ಚಂಡೀಗಢ: ಸಿಎಂ ಭಗವಂತ್ ಸಿಂಗ್ ಮಾನ್ ನೇತೃತ್ವದ ಪಂಜಾಬ್ನ ಆಮ್ ಆದ್ಮಿ ಪಕ್ಷದ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ವ್ಯಾಟ್(ಮೌಲ್ಯವರ್ಧಿತ ತೆರಿಗೆ) ಹೆಚ್ಚಳ ಮಾಡಿದೆ. ಅದರಂತೆ ಪೆಟ್ರೋಲ್ ಬೆಲೆ ಪ್ರತೀ ಲೀಟರ್ಗೆ 61 ಪೈಸೆ, ಡೀಸೆಲ್ ಬೆಲೆ 92 ಪೈಸೆ ಹೆಚ್ಚಳವಾಗಲಿದೆ.
ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ, ಸುಖೀÌಂದರ್ ಸಿಂಗ್ ಸುಖು ನೇತೃತ್ವದ ಹಿಮಾಚಲ ಪ್ರದೇಶ ಸರಕಾರದ ಬಳಿಕ ವಿಪಕ್ಷಗಳ ಆಡಳಿತದ ಮತ್ತೂಂದು ಸರಕಾರವೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆಯೇ ಎಂಬ ಪ್ರಶ್ನೆ ಮೂಡಿದೆ.
ಪಂಜಾಬ್ನಲ್ಲಿ ರಾಜ್ಯ ಸರಕಾರಿ ನೌಕರರ ಆಗಸ್ಟ್ ವೇತನ ಹಾಗೂ ಪಿಂಚಣಿ ಸಹ 4 ದಿನಗಳು ವಿಳಂಬವಾಗಿದ್ದು, ಪಂಜಾಬ್ ಆರ್ಥಿಕ ಸಂಕಷ್ಟದ ಬಗ್ಗೆ ಈಗ ಸಾಕಷ್ಟು ಚರ್ಚೆ ಆರಂಭವಾಗಿದೆ.
ವ್ಯಾಟ್ ಹೆಚ್ಚಳದಿಂದ ಪೆಟ್ರೋಲ್ನಿಂದ 150 ಕೊಟಿ ರೂ., ಡೀಸೆಲ್ನಿಂದ 395 ಕೋಟಿ ರೂ.ನಷ್ಟು ಆದಾಯ ಸರಕಾರಕ್ಕೆ ಬರಲಿದೆ. ರಾಜ್ಯದ ಪ್ರಸ್ತುತ ಆರ್ಥಿಕ ಸವಾಲುಗಳ ಬಗ್ಗೆ ಕಾರ್ಯತಂತ್ರ ರೂಪಿಸಲು ಈ ಸಂಪುಟ ಸಭೆ ಕರೆಯಲಾಗಿತ್ತು ಎಂದು ವರದಿಯಾಗಿದೆ. ಪಂಜಾಬ್ಗ 10 ಸಾವಿರ ಕೋಟಿ ರೂ.ನಷ್ಟು ಕೇಂದ್ರ ಸರಕಾರದ ನಿಧಿ ಬರಲು ಬಾಕಿ ಯಿದೆ. ಹೀಗಾಗಿ ವ್ಯಾಟ್ ಹೆಚ್ಚಳ ಮಾಡಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಿಎಂ ಭಗವಂತ್ ಮಾನ್ ಮುಂದಾಗಿದ್ದಾರೆ ಎಂದು ಸರಕಾರ ತಿಳಿಸಿದೆ.
ವಿದ್ಯುತ್ ಸಬ್ಸಿಡಿಯೂ ಕಡಿತ: ಇದಲ್ಲದೇ ಪ್ರತೀ ಯುನಿಟ್ಗೆ 3 ರೂ. ವಿದ್ಯುತ್ ಸಬ್ಸಿಡಿ ನೀಡುವ ಹಿಂದಿನ ಕಾಂಗ್ರೆಸ್ ಸರಕಾರದ ಯೋಜನೆಯನ್ನೂ ಪಂಜಾಬ್ ಸರಕಾರ ರದ್ದುಗೊಳಿಸಿದೆ. ಇದರಿಂದ ಸರಕಾರಕ್ಕೆ ವರ್ಷಕ್ಕೆ 1,500-1,800 ಕೋಟಿ ರೂ. ಉಳಿತಾಯವಾಗಲಿದೆ ಎಂದು ಹೇಳಲಾಗಿದೆ. ಸರಕಾರದ ನಿರ್ಧಾರಕ್ಕೆ ವಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಆರೋಪ-ಪ್ರತ್ಯಾರೋಪ
ಕೇಂದ್ರ ಸರಕಾರದಿಂದ 10 ಸಾವಿರ ಕೋಟಿ ರೂ. ಬಾಕಿ ಇರುವ ಕಾರಣ ಈ ಕ್ರಮ: ಆಪ್ ಸರಕಾರ
ಆರ್ಥಿಕತೆ ನಿಭಾಯಿಸುವಲ್ಲಿ ಆಪ್ ಸರಕಾರ ವಿಫಲ: ಬಿಜೆಪಿ ಆರೋಪ
ಎರಡೂವರೆ ವರ್ಷಗಳಲ್ಲಿ ಆಪ್ ಪಂಜಾಬ್ ಅನ್ನು ದಿವಾಳಿಯಾಗಿಸಿದೆ ಎಂದು ಕಿಡಿ
ರಾಜ್ಯ ಸರಕಾರಿ ನೌಕರರ ಆಗಸ್ಟ್ ವೇತನ, ಪಿಂಚಣಿ ಸಹ 4 ದಿನಗಳು ವಿಳಂಬ