Advertisement

ಪೆಟ್ರೋಲ್‌, ಡೀಸೆಲ್‌ ಸದ್ದಿಲ್ಲದೇ ತುಟ್ಟಿ

06:00 AM Dec 28, 2017 | Harsha Rao |

ನವದೆಹಲಿ: ದೇಶಾದ್ಯಂತ ಮತ್ತೆ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಗ್ರಾಹಕರ ಜೇಬು ಸುಡುತ್ತಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಡೀಸೆಲ್‌ ದರ 59.31 ರೂ.ಗೆ ಏರಿಕೆಯಾಗಿದೆ. ಹಿಂದೆ ಎರಡು ಬಾರಿ ಮಾತ್ರ 59ಕ್ಕೆ ತಲುಪಿದ್ದ ಈ ದರ ಇದೀಗ ಸಾರ್ವಕಾಲಿಕವಾಗಿ 59.31 ರೂ.ಗಳಿಗೆ ಏರಿಕೆಯಾಗಿದೆ.

Advertisement

ಇದು ಕೇವಲ ದೆಹಲಿಯ ಮಾತಲ್ಲ, ಪ್ರತಿದಿನವೂ ತೈಲ ದರ ಬದಲಾಗುತ್ತಿರುವುದರಿಂದ ಏರಿಕೆ ಅಥವಾ ಇಳಿಕೆಯ ಪ್ರಮಾಣ ಜನರ ಗಮನಕ್ಕೆ ಬರುತ್ತಿಲ್ಲ. ಹೀಗಾಗಿ ದೇಶದ ವಿವಿಧ ನಗರಗಳಲ್ಲಿ ಡೀಸೆಲ್‌ ದರ 59ರಿಂದ 62 ರೂ.ಗಳ ವರೆಗೆ ಏರಿಕೆಯಾಗಿದ್ದರೂ ಬಹುತೇಕರಿಗೆ ಗೊತ್ತಾಗಿಲ್ಲ.

ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಗೆ ರಷ್ಯಾ ಮತ್ತು ಒಪೆಕ್‌ ದೇಶಗಳಲ್ಲಿ ತೈಲೋತ್ಪಾದನೆಯನ್ನು ಮಿತಗೊಳಿಸಲು ನಿರ್ಧರಿಸಿರುವುದೇ ಕಾರಣ ಎಂದು ಹೇಳಲಾಗುತ್ತಿದೆ.

ಇದಷ್ಟೇ ಅಲ್ಲ, ಅಮೆರಿಕದಲ್ಲಿನ ರಾಜಕೀಯ ಜಂಜಾಟ ಮತ್ತು ಇತ್ತೀಚೆಗಷ್ಟೇ ಅಬ್ಬರಿಸಿದ್ದ ಚಂಡಮಾರುತದ
ಪ್ರಭಾವದಿಂದಾಗಿ ಅಲ್ಲಿನ ತೈಲ ಬಾವಿಗಳಿಂದ ಕಚ್ಚಾ ತೈಲ ತೆಗೆಯುವ ಕೆಲಸವೂ ಆಗುತ್ತಿಲ್ಲ. ಇವೆಲ್ಲವೂ ತೈಲ ದರ ಏರಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಜು.1 ರಂದು ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿ ಮಾಡಿದ ಮೇಲೆ ರಾಜ್ಯ ರಾಜ್ಯಗಳ ನಡುವಿನ ಪ್ರವೇಶ ತೆರಿಗೆ ರದ್ದುಗೊಂಡು ತೈಲೋತ್ಪನ್ನಗಳ ದರದಲ್ಲಿ ದಿಢೀರನೇ ಇಳಿಕೆಯಾಗಿತ್ತು. ಸದ್ಯ ಪೆಟ್ರೋಲ್‌ ಮತ್ತು ಡೀಸೆಲ್‌ಗೂ ಜಿಎಸ್‌ಟಿ ಅಳವಡಿಕೆ ಮಾಡಬೇಕು ಎಂಬ ವಾದಗಳು ಕೇಳಿಬರುತ್ತಿದ್ದು, ಒಂದೊಮ್ಮೆ ಜಾರಿ
ಮಾಡಿದ್ದೇ ಆದರೆ, ತೈಲ ದರ ಭಾರಿ ಪ್ರಮಾಣದಲ್ಲೇ ಇಳಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.

ಇದಕ್ಕೆ ಕಾರಣ, ದೇಶದಲ್ಲಿ ಪ್ರತಿಯೊಂದು ರಾಜ್ಯವೂ ತನ್ನದೇ ಆದ ಅಬಕಾರಿ, ಕಸ್ಟಮ್‌ ಮತ್ತು ವ್ಯಾಟ್‌ ಹಾಕುತ್ತಿವೆ. ಹೀಗಾಗಿ ರಾಜ್ಯದಿಂದ ರಾಜ್ಯಕ್ಕೆ ತೈಲ ದರದಲ್ಲಿ ವ್ಯತ್ಯಾಸವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next