಿಸೇಲ್‌: ಮೂಲ ಬೆಲೆ 29.19 ರೂ., ಬಾಡಿಗೆ 0.34 ರೂ., ಅಬಕಾರಿ ಸುಂಕ 31.83 ರೂ., ಡೀಲರ್‌ಗಳ ಕಮಿಷನ್‌ 2.53 ರೂ., ವ್ಯಾಟ್ 10.99 ರೂ., ಒಟ್ಟು ಬೆಲೆ 74.88 ರೂ.

(ಈ ಅಂಕಿಅಂಶಗಳು ಜನವರಿ 16ರ ದಿಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆವನ್ನು ಆಧರಿಸಿವೆ)

Advertisement

Udayavani is now on Telegram. Click here to join our channel and stay updated with the latest news.

Next