Advertisement

ಚೆಕ್‌ಪೋಸ್ಟ್‌ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ

12:30 AM Feb 18, 2019 | Team Udayavani |

ಚಿಕ್ಕಮಗಳೂರು: ಇಲ್ಲಿಗೆ ಸಮೀಪದ ಬಸರೀಕಲ್‌ ಅರಣ್ಯ ಚೆಕ್‌ಪೋಸ್ಟ್‌ ಮೇಲೆ ಭಾನುವಾರ ಬೆಳಗಿನ ಜಾವ ದುಷ್ಕರ್ಮಿಗಳು ಪೆಟ್ರೋಲ್‌ ಬಾಂಬ್‌ ಸಿಡಿಸಿದ್ದಾರೆ. ನಕ್ಸಲ್‌ ಪೀಡಿತ ಪ್ರದೇಶ ಎಂದು ಗುರುತಿಸಲ್ಪಟ್ಟ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಸರೀಕಲ್‌ ಅರಣ್ಯ ಚೆಕ್‌ ಪೋಸ್ಟ್‌ ಮೇಲೆ ದಾಳಿ ನಡೆದಿದ್ದು, ಅದೃಷ್ಟವಶಾತ್‌ ಹೆಚ್ಚಿನ ಹಾನಿಯಾಗಿಲ್ಲ. ಇದು ನಕ್ಸಲರ ಕೃತ್ಯ ಇರಬಹುದೆಂಬ ಸಂಶಯ ಮೂಡಿದೆ. ಅಲ್ಲದೆ, ಕಾಡುಗಳ್ಳರು ಅಥವಾ ಅಕ್ರಮ ಗೋ ಸಾಗಣೆ ಮಾಡುವವರು ಈ ಕೃತ್ಯ ಎಸಗಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.

Advertisement

ಐದು ಪೆಟ್ರೋಲ್‌ ಬಾಂಬ್‌: ದುಷ್ಕರ್ಮಿಗಳು ಭಾನುವಾರ ಬೆಳಗಿನ ಜಾವ 3.30ರ ಸುಮಾರಿಗೆ ಒಟ್ಟು 5 ಪೆಟ್ರೋಲ್‌ ಬಾಂಬ್‌ಗಳನ್ನು ಸಿಡಿಸಿದ್ದಾರೆ. ಪೆಟ್ರೋಲ್‌ ಬಾಂಬ್‌ ಎಸೆದ ಸಂದರ್ಭದಲ್ಲಿ ಚೆಕ್‌ ಪೋಸ್ಟ್‌ ಒಳಗೆ ಯಾರೂ ಇಲ್ಲದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಚೆಕ್‌ಪೋಸ್ಟ್‌ ಒಳಗೆ ಸಿಬ್ಬಂದಿ ಕೂರುತ್ತಿದ್ದ ಸ್ಥಳದ ಮೇಲೆ ನೇರವಾಗಿ ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯಲಾಗಿದೆ. ಇದರ ಪರಿಣಾಮ ಕೆಲವೊಂದು ದಾಖಲೆಗಳು ಸುಟ್ಟು ಹೋಗಿವೆ.

ಭಾನುವಾರ ರಾತ್ರಿ ಚೆಕ್‌ಪೋಸ್ಟ್‌ನಲ್ಲಿ ಇಬ್ಬರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಾಂಬ್‌ ದಾಳಿ ನಡೆಯುವ ಸ್ವಲ್ಪ ಮೊದಲು ಓರ್ವ ಸಿಬ್ಬಂದಿ ಹೊರಗೆ ಹೋಗಿದ್ದರು. ನಂತರ ಮತ್ತೂಬ್ಬರು ಮೂತ್ರ ವಿಸರ್ಜನೆಗೆಂದು ಹೊರಗೆ ಬಂದಿದ್ದರು. ಆ ಸಂದರ್ಭದಲ್ಲಿಯೇ ಈ ದಾಳಿ ನಡೆದಿದೆ.

ದುಷ್ಕರ್ಮಿಗಳು ಖಾಲಿ ಬಾಟಲಿಗೆ ಮರಳನ್ನು ತುಂಬಿ ಅದರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಎಸೆದಿದ್ದಾರೆ. ಬಾಂಬ್‌ ಸಿಡಿಸಿರುವ ವಿಚಾರ ತಿಳಿದ ಕೂಡಲೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶಿಲ್ಪಾ ಸೇರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಇದು ನಕ್ಸಲ್‌ ಪೀಡಿತ ಪ್ರದೇಶವಾಗಿರುವುದರಿಂದ ನಕ್ಸಲರೇ ಪೆಟ್ರೋಲ್‌ ಬಾಂಬ್‌ ಸಿಡಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರದೇಶಗಳಲ್ಲಿ ಎಲ್ಲಿಯೂ ನಕ್ಸಲರ ಚಟುವಟಿಕೆ ಕಂಡು ಬಂದಿಲ್ಲ. ಹೀಗಾಗಿ, ಬೇರೆ ಯಾರೋ ಈ ಕೃತ್ಯ ಎಸಗಿರಬಹುದು ಎಂದೂ ಹೇಳಲಾಗುತ್ತಿದೆ. ತನಿಖೆ ನಂತರವೇ ಸತ್ಯ ಬಹಿರಂಗವಾಗಬೇಕಿದೆ. ಆದರೆ ಘಟನೆ ನಂತರ ನಕ್ಸಲ್‌ ನಿಗ್ರಹ ದಳದವರು ಕೂಂಬಿಂಗ್‌ ತೀವ್ರಗೊಳಿಸಿದ್ದಾರೆ.

ಬಸರೀಕಲ್‌ ಅರಣ್ಯ ಚೆಕ್‌ಪೋಸ್ಟ್‌ ಮೇಲೆ 5 ಪೆಟ್ರೋಲ್‌ ಬಾಂಬ್‌ ಗಳನ್ನು ಸಿಡಿಸಲಾಗಿದೆ. ಬಾಂಬ್‌ ಎಸೆದವರು ಸ್ಥಳೀಯ ದುಷ್ಕರ್ಮಿಗಳು ಎಂಬ ಅನುಮಾನ ಬಂದಿದೆ. ಪ್ರಕರಣ ಕುರಿತು ತನಿಖೆ ಆರಂಭಿಸಲಾಗಿದೆ.ಬಾಂಬ್‌ ಎಸೆದವರು ನಕ್ಸಲರು ಎಂಬುದಕ್ಕೆ ಯಾವುದೇ ಸಾಕ್ಷಿಗಳು
ದೊರೆತಿಲ್ಲ.
– ಹರೀಶ್‌ ಪಾಂಡೆ, ಜಿಲ್ಲಾ
ಪೊಲೀಸ್‌ ವರಿಷ್ಠಾಧಿಕಾರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next