ದಾವಣಗೆರೆ: ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಕಮೀಷನ್ ಹೆಚ್ಚಳಕ್ಕೆ ಆಗ್ರಹಿಸಿ ಜಿಲ್ಲಾ ಪೆಟ್ರೋಲಿಯಂ ವಿತರಕರು ಮೇ 10ರಂದು ಪೆಟ್ರೋಲ್, ಡೀಸೆಲ್ ಖರೀದಿಸದಿರಲು ನಿರ್ಧರಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಖೀಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ನ ರಾಜ್ಯ ನಿರ್ದೇಶಕ ಕೆ.ವಿ. ರಾಮಚಂದ್ರಪ್ಪ, ನಾವು 2011ರಿಂದಲೂ ಕಮೀಷನ್ ಹೆಚ್ಚಳಕ್ಕಾಗಿ ಹೋರಾಟ ಮಾಡುತ್ತಿದ್ದೇವೆ.
ಕೇಂದ್ರ ಸರ್ಕಾರದ ಆಣತಿಯಂತೆ ಎಲ್ಲಾ ಆಯಿಲ್ ಕಂಪನಿಧಿ ಗಳು ನಮಗೆ ಮುಚ್ಚಳಿಕೆ ಬರೆದುಕೊಟ್ಟು, ಇದೀಗ ಅದನ್ನು ಪಾಲಿಸುವಲ್ಲಿ ವಿಫಲ ಆಗಿವೆ. ಅದಕ್ಕಾಗಿ ನಾವು ಒಂದು ದಿನ ಪೆಟ್ರೋಲ್ ಖರೀದಿ ಮಾಡದೇ ಇರಲು ನಿರ್ಧರಿಸಿದ್ದೇವೆ ಎಂದರು. ನಮಗೆ ಸದ್ಯ ಪೆಟ್ರೋಲ್ ಮೇಲೆ 2 ರೂ. 60 ಪೈಸೆ, ಡೀಸೆಲ್ ಮೇಲೆ 1 ರೂ. 60 ಪೈಸೆ ಕಮೀಷನ್ ನೀಡಲಾಗುತ್ತಿದೆ. ಆದರೆ, ನಮಗೆ ಒದಗುವ ಖರ್ಚು ನಿಭಾಯಿಸಲೇ ಕಮೀಷನ್‌ನ ಶೇ.90ರಷ್ಟು ಹಣ ವೆಚ್ಚವಾಗಲಿದೆ.
ಮತ್ತೂಂದು ಕಡೆ ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ನಿರಂತರ ತೆರಿಗೆ ಹೆಚ್ಚಳ ಮಾಡುತ್ತಲೇ ಇದೆ. ರಾಜ್ಯ ಸಭಾ ಸದಸ್ಯ ಸುಬ್ರಮಣ್ಯ ಸ್ವಾಮಿ ಅವರೇ ಹೇಳಿದಂತೆ ಪೆಟ್ರೋಲ್ ಮೇಲೆ 21.48, ಡೀಸೆಲ್ ಮೇಲೆ 17.33 ರೂ. ತೆರಿಗೆ ವಿಧಿಸಲಾಗುತ್ತಿದೆ. 2014ಕ್ಕೂ ಮುನ್ನ ಇದು ಕ್ರಮವಾಗಿ 9.20 ರೂ., 3.46 ರೂ. ಇತ್ತು. ಇದೀಗ ಅದನ್ನು ಏಕಾಏಕಿ ಬಹುತೇಕ ದ್ವಿಗುಣಗೊಳಿಸಲಾಗಿದೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸ್ವತ್ಛ ಭಾರತ್ ಅಭಿಯಾನದ ಸೆಸ್ ರೂಪದಲ್ಲಿ ಶೇ.1, ರೈತ ಭಿಮಾ ಯೋಜನೆಯ ಸೆಸ್ ರೂಪದಲ್ಲಿ 50 ಪೈಸೆ ವಸೂಲಿ ಮಾಡಲಾಗುತ್ತಿದೆ. ಆದರೆ, ನಮಗೆ ಪೈಸೆ ಲೆಕ್ಕದಲ್ಲಿ ಕಮೀಷನ್ ನೀಡಲಾಗುತ್ತಿದೆ. ಬಂಕ್‌ಗಳು ಆರಂಭವಾದಾಗಿನಿಂದಲೂ ನಾವು ನಿರಂತರವಾಗಿ ಜನರ ಸೇವೆ ಮಾಡಿಕೊಂಡು ಬಂದಿದ್ದೇವೆ. ನಮಗೆ ಮಾತ್ರ ತಕ್ಕ ಲಾಭ ನೀಡುವಲ್ಲಿ ಸರ್ಕಾರ ಗಮನ ಹರಿಸುತ್ತಿಲ್ಲ ಎಂದರು.
ನಮಗೆ ಬೆಲೆ ಏರಿಳಿತದಿಂದಾಗುವ ನಷ್ಟವನ್ನು ಕಂಪನಿಗಳು ಭರಿಸುವುದಿಲ್ಲ. ಇನ್ನೊಂದು ಕಡೆ ಸಾಗಣೆ ವೆಚ್ಚ ನಾವೇ ನೀಡಬೇಕಿದೆ. ಕಾರ್ಮಿಕರಿಗೆ ಕನಿಷ್ಠ ವೇತನ ಕೊಟ್ಟು ನಾವು ಲಾಭ ಗಳಿಸಲು ಹೇಗೆ ಸಾಧ್ಯ ಎಂಬುದರ ಕುರಿತು ಕಂಪನಿಗಳಾಗಲಿ, ಕೇಂದ್ರ ಸರ್ಕಾರವಾಗಲಿ ಚಿಂತಿಸುತ್ತಿಲ್ಲ ಎಂದರು.
ಮೇ 10ರಂದು ಪೆಟ್ರೋಲ್, ಡೀಸೆಲ್ ಖರೀದಿ ನಿಲ್ಲಿಸುವ ಜೊತೆಗೆ ಮೇ 15ರಿಂದ ಪಾಳೆಯ ಆಧಾರದಲ್ಲಿ ಕೆಲಸ ಮಾಡಲು ನಮ್ಮ ಸಂಘ ತೀರ್ಮಾನಿಸಿದೆ. ಅದರಂತೆ ನಾವು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಬಂಕ್ ತೆರೆಯಲಿದ್ದೇವೆ. ಮೇ 14ರಿಂದ ಪ್ರತಿ ಭಾನುವಾರ ಬಂಕ್ ಬಂದ್ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎಂದರು. ದತ್ತರಾಜು, ಸಾಗರ್, ಪ್ರಕಾಸ್, ರವಿರಾಜ್, ಸತೀಶ್ ಸುದ್ದಿಗೋಷ್ಠಿಯಲ್ಲಿದ್ದರು.