ಸಾಧನೆಗಾಗಿ ಹಠ ಹಿಡಿದಿದ್ದ ಪೀಟರ್ ಅಲೆಗ್ಸಾಂಡರ್ ಎಂಬ ಹೋರಾಟಗರ ಕೊನೆಗೂ ಶುಕ್ರವಾರ ಕೇಶಮುಂಡನ
ಮಾಡಿಸಿಕೊಂಡಿದ್ದಾರೆ. ನಗರದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಜಲ ಸಮಾವೇಶದ ಸಂದರ್ಭದಲ್ಲಿ ರಾಷ್ಟ್ರೀಯ ಜಲಗಾಂಧಿ ಎಂದೇ ಖ್ಯಾತರಾಗಿರುವ ಡಾ|ರಾಜೇಂದ್ರಸಿಂಗ್ ಅವರು ಸದರಿ ಸಮಾವೇಶದಲ್ಲಿ ರಾಮಲಿಂಗ ಮಾತ್ರವಲ್ಲ, ಜೀವ ಕಳೆದುಕೊಂಡಿರುವ ಎಲ್ಲ ನದಿ-ಕೆರೆಗಳ ಪುನರುಜ್ಜೀವನಕ್ಕೆ ನಿರ್ಣಯ ಅಂಗೀಕರಿಸುತ್ತೇವೆ. ನಿಮ್ಮ ಆಶಯದಂತೆ ರಾಜ್ಯದ ಜಲಸಂಪನ್ಮೂಲ ಸಚಿವರಾದ
ಡಾ| ಎಂ.ಬಿ. ಪಾಟೀಲ ಅವರಿಂದ ನಿಮ್ಮ ಕನಸಿನ ಕೆರೆಗೆ ಮರು ಜೀವ ಕೊಡಿಸುವ ಹೊಣೆ ಹೊರುತ್ತೇವೆ ಎಂದು ಭರವಸೆ ನೀಡಿದರು. ಎಲ್ಲಕ್ಕಿಂತ ಹೆಚ್ಚಾಗಿ ವರೆಗೆ ಒಂಟಿಯಾಗಿದ್ದ ನಿಮ್ಮೊಂದಿಗೆ ನಾವೂ ಕೈ ಜೋಡಿಸುತ್ತೇವೆ. ದೇಶದ ಜಲ ಸಂರಕ್ಷಕ ಹೋರಾಟಗಾರರೆಲ್ಲ ನಿಮ್ಮೊಂದಿಗೆ ಇದ್ದೇವೆ. ಹೀಗಾಗಿ ಈ ಜಲ ಸಮಾವೇಶ ಸಂದರ್ಭದಲ್ಲಿ ನಿಮ್ಮ ಬೇಡಿಕೆ ಈಡೇರಿಸುವ ಭರವಸೆ ದೊರೆಯುವ ಕಾರಣ ಪ್ರತಿಜ್ಞೆ ಕೈಬಿಟ್ಟು, ಕೇಶ ಮುಂಡನ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು. ಇದಲ್ಲದೇ ಜಲ ಬಿರಾದರಿ ಸಮಿತಿಯ ಜಿಲ್ಲಾ ಘಟಕದ ಸಂಚಾಲಕರು ನೀವೇ ಆಗಿರುವ ಕಾರಣ ರಾಮಲಿಂಗ ಕೆರೆ ಸಂರಕ್ಷಣೆ ವಿಷಯದಲ್ಲಿ ನಿಮ್ಮೊಂದಿಗೆ ದೇಶದ ಜನವೇ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಮನವೊಲಿಸಿದರು. ಅಂತಿಮವಾಗಿ ರಾಷ್ಟ್ರೀಯ ಜಲ ಸಮಾವೇಶದ ಸಮಾರೋಪ ನಡೆಯುವ ಶುಕ್ರವಾರ ಬೆಳಗ್ಗೆ ದಶಕದಿಂದ ಬೆಳೆಸಿದ್ದ ಕೇಶಕ್ಕೆ ಕತ್ತರಿ ಹಾಕಿಸಿದ್ದಾರೆ. ಕಳೆದ ಒಂದು ದಶಕದಿಂದ ರಾಮಲಿಂಗ ಕೆರೆ ಸಂರಕ್ಷಣೆಗಾಗಿ ಕೇಶ ಮುಂಡನ
ಮಾಡಿಸದೇ, ಬಗಲಲ್ಲಿ ಬಿಳಿಯ ಬಟ್ಟೆಯ ಜೋಳಿಗೆ, ತಲೆಗೆ ಪೇಟ ಸುತ್ತಿಕೊಂಡು ಜಲ ಸಂತನಂತೆ ಸುತ್ತಿದ್ದ ಪೀಟರ್ ಅಲೆಗ್ಸಾಂಡರ್, ರಾಮಲಿಂಗ ಕರೆಯ ಪ್ರದೇಶದಲ್ಲೇ ಕೇಶ ಮುಂಡನಕ್ಕೆ ನಿರ್ಧರಿಸಿದರು. ಸ್ಥಳಕ್ಕೆ ತೆರಳಿದ ಡಾ| ರಾಜೇಂದ್ರಸಿಂಗ್ ಹಾಗೂ ಜಲ ಬಿರಾದರಿ ಸಂಘಟನೆ ಕಾರ್ಯಕರ್ತರು ಪೀಠರ್ ಅವರ ಕೈಗೆ ದೇಶದ 101 ನದಿಗಳ ಜಲತುಂಬಿದ್ದ ಬಿಂದಿಗೆ ನೀಡಿ, ಪ್ರತಿಜ್ಞೆ ಕೈ ಬಿಡಿಸಿ, ಕೇಶಮುಂಡನ ಮಾಡಿಸಿದರು. ಕೇಶ ಮುಂಡನದ ಬಳಿಕ ಜಲ ಜೋಳಿಗೆಯನ್ನೂ ಕಳಚಿ, ಶೂಟುಬೂಟು ತೊಟ್ಟ ಪೀಟರ್ ಅವರು ತಲೆಗೆ ತೊಡುತ್ತಿದ್ದ ಬಿಳಿ ವಸ್ತ್ರದ ಪೇಟವನ್ನು ಮಾತ್ರ ಕಳಚಲು ನಿರಾಕರಿಸಿದರು. ಕೇಶಮುಂಡನದ ಬಳಿಕ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರಾಮಲಿಂಗ ಕೆರೆ ಸಂರಕ್ಷಣೆಗೆ ಮನವಿ ಮಾಡಿದರು. ಸಮಾವೇಶದಲ್ಲಿ ಕೈಗೊಂಡಿರುವ
ನಿರ್ಣಯದಂತೆ ರಾಮಲಿಂಗ ಕೆರೆಯ ಸಂರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ.
ಪಾಟೀಲ ಕೂಡ ಭರವಸೆ ನೀಡಿದ್ದಾರೆ ಎಂದು ಪೀಟರ್ ಹೇಳಿದರು.
Advertisement