Advertisement
ರಾಜ್ಯ ಸರ್ಕಾರ ಪೆಟ್ರೋಲ್ ಮೇಲೆ ವಿಧಿಸುತ್ತಿದ್ದ ಸೆಸ್ ಶೇ. 3.25ರಷ್ಟು ಮತ್ತು ಡೀಸೆಲ್ ಮೇಲಿನ ಸೆಸ್ ಶೇ. 3.27ರಷ್ಟು ಇಳಿಕೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಮಂಗಳವಾರದಿಂದ ಹೊಸ ದರ ಜಾರಿಗೆ ಬರಲಿದೆ. ಇದರೊಂದಿಗೆ ಗೋವಾ ಹೊರತುಪಡಿಸಿ ದಕ್ಷಿಣ ಭಾರತದಲ್ಲೇ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಅತಿ ಕಡಿಮೆ ಎನ್ನುವಂತಾಗಿದೆ.
Related Articles
Advertisement
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರುಮುಖದಲ್ಲಿ ಸಾಗುತ್ತಿದ್ದು, ಇದನ್ನು ಖಂಡಿಸಿ ಕಳೆದ ಸೋಮವಾರ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಭಾರತ್ ಬಂದ್‌ಗೆ ಕರೆ ನೀಡಿದ್ದವು. ಅಂದು ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವ ಉದ್ದೇಶದಿಂದ ಸೆಸ್ ಕಡಿಮೆ ಮಾಡುವ ಬಗ್ಗೆ ಪ್ರಕಟಿಸಿದ್ದರಲ್ಲದೆ, ಈ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು. ಈ ಮಧ್ಯೆ ಮಿತ್ರಪಕ್ಷ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ತೆರಿಗೆ ಇಳಿಸುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದರು.
ಬೆಂಗಳೂರಿಗೆ ವಾಪಸಾದ ಬಳಿಕ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿಗಳು, ದರ ಇಳಿಕೆ ಕುರಿತು ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚಿಸಿದ್ದರು. ಅದರಂತೆ ಅಧಿಕಾರಿಗಳು ಸಿದ್ಧಪಡಿಸಿದ ಪ್ರಸ್ತಾವನೆ ಆಧರಿಸಿ ಸೋಮವಾರ ದರ ಇಳಿಕೆ ಆದೇಶ ಹೊರಡಿಸಲಾಗಿದೆ. ಜತೆಗೆ ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿದಲ್ಲಿ ಮತ್ತೆ ತೆರಿಗೆ ದರ ಪರಿಷ್ಕರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದೂ ಸರ್ಕಾರ ಹೇಳಿದೆ.
ಮಂಗಳವಾರದ ದರ (ರಾಷ್ಟ್ರ ಮಟ್ಟದಲ್ಲಿ ದರ ಬದಲಾವಣೆ ಆಗದಿದ್ದಲ್ಲಿ)ಸ್ಥಳ ಪೆಟ್ರೋಲ್ ಡೀಸೆಲ್
ಬೆಂಗಳೂರು (ಕರ್ನಾಟಕ) 82.80 ರೂ. 74.21 ರೂ.
ಹೊಸೂರು (ತಮಿಳುನಾಡು) 86.98 ರೂ. 79.58 ರೂ.
ಕಾಸರಗೋಡು (ಕೇರಳ) 84.93 ರೂ. 78.53 ರೂ.
ಅನಂತಪುರ (ಆಂಧ್ರಪ್ರದೇಶ) 86.47 ರೂ. 79.37 ರೂ.
ಹೈದರಾಬಾದ್ (ತೆಲಂಗಾಣ) 87.01 ರೂ. 80.25 ರೂ.
ಕಾಗಲ್ (ಮಹಾರಾಷ್ಟ್ರ) 89.71 ರೂ. 77.40 ರೂ.
ಪಣಜಿ (ಗೋವಾ) 75.60 ರೂ. 75.09 ರೂ.