ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಇಳಿಕೆಯು ಭಾರತದ ಗ್ರಾಹಕರ ಹೊರೆಯನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದೇ?
ಜಾಗತಿಕ ಕಚ್ಚಾ ತೈಲ ದರ ಇಳಿಕೆ ಹಿನ್ನೆಲೆಯಲ್ಲಿ ಸದ್ಯದಲ್ಲೇ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಲೀಟರ್‌ಗೆ ತಲಾ 2 ರೂ. ಇಳಿಕೆ ಮಾಡುವ ಸಾಧ್ಯತೆಯಿದೆ.
ಮುಂದಿನ 5 ದಿನಗಳ ಕಾಲ ಪ್ರತಿದಿನ ಲೀಟರ್‌ಗೆ ತಲಾ 40 ಪೈಸೆಯಂತೆ ತೈಲ ದರದಲ್ಲಿ ಇಳಿಕೆಯಾಗಬಹುದು. ಆ ಮೂಲಕ ಒಟ್ಟಾರೆ ಲೀ.ಗೆ 2 ರೂ.ಗಳಷ್ಟು ಕಡಿತವಾಗಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ “ಸಿಎನ್‌ಬಿಸಿ ಆವಾಜ್’ ವರದಿ ಮಾಡಿದೆ.
ಜತೆಗೆ, ತೈಲದ ದರ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವು ಯಥಾಸ್ಥಿತಿ ಕಾಯ್ದುಕೊಂಡರಷ್ಟೇ ಇದು ಸಾಧ್ಯವಾಗಲಿದೆ ಎನ್ನಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭವಾದ ಬಳಿಕ ತೈಲ ದರದಲ್ಲಿ ಗಣನೀಯ ಏರಿಕೆ ಕಂಡುಬಂದಿತ್ತು. ನಂತರ ಮೇ 22ರಂದು ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು ಕಡಿತಗೊಳಿಸಿತ್ತು. ಅದಾದ ಬಳಿಕ ತೈಲ ದರ ಯಥಾಸ್ಥಿತಿ ಕಾಯ್ದುಕೊಂಡಿದೆ.