Advertisement

ಬೈಕ್‌ ಅಲ್ಲ, ಪೆಟ್‌ ಆ್ಯಂಬುಲೆನ್ಸ್‌!

11:54 AM Nov 18, 2017 | Team Udayavani |

108! ಈ ಸಂಖ್ಯೆಗೆ ಅಂಟಿಕೊಂಡಿರೋದು “ಆ್ಯಂಬುಲೆನ್ಸ್‌’ನ ನೆರಳು. “ಟೊಂಯ್‌ ಟೊಂಯ್‌’ ಎಂಬ ಸದ್ದೂ ಇದರೊಂದಿಗೆ ಠಪಕ್ಕನೆ ಕಿವಿ ತುಂಬಿಕೊಳ್ಳುತ್ತದೆ. ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ತೆವಳುತ್ತಾ, ರೋಗಿಯನ್ನು ಒಡಲಲ್ಲಿ ತುಂಬಿಕೊಂಡು ಸಾಗುವ ಈ ವಾಹನದ ಮೇಲೆ ಎಲ್ಲರಿಗೂ ಒಂದೇಸಮನೆ ಅನುಕಂಪ ಉಕ್ಕುವುದು ಸಹಜ. ಇದು ಮನುಷ್ಯನ ಪಾಲಿನ ಆಪತಾºಂಧವ ವಾಹನದ ಕತೆ. ಅದೇ ರೀತಿ, ಇದೇ ಬೆಂಗಳೂರಿನಲ್ಲಿ ಸಾಕುಪ್ರಾಣಿಗಳ ಪ್ರಾಣ ಕಾಪಾಡುವ ಆ್ಯಂಬುಲೆನ್ಸ್‌ಗಳೂ ಇವೆ. ಇವೇನು ಕೆಂಪು ದೀಪ ಹಚ್ಚಿಕೊಂಡು, ಸದ್ದು ಮಾಡುವುದಿಲ್ಲ. ತಮ್ಮಷ್ಟಕ್ಕೆ ಚಲಿಸುತ್ತಿರುತ್ತವೆ. ಇವಕ್ಕೂ ಟ್ರಾಫಿಕ್ಕಿನ ಕೆಂಪು ದೀಪ ವಿನಾಯಿತಿ ನೀಡುವುದಿಲ್ಲ.

Advertisement

ಆದರೆ, ಅಪಾಯದಂಚಿನಲ್ಲಿರುವ ಪ್ರಾಣಿಗಳನ್ನು ಈ ಟ್ರಾಫಿಕ್ಕಿನಿಂದ ಬಚಾವ್‌ ಮಾಡಿ, ವೈದ್ಯರ ಬಳಿ ಕರೆದೊಯ್ಯುವ ಒಬ್ಬ ಹುಡುಗ ಈ ಹೊತ್ತಿನಲ್ಲಿ ಕಾಡುತ್ತಾನೆ. ಆತನ ಹೆಸರು, ಗೌತಮ್‌ ಶ್ರವಣ್‌ ಕುಮಾರ್‌. ತಮ್ಮ ಅವೆಂಜರ್‌ ಬೈಕನ್ನೇ ದ್ವಿಚಕ್ರ ಆ್ಯಂಬುಲೆನ್ಸ್‌ ಮಾಡಿಕೊಂಡು, ಸಾಕುಪ್ರಾಣಿಗಳ ಪಾಲಿಗೆ ಆಪ್ತರಕ್ಷಕನಾಗಿದ್ದಾನೆ. ವಾರದಲ್ಲಿ ಐದು ದಿನ ಖಾಸಗಿ ಕಂಪನಿಯಲ್ಲಿ ದುಡಿದು, ವಾರಾಂತ್ಯದ ಎರಡು ದಿನಗಳಲ್ಲಿ ತನ್ನ ಬೈಕನ್ನು ಪೆಟ್‌ ಆ್ಯಂಬುಲೆನ್ಸ್‌ ಆಗಿ ಪರಿವರ್ತಿಸಿಕೊಳ್ಳುತ್ತಾರೆ. ಸಾಕು ಪ್ರಾಣಿಗಳ ಸೇವೆಗಾಗಿಯೇ ವೀಕೆಂಡನ್ನು ಮುಡಿಪಾಗಿಟ್ಟಿದ್ದಾರೆ ಶ್ರವಣ್‌. ಅವುಗಳ ಆರೋಗ್ಯ ಕೈಕೊಟ್ಟಾಗ ಇಲ್ಲವೇ ಅವು ಅಪಘಾತದಿಂದ ನರಳುತ್ತಿದ್ದಾಗ, ಅವುಗಳ ಮಾಲೀಕರ ಸಂಕಷ್ಟಕ್ಕೆ ಶ್ರವಣ್‌ ಸ್ಪಂದಿಸುತ್ತಾರೆ.

ಐಡಿಯಾ ಹೊಳೆದದ್ದು ಹೇಗೆ?
ಹಾಗೆ ನೋಡಿದರೆ, ಬೆಂಗಳೂರಿನಲ್ಲಿ 2 ಸಾವಿರಕ್ಕೂ ಅಧಿಕ ಪ್ರಾಣಿ ಸಂರಕ್ಷಕರಿದ್ದಾರೆ. ಆದರೆ, ಅವರೆಲ್ಲರಿಗಿಂತ ಭಿನ್ನವಾಗಿ ಶ್ರವಣ್‌ ಕಾಣುತ್ತಾರೆ. ಸಾಮಾನ್ಯವಾಗಿ ಓಲಾ, ಉಬರ್‌ನಂಥ ಟ್ಯಾಕ್ಸಿಗಳಲ್ಲಿ ಸಾಕುನಾಯಿಗಳನ್ನು ಹತ್ತಿಸಿಕೊಳ್ಳುವುದಿಲ್ಲ. ಇನ್ನು “ನಮ್ಮ ನಾಯಿಗೆ ಪೆಟ್ಟಾಗಿದೆ, ಬೆಕ್ಕಿಗೆ ಆರೋಗ್ಯ ಕೆಟ್ಟಿದೆ, ದಯವಿಟ್ಟು ಆಸ್ಪತ್ರೆಗೆ ಡ್ರಾಪ್‌ ಕೊಡಿ’ ಎನ್ನುತ್ತಾ ಆಟೋದವರ ಮುಂದೆ ಅಂಗಲಾಚಿದರೆ, ಅವರು ಮೀಟರ್‌ಗೆ ಮೀಟರ್‌ ಸೇರಿ, ಹಣ ಕೇಳುತ್ತಾರೆ (ಎಲ್ಲರೂ ಅಲ್ಲ). ಪ್ರಾಣಿಪ್ರಿಯರ ಈ ನೋವಿಗೆ ಕಿವಿಗೊಟ್ಟು, ಪೆಟ್‌ ಆ್ಯಂಬುಲೆನ್ಸ್‌ ಅನ್ನು ಶ್ರವಣ್‌ ಆರಂಭಿಸಿದರು.

ಅಂದಹಾಗೆ, ಶ್ರವಣ್‌ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿಯವರು. ಬೆಂಗಳೂರಿಗೆ ಬಂದ ಆರಂಭದಲ್ಲಿಯೇ ಅವರಿಗೆ ಸಾಕುಪ್ರಾಣಿಗಳ ಈ ಸಂಕಷ್ಟ ಅನುಭವಕ್ಕೆ ಬಂತಂತೆ.

Advertisement

ಹೇಗಿದೆ ದ್ವಿಚಕ್ರ ಆ್ಯಂಬುಲೆನ್ಸ್‌?
ಶ್ರವಣ್‌ ತಮ್ಮ ಬಜಾಜ್‌ ಅವೆಂಜರ್‌ ಬೈಕಿನ ಹಿಂಬದಿಯಲ್ಲಿ ಒಂದು ಬೋನ್‌ ನಿರ್ಮಿಸಿಕೊಂಡಿದ್ದಾರೆ. ತುಂಬಾ ತೂಕದ ಸಾಕುಪ್ರಾಣಿಗಳನ್ನು ಇದರಲ್ಲಿ ಹಾಕಲಾಗುವುದಿಲ್ಲ. 25 ಕಿಲೋ ಒಳಗಿನ ಪ್ರಾಣಿಗಳಿಗಷ್ಟೇ ಈ ಬೋನ್‌ ಅನುಕೂಲಕಾರಿ. ಅದಕ್ಕಿಂತ ತೂಕದ ಪ್ರಾಣಿಗಳನ್ನು ಕೂರಿಸಿಕೊಂಡರೆ, ಬೈಕ್‌ ಉರುಳಬಹುದೆಂಬ ಆತಂಕ ಇವರದು. 

ದಾಳಿಗೆ ಅಂಜುವುದಿಲ್ಲ…
ಮಾಲೀಕರು ಈ ಸಾಕುಪ್ರಾಣಿಗಳನ್ನು ಬೈಕ್‌ ಹಿಂದೆ ಕೂರಿಸಲು ನೆರವಾಗುತ್ತಾರೆಯಾದರೂ, ಕೆಲವು ಸಲ ಅವು ಭಯಗೊಂಡು ವಿಚಿತ್ರವಾಗಿ ವರ್ತಿಸಬಹುದು. ಮೈಮೇಲೆ ಎಗರಬಹುದು. ಆ ಎಲ್ಲ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಶ್ರವಣ್‌, ಬಹಳ ಜೋಪಾನವಾಗಿ, ವೈದ್ಯರ ಬಳಿ ತಲುಪಿಸುತ್ತಾರೆ. ಸೇವೆಗೆ ಪ್ರತಿಯಾಗಿ ಮಾಲೀಕರು ಕೊಟ್ಟಷ್ಟು ಹಣವನ್ನು ತೆಗೆದುಕೊಳ್ಳುತ್ತಾರೆ.
“ನನಗೆ ಹತ್ತಾರು ವೈದ್ಯರು ಪರಿಚಿತರಿದ್ದಾರೆ. ಆದರೆ, ನಾನು ಯಾರನ್ನೂ ರೆಕೆ¾ಂಡ್‌ ಮಾಡುವುದಿಲ್ಲ. ಅದು ಸರಿಯೂ ಅಲ್ಲ. ಸಾಕುಪ್ರಾಣಿಗಳ ಮಾಲೀಕರು ಹೇಳುವ, ಅವರ ಪರಿಚಿತ ವೈದ್ಯರಿಗೆ ಮೊದಲ ಆದ್ಯತೆ ನೀಡುತ್ತೇನೆ’ ಎನ್ನುತ್ತಾರೆ ಶ್ರವಣ್‌.

ಈ ಬೆಂಗಳೂರು ಒಂದಲ್ಲಾ ಒಂದು ಸೇವೆಗಳನ್ನು ಬೇಡುತ್ತದೆ. ವಾರದಲ್ಲಿ 2 ದಿನ ಅಪಾಯದಲ್ಲಿರುವ ಸಾಕು ಪ್ರಾಣಿಗಳ ಸೇವೆಗೆ ಮುಡಿಪಾಗಿಟ್ಟಿದ್ದೇನೆ. ಈ ಕೆಲಸ ನನಗೆ ಆತ್ಮತೃಪ್ತಿ ಕೊಟ್ಟಿದೆ.
– ಗೌತಮ್‌ ಶ್ರವಣ್‌ ಕುಮಾರ್‌, ಪೆಟ್‌ ಆ್ಯಂಬುಲೆನ್ಸ್‌ ಚಾಲಕ

ಫೇಸ್‌ಬುಕ್‌ ಪುಟ: @gowthamsgyaan

Advertisement

Udayavani is now on Telegram. Click here to join our channel and stay updated with the latest news.

Next