Advertisement

ಲಾಕ್‌ಡೌನ್‌ ಪರಿಣಾಮ: ಗೃಹಬಳಕೆಯ ಎಲ್‌ಪಿಜಿ ಬಳಕೆಯಲ್ಲಿ ಏರಿಕೆ

11:58 AM Apr 20, 2020 | Hari Prasad |

ಭಾರತದಲ್ಲಿ ಎಲ್ಲೆಲ್ಲೂ ಲಾಕ್‌ಡೌನ್‌ ಪರಿಸ್ಥಿತಿ ಇರುವುದರಿಂದ ಶುದ್ಧೀಕರಿಸಿದ ತೈಲ ಹಾಗೂ ತೈಲೋತ್ಪನ್ನಗಳ ಬೇಡಿಕೆ ಸರಾಸರಿಯಾಗಿ ಶೇ.50ರಷ್ಟು ಕುಸಿದಿದೆ. ಇದೇ ತಿಂಗಳ ಮೊದಲೆರಡು ವಾರದಲ್ಲಿ ಈ ಕುಸಿತ ಕಂಡುಬಂದಿದೆ.

Advertisement

ಇನ್ನೊಂದು ಅರ್ಥದಲ್ಲಿ ಪೆಟ್ರೋಲ್‌, ಡೀಸೆಲ್‌ ಸಂಗ್ರಹ ಜಾಸ್ತಿಯಾಗಿದೆ! ಆದರೆ, ಎಲ್ಲರೂ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಬಂದೊಂದಗಿರುವುದರಿಂದ ಮನೆಗಳಿಗೆ ವಿತರಿಸಲಾಗುವ ಎಲ್‌ಪಿಜಿಯ ಬೇಡಿಕೆಯಲ್ಲಿ ಶೇ.21ರಷ್ಟು ಹೆಚ್ಚಾಗಿದೆ.

ತೈಲ, ತೈಲೋತ್ಪನ್ನಗಳು ಎಂದರೇನು?
ತೈಲ ಎಂದ ಕೂಡಲೇ ಸಾಮಾನ್ಯವಾಗಿ ನಾವು ಪೆಟ್ರೋಲ್‌, ಡೀಸೆಲ್‌ ಎಂದು ಪರಿಗಣಿಸುತ್ತೇವೆ. ಇದರಲ್ಲಿಯೂ ಅತ್ಯುತ್ತಮ ದರ್ಜೆಯ ಪರಿಶುದ್ಧ ಪೆಟ್ರೋಲನ್ನು ಗ್ಯಾಸೋಲಿನ್‌ ಎಂತಲೂ, ಕೆಂಪು ಡೈ ಮಿಶ್ರಿತ ಡೀಸೆಲ್‌ ಅನ್ನು ಗ್ಯಾಸ್‌ ಆಯಿಲ್‌ ಎಂತಲೂ ಕರೆಯಲಾಗುತ್ತದೆ. ಇವೂ ಸಹ ಬಳಕೆಯಲ್ಲಿವೆ. ಇನ್ನು, ತೈಲೋತ್ಪನ್ನಗಳು ಎಂದರೆ ಎಲ್‌ಪಿಜಿ, ಬಿಟುಮನ್‌ (ಡಾಂಬರ್‌ ಮಾದರಿಯ ಉತ್ಪನ್ನ) ಕೂಡಾ ಸೇರುತ್ತವೆ.

ಬೇಡಿಕೆಯಲ್ಲಿ ಎಷ್ಟೆಷ್ಟು ಕಡಿಮೆ?
ಕಳೆದ ವರ್ಷದ ಎಪ್ರಿಲ್‌ನ ಮೊದಲೆರಡು ವಾರಕ್ಕೆ ಹೋಲಿಸಿದರೆ ಈ ವರ್ಷ ಅದೇ ಅವಧಿಯಲ್ಲಿ ಡೀಸೆಲ್‌ (ಗ್ಯಾಸ್‌ ಆಯಿಲ್‌) ಮಾರಾಟ ಶೇ. 61ರಷ್ಟು ಇಳಿಮುಖವಾಗಿದ್ದರೆ, ಗ್ಯಾಸೋಲಿನ್‌ (ಪರಿಶುದ್ಧ ಪೆಟ್ರೋಲ್‌) ಹಾಗೂ ಜೆಟ್‌ ಇಂಧನದ ಮಾರಾಟ ಕ್ರಮವಾಗಿ ಶೇ. 64 ಹಾಗೂ ಶೇ. 94ರಷ್ಟು ತಗ್ಗಿದೆ ಎಂದು ಈ ಕ್ಷೇತ್ರದ ಪರಿಣತರು ತಿಳಿಸಿದ್ದಾರೆ. ಇದು ಮುಂದುವರಿದು ಪೆಟ್ರೋಲ್‌ ಮಾರಾಟ ಈ ವರ್ಷ ಒಟ್ಟಾರೆಯಾಗಿ ಶೇ.9ರಷ್ಟು ಹಾಗೂ ಡೀಸೆಲ್‌ ಬೇಡಿಕೆ ಶೇ. 6.1ರಷ್ಟು ತಗ್ಗಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.

LPG ಬಳಕೆ ಏರಿಕೆ
ಕಳೆದ ವರ್ಷದ ಎಪ್ರಿಲ್‌ನ ಮೊದಲೆರಡು ವಾರಗಳಿಗೆ ಹೋಲಿಸಿದರೆ, ಈ ವರ್ಷ ಅದೇ ಅವಧಿಯಲ್ಲಿ ಸರಕಾರಿ ಸ್ವಾಮ್ಯದ ಕಂಪೆನಿಗಳು ಶೇ. 24ರಷ್ಟು ಹೆಚ್ಚು ಎಲ್‌ಪಿಜಿಯನ್ನು ಮಾರಾಟ ಮಾಡಿವೆ. ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಯಲ್ಲಿ ಇರುವಂತಾಗಿರುವುದು ಇದಕ್ಕೆ ಒಂದು ಕಾರಣವಾದರೆ, ಕೇಂದ್ರ ಸರಕಾರ ಬಡವರಿಗೆ, ಕೂಲಿಕಾರ್ಮಿಕರಿಗೆ ಮುಂದಿನ ಮೂರು ತಿಂಗಳವರೆಗೆ ಉಚಿತ ಪಡಿತರ, ಎಲ್‌ಪಿಜಿ ನೀಡಿರುವುದು ಮತ್ತೂಂದು ಕಾರಣವಾಗಿದೆ.

Advertisement

ತೈಲ ಕ್ಷೇತ್ರದಲ್ಲಿ ಸರಕಾರದ ಹಿಡಿತ
ಭಾರತೀಯ ತೈಲ ಕ್ಷೇತ್ರದಲ್ಲಿ ಸರಕಾರಿ ಸ್ವಾಮ್ಯದ ಕಂಪೆನಿಗಳದ್ದೇ ಕಾರುಬಾರು. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಹಿಂದೂಸ್ತಾನ್‌ ಪೆಟ್ರೋಲಿಯಂ, ಭಾರತ್‌ ಪೆಟ್ರೋಲಿಯಂ ಕಂಪೆನಿಗಳು, ದೇಶದ ಒಟ್ಟಾರೆ ಬೇಡಿಕೆಯಲ್ಲಿ ಶೇ. 90ರಷ್ಟು ಅವಶ್ಯಕತೆಯನ್ನು ಪೂರೈಸುತ್ತಿವೆ.

ಪೆಟ್ರೋಲ್‌ ಮಾರಾಟದಲ್ಲಿ ಆಗಿರುವ ಇಳಿಮುಖ: ಶೇ. 64

ಡೀಸೆಲ್‌ ಮಾರಾಟದಲ್ಲಿ ಆಗಿರುವ ಇಳಿಕೆ: ಶೇ. 61

ಜೆಟ್‌ ಇಂಧನದ ಮಾರಾಟ ತಗ್ಗಿರುವ ಪ್ರಮಾಣ: ಶೇ. 94

ಪ್ರಸಕ್ತ ವರ್ಷ ದೇಶದಲ್ಲಿ ಕುಸಿಯಲಿರುವ ಒಟ್ಟಾರೆ ಬೇಡಿಕೆಯ ಅಂದಾಜು: ಶೇ. 5.6

Advertisement

Udayavani is now on Telegram. Click here to join our channel and stay updated with the latest news.

Next