ಬೆಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಿರುವ ಪಕ್ಷದ ಎಂಟು ಮಂದಿ ಶಾಸಕರ ವಿರುದ್ಧ “ಮುನ್ನೆಚರಿಕಾ ಕ್ರಮ’ವಾಗಿ ಕಾಂಗ್ರೆಸ್ ಪಕ್ಷ ಹೈಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೈಕೋರ್ಟ್‌ಗೆ “ಕೆವಿಯೆಟ್ ಅರ್ಜಿ’ ಸಲ್ಲಿಸಿದ್ದಾರೆ. ಇದರಲ್ಲಿ ಅನರ್ಹ ಶಾಸಕರಾದ ಪ್ರತಾಪ್‌ಗೌಡ ಪಾಟೀಲ್, ಬಿ.ಸಿ. ಪಾಟೀಲ್, ಶಿವರಾಂ ಹೆಬ್ಟಾರ್, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್, ಆನಂದ್‌ಸಿಂಗ್, ರೋಷನ್‌ಬೇಗ್ ಹಾಗೂ ಮುನಿರತ್ನ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ತಮ್ಮನ್ನು ಅನರ್ಹಗೊಳಿಸಿರುವ ವಿಧಾನಸಭಾ ಸ್ಪೀಕರ್ ಆಗಿದ್ದ ಕೆ.ಆರ್.ರಮೇಶ್ ಕುಮಾರ್ ಅವರು 2019ರ ಜು.28ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಕೆವಿಯೆಟ್ ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾದ 8 ಮಂದಿ ಶಾಸಕರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಬಹುದು. ಹಾಗೊಮ್ಮೆ ಅವರು ಅರ್ಜಿ ಸಲ್ಲಿಸಿದರೆ, ಯಾವುದೇ ಮಂದ್ಯಂತರ ಆದೇಶ ನೀಡುವ ಮುನ್ನ ತಮ್ಮ ವಾದ ಆಲಿಸಬೇಕು ಎಂದು ಹೈಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ.
ಉಪ ಚುನಾವಣಾ ಸಿದ್ಧತೆ ಕುರಿತು ಕಾಂಗ್ರೆಸ್ ಸಭೆ: ಮೈತ್ರಿ ಸರ್ಕಾರದಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಹದಿನಾಲ್ಕು ಕ್ಷೇತ್ರಗಳ ಉಪ ಚುನಾವಣೆಗೆ ಸಿದ್ಧªತೆ ಕುರಿತು ಗುರುವಾರ ಪಕ್ಷದ ಕಚೇರಿಯಲ್ಲಿ ನಾಯಕರ ಸಭೆ ನಡೆಯಲಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಪಕ್ಷದ ಹಿರಿಯ ನಾಯಕರು ಸಭೆ ನಡೆಯಲಿದೆ.
ವಿಧಾನಸಭಾಧ್ಯಕ್ಷರಾಗಿ ರಮೇಶ್‌ಕುಮಾರ್ ಪಕ್ಷದ 14 ಶಾಸಕರನ್ನು ಅನರ್ಹಗೊಳಿಸಿ ರುವುದರಿಂದ ಸುಪ್ರೀಂ ಕೋರ್ಟ್ ತೀರ್ಪಿನಿಂದ ಮುಂದೆ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳಬೇಕು ಎನ್ನುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆವ ಸಾಧ್ಯತೆಯಿದೆ. 14 ಕ್ಷೇತ್ರದಲ್ಲಿ ಈಗಿನಿಂದಲೇ ಪಕ್ಷ ಸಂಘಟನೆ ಹಾಗೂ ಸೂಕ್ತ ಅಭ್ಯರ್ಥಿಗಳ ಹುಡುಕಾಟದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಿ, ಶೀಘ್ರವೇ ಉಪ ಚುನಾವಣೆ ನಡೆಯುವ ಎಲ್ಲ ಕ್ಷೇತ್ರಗಳ ಜಿಲ್ಲಾ ಮುಖಂಡರ ಸಭೆ ಕರೆಯುವ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ.