Advertisement

ಪತಿಯ ವಿರುದ್ಧ ನಪುಂಸಕತ್ವದ ಆರೋಪ-ವಿಚ್ಛೇದನ ಮಂಜೂರು; ಹೈಕೋರ್ಟ್ ಆದೇಶದಲ್ಲಿ ಹೇಳಿದ್ದೇನು?

03:55 PM Jun 16, 2022 | Team Udayavani |

ಬೆಂಗಳೂರು: ಸಾಕ್ಷ್ಯಾಧಾರಗಳಿಲ್ಲದೆ ಆಧಾರ ರಹಿತವಾಗಿ ಪತಿ ವಿರುದ್ಧ ನಪುಂಸಕತ್ವದ ಆರೋಪ ಹೊರಿಸಿದ್ದ ಪತ್ನಿಯ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿರುವ ಹೈಕೋರ್ಟ್‌, ಇದೊಂದು “ಮಾನಸಿಕ ಕ್ರೌರ್ಯ’ ಎಂದು ವ್ಯಾಖ್ಯಾನಿಸಿದೆ.

Advertisement

ಯಾವುದೇ ಆಧಾರವಿಲ್ಲದೇ ಪತಿಯ ವಿರುದ್ಧ ನಪುಂಸಕತ್ವದ ಆರೋಪ ಹೊರಿಸುವುದು ಮಾನಸಿಕ ಕ್ರೌರ್ಯ. ಹಾಗಾಗಿ, ಅದನ್ನು ಆಧರಿಸಿ ಪತಿ ವಿಚ್ಛೇದನ ಕೋರಬಹುದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ವಿಚ್ಛೇದನ ಮಂಜೂರು ಮಾಡಿ ಆದೇಶ ನೀಡಿದೆ.

ಸಾಕ್ಷ್ಯಾಧಾರವಿಲ್ಲದೆ ಪತ್ನಿ ನಪುಂಸಕತ್ವದ ಆರೋಪ ಹೊರಿಸಿ ಘನತೆಗೆ ಧಕ್ಕೆ ತಂದರೂ ವಿಚ್ಛೇದನ ಮಂಜೂರಾತಿ ಮಾಡಲು ನಿರಾಕರಿಸಿದ ಧಾರವಾಡದ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಕ್ರಮವನ್ನು ರದ್ದುಪಡಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ನೇತೃತ್ವದ ವಿಭಾಗೀಯ ನ್ಯಾಯಪೀಠವು, ಧಾರವಾಡ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು
ರದ್ದುಪಡಿಸಿ, ದಂಪತಿಗೆ ವಿಚ್ಛೇದನ ಮಂಜೂರು ಮಾಡಿತು.

ಅಲ್ಲದೇ ಪತ್ನಿ ಮರುಮದುವೆಯಾಗುವರೆಗೂ ಪತ್ನಿಗೆ ಮಾಸಿಕ 8 ಸಾವಿರ ರೂ. ಜೀವನಾಂಶ ನೀಡಬೇಕು ಎಂದು ಪತಿಗೆ ಹೈಕೋರ್ಟ್‌ ನಿರ್ದೇಶನ ನೀಡಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, “ಪತಿ ವೈವಾಹಿಕ ಜೀವನದ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥ’ ಎಂಬುದಾಗಿ ಪತ್ನಿ ಆರೋಪಿಸಿದ್ದಾರೆ. ಆದರೆ, ಈ ಆರೋಪವು ಸತ್ಯವೆಂದು ಸಾಬೀತುಪಡಿಸಲು ಸಾಕ್ಷ್ಯ ಒದಗಿಸಿಲ್ಲ. ಸಾರ್ವಜನಿಕವಾಗಿ ಇಂತಹ ನಿರಾಧಾರ ಆರೋಪವು ಪತಿಯ ಘನತೆಗೆ ಧಕ್ಕೆ ತಂದಂತಾಗುತ್ತದೆ. ಪ್ರಜ್ಞಾವಂತ ಮಹಿಳೆ ಮತ್ತೂಬ್ಬರ ಮುಂದೆ ಗಂಡನ ನಪುಂಸಕತ್ವದ ಬಗ್ಗೆ ಸುಳ್ಳು ಆರೋಪ ಮಾಡುವುದಿಲ್ಲ.

ಸಾಕ್ಷ್ಯಧಾರವಿಲ್ಲದೆ ಪತಿ ಮಕ್ಕಳನ್ನು ಹೊಂದಲು ಅಸಮರ್ಥ ಎಂಬುದಾಗಿ ಆರೋಪಿಸುವುದು ಮಾನಸಿಕ ಕ್ರೌರ್ಯವಾಗುತ್ತದೆ ಎಂದು ಹೇಳಿದೆ. ಅಲ್ಲದೆ, ತಾನು ವೈದ್ಯಕೀಯ ತಪಾಸಣೆಗೆ ಒಳಗಾಗಲು ಸಿದ್ಧವಾಗಿರುವುದಾಗಿ ಪತಿ ತಿಳಿಸಿದ್ದರು.

Advertisement

ಆದರೆ, ಪತ್ನಿ ಮಾತ್ರ ಪತಿಯ ನಪುಂಸಕತ್ವವನ್ನು ವೈದ್ಯಕೀಯ ದಾಖಲೆಗಳೊಂದಿಗೆ ಸಾಬೀತು ಮಾಡುವಲ್ಲಿ ವಿಫ‌ಲರಾಗಿದ್ದಾರೆ. ಲೈಂಗಿಕ ಕ್ರಿಯೆ ಅಸಮರ್ಥರೆಂದು ಆರೋಪಿಸುವುದರಿಂದ ಪತಿ-ಪತ್ನಿ ನಡುವೆ ಸಾಮರಸ್ಯ ರಹಿತ ವಾತಾವರಣ ಮತ್ತು ಒಂದಾಗಿ ಜೀವನ ನಡೆಸಲು ಸಾಧ್ಯವಾಗದಂಥ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಹಿಂದು ವಿವಾಹ ಕಾಯ್ದೆ-1955ರ ಸೆಕ್ಷನ್‌ 13 ಅಡಿಯಲ್ಲಿ ನಪುಂಸಕತ್ವವು ವಿಚ್ಛೇದನ ಪಡೆಯಲು ಕಾರಣವಲ್ಲ ಎಂದು ಹೇಳಲಾಗಿದೆ.

ಆದರೆ, ಕಾಯ್ದೆಯ ಸೆಕ್ಷನ್‌ 13(1)(ಐಎ) ಅಡಿಯಲ್ಲಿ ನಪುಸಂಕತ್ವದ ಕುರಿತು ಸುಳ್ಳು ಆರೋಪ ಮಾಡಿದರೆ ಮಾನಸಿಕ ಕ್ರೌರ್ಯ ವಾಗುತ್ತದೆ. ಈ ಅಂಶದ ಮೇಲೆ ಪತಿಯು ವಿಚ್ಛೇದನ ಕೋರಬರಹುದು ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?: ಧಾರವಾಡ ಮೂಲದ ಯುವಕ ಹಾಗೂ ಹಾವೇರಿ ಮೂಲದ ಯುವತಿ 2013ರ ಮೇ 13ರಂದು ವಿವಾಹವಾಗಿದ್ದರು. ಕೆಲ ತಿಂಗಳ ನಂತರ ಧಾರವಾಡ ಪ್ರಧಾನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪತಿ, ಮದುವೆಯಾದ ಒಂದು ತಿಂಗಳವರೆಗೂ ಪತ್ನಿ ವೈವಾಹಿಕ ಜೀವನಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದಳು. ತದ ನಂತರ ಆಕೆಯ ನಡೆವಳಿಕೆಯಲ್ಲಿ ಬದಲಾವಣೆಯಾಗಿತ್ತು.

ಮನೆ ಕೆಲಸ ನಿರ್ವಹಿಸಲು ನಿರಾಕರಿಸುತ್ತಿದ್ದಳು. ವೈವಾಹಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರಲಿಲ್ಲ. ನಾನು ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥನಾಗಿದ್ದೇನೆ ಎಂದು ಪದೇ ಪದೆ ಸಂಬಂಧಿಕರ ಮುಂದೆ ಹೇಳುತ್ತಿದ್ದಳು. ಇದರಿಂದ ನನಗೆ ತುಂಬಾ ಮುಜುಗರ ಉಂಟಾಗುತ್ತಿತ್ತು. ಪತ್ನಿಯ ಈ ನಡೆಯಿಂದ ಮಾನಸಿಕ ಹಿಂಸೆ ಉಂಟಾಗುತ್ತಿದ್ದು, ವಿಚ್ಛೇದನ ಮಂಜೂರು ಮಾಡಬೇಕು ಎಂದು ಕೋರಿದ್ದರು.

ಆದರೆ, ಮನವಿಯನ್ನು 2015ರ ಜು.17ರಂದು ಧಾರವಾಡ ಪ್ರಧಾನ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪತಿಯ ವಾದ ಆಕ್ಷೇಪಿಸಿದ್ದ ಪತ್ನಿ, ಗಂಡನ ಮನೆಗೆ ತೆರಳಿ ಸಂತೋಷಕರ ಜೀವನ ನಡೆಸುತ್ತಿದ್ದೆ. ಆದರೆ, ಗಂಡನೇ ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು. ಇದರಿಂದ ವೈವಾಹಿಕ ಜೀವನದಲ್ಲಿ ಸುಖ ಮತ್ತು ನೆಮ್ಮದಿ ಇಲ್ಲದಂತಾಯಿತು. ಗಂಡನಿಗೆ ಲೈಂಗಿಕ ಕ್ರಿಯೆ ನಡೆಸಲು ಆಸಕ್ತಿ ಇರಲಿಲ್ಲ. ಒಂದಲ್ಲಾ ಒಂದು ಕಾರಣದಿಂದ ಸದಾ ಒಂಟಿಯಾಗಿಯೇ ಇರುತ್ತಿದ್ದರು. ವೈವಾಹಿಕ ಜೀವನ ನಡೆಸಲು ತಾನು ಸದಾ ಸಿದ್ಧಳಿದ್ದೇನೆ. ಆದರೆ, ಗಂಡನೇ ತನ್ನ ಲೋಪ ಮರೆಮಾಚಲು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next