Advertisement

Sowjanya Case: ಸೌಜನ್ಯಾ ಪ್ರಕರಣದ ಮರು ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

10:58 PM Sep 08, 2023 | Pranav MS |

ಬೆಂಗಳೂರು: ಸೌಜನ್ಯಾ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ್‌ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಮರು ತನಿಖೆ ನಡೆಸಲು ಸರಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಬೆಂಗಳೂರಿನ ಶೇಷಾದ್ರಿಪುರದ ನಿವಾಸಿ ಗಿರೀಶ್‌ ಭಾರದ್ವಾಜ್‌, ಬೆಳ್ತಂಗಡಿಯ ಜಿ.ನವೀನ್‌ ಕುಮಾರ್‌ ಮತ್ತು ಪುತ್ತೂರು ಬಲಾ°ಡಿನ ವಿನಾಯಕ ಫ್ರೆಂಡ್ಸ್‌ ಚಾರಿಟೆಬಲ್‌ ಟ್ರಸ್ಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾ| ಪ್ರಸನ್ನ.ಬಿ. ವರಾಲೆ ಮತ್ತು ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅರ್ಜಿದಾರರು ಕಾನೂನಿನಡಿ ಲಭ್ಯವಿರುವ ಪರ್ಯಾಯ ವಿಧಾನಗಳ ಮೂಲಕ ಪರಿಹಾರ ಪಡೆದುಕೊಳ್ಳಲು ಅವಕಾಶವಿದ್ದು, ಹಾಗಾಗಿ ಅರ್ಜಿಯನ್ನು ವಾಪಸ್‌ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿತು.

ಅದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅರ್ಜಿ ಹಿಂಪಡೆಯುವುದಿಲ್ಲ. ಪ್ರಕರಣದ ಮೆರಿಟ್‌ ಆಧಾರದ ಮೇಲೆ ನ್ಯಾಯಾಲಯ ಆದೇಶ ಮಾಡಬೇಕು ಎಂದು ಕೋರಿದರು. ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿತ್ತು.ಈ ಕುರಿತು ವಿವರವಾದ ಆದೇಶ ಹೊರಡಿಸಲಾಗುವುದು ಎಂದು ಹೇಳಿತು.

ಸರಕಾರ, ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬವು ಆರೋಪಿಯನ್ನು ದೋಷಮುಕ್ತಗೊಳಿಸಿದ ವಿಚಾರಣ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿದೆ. ಮೇಲ್ಮನವಿಯಲ್ಲಿ ತನಿಖಾ ಲೋಪಗಳನ್ನು ಪರಿಗಣಿಸಬಹುದಾಗಿದೆ ಎಂದು ಹೇಳಿತು. ಅದಕ್ಕೆ ವಕೀಲ ಅರುಣ್‌ ಶ್ಯಾಮ್‌, ಸಂತ್ರಸ್ತ ಕುಟುಂಬ ಮೇಲ್ಮನವಿ ಸಲ್ಲಿಸಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಹಾಗಾದರೆ ಮೇಲ್ಮನವಿ ಸಲ್ಲಿಸಲು ಸಂತ್ರಸ್ತ ಕುಟುಂಬಕ್ಕೆ ನೀವು ಸಹಾಯ ಮಾಡಿ ಎಂದು ಅರ್ಜಿದಾರರ ಪರ ವಕೀಲರಿಗೆ ಸಲಹೆ ನೀಡಿದ ನ್ಯಾಯಪೀಠ, ಸಭೆ-ಸಮಾರಂಭ, ಧರಣಿ ಹಾಗೂ ಸಾರ್ವಜನಿಕರ ಭಾವನೆಗಳಿಂದ ಕಾನೂನು ಚೌಕಟ್ಟು ಮೀರಲು ಸಾಧ್ಯವಿಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಾನೂನಿನ ಮಿತಿಯಲ್ಲಿ ಪರಿಗಣಿಸಬೇಕಾಗುತ್ತದೆ ಎಂದು ಹೇಳಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next