ನವದೆಹಲಿ:ನಿರೀಕ್ಷೆಯಂತೆ ಐದು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ತೈಲ ಬೆಲೆ ಪರಿಷ್ಕರಣೆಗೆ ಮುಂದಾದ ಹಿನ್ನೆಲೆಯಲ್ಲಿ ಸತತ ನಾಲ್ಕನೇ ದಿನವೂ ತೈಲ ಬೆಲೆ ಏರಿಕೆಯಾಗಿದ್ದು, ರಾಜಸ್ಥಾನ್ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಪೆಟ್ರೋಲ್ ಲೀಟರ್ ಬೆಲೆ ನೂರು ರೂಪಾಯಿ ದಾಟಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಉದಯವಾಣಿ ವರದಿ ಬೆನ್ನಲ್ಲೇ ಗಂಗಾವತಿಯ ಬಟ್ಟೆ ಅಂಗಡಿಗಳ ಕದ್ದು ಮುಚ್ಚಿ ವ್ಯಾಪಾರಕ್ಕೆ ಬ್ರೇಕ್
ಶುಕ್ರವಾರ (ಮೇ 07) ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಬೆಲೆ ಲೀಟರ್ ಗೆ 28ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 31 ಪೈಸೆ ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 91.27 ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 81.73 ರೂ,ಗೆ ಹೆಚ್ಚಳವಾಗಿದೆ.
ಕಳೆದ ನಾಲ್ಕು ದಿನಗಳಲ್ಲಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 87 ಪೈಸೆಯಷ್ಟು ಹಾಗೂ ಡೀಸೆಲ್ ಬೆಲೆ ಒಂದು ರೂಪಾಯಿ ಹೆಚ್ಚಳವಾಗಿತ್ತು ಎಂದು ತಿಳಿಸಿದೆ.
ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 97.61 ರೂಪಾಯಿ, ಡೀಸೆಲ್ ಬೆಲೆ ಲೀಟರ್ ಗೆ 88.82 ರೂಪಾಯಿಗೆ ಹೆಚ್ಚಳವಾಗಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ವೆಬ್ ಸೈಟ್ ನಲ್ಲಿ ಲಭ್ಯವಿರುವ ಅಂಕಿಅಂಶದಲ್ಲಿ ತಿಳಿಸಿದೆ.
ರಾಜಸ್ಥಾನದ ಎರಡು ಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ನೂರು ರೂಪಾಯಿಯ ಗಡಿ ದಾಟಿದೆ ಮತ್ತು ಮಧ್ಯಪ್ರದೇಶದಲ್ಲಿ ತೈಲದ ಮೇಲೆ ಭಾರೀ ಪ್ರಮಾಣದ ವ್ಯಾಟ್ ವಿಧಿಸಿದ ಪರಿಣಾಮ ಅನುಪ್ಪುರ್ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 101.86 ರೂಪಾಯಿ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 92.39ರೂಪಾಯಿಗೆ ಮಾರಾಟವಾಗುತ್ತಿರುವುದಾಗಿ ವರದಿ ವಿವರಿಸಿದೆ.
ರಾಜಸ್ಥಾನದ ಶ್ರೀ ಗಂಗಾನಗರ್ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 102.15 ರೂಪಾಯಿಗೆ ಹೆಚ್ಚಳವಾಗಿರುವುದಾಗಿ ವರದಿ ತಿಳಿಸಿದೆ. ಈ ವರ್ಷ ಎರಡನೇ ಬಾರಿ ದೇಶದ ಕೆಲವು ಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆ ನೂರು ರೂಪಾಯಿ ದಾಟಿದೆ.