Advertisement
ತಿಲಕ್‌ನಗರ ಪೆಸ್ತೂಮ್‌ಸಾಗರ್ ಕರ್ನಾಟಕ ಸಂಘದ ವತಿಯಿಂದ ನಡೆದ ವಸ್ತು ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ತುಳು ಕನ್ನಡಿಗರು ಪಾಲ್ಗೊಂಡಿರುವುದು ಅಭಿನಂದನೀಯ. ಐಕ್ಯತೆಯೇ ಸಾಧನೆಗೆ ಮೂಲವಾಗಿದ್ದು, ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಮಹಿಳೆಯರ ಪಾತ್ರವೇ ಹಿರಿದಾಗಿದ್ದು, ಯಾವುದೇ ಜಾತಿ, ಮತ, ಭೇದವಿಲ್ಲದೆ, ಒಂದೇ ಮನಸ್ಸಿನಿಂದ ನಾವೆಲ್ಲರೂ ಒಂದಾಗಿ ಕಾರ್ಯನಿರತರಾಗಬೇಕು ಎಂದು ತಿಲಕ್‌ನಗರ ಪೆಸ್ತೂಮ್‌ಸಾಗರ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಾಗವೇಣಿ ಶ್ರೀಧರ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹೇಳಿದರು.
Related Articles
Advertisement
ಉದ್ಯಮಿ ಶೈಲೇಶ್ ಮೆಹ್ತಾ ಅವರು ಮಾತನಾಡಿ, ಸಂಸ್ಥೆಯು ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ನಮ್ಮ ಸಮಾಜಸೇವೆಗೆ ನನ್ನ ಸಹಕಾರ, ಪ್ರೋತ್ಸಾಹ ಸದಾಯಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ನಿತ್ಯಾನಂದ ಶೆಟ್ಟಿ ಅವರು ಮಾತನಾಡಿ, ನಮ್ಮ ಸಂಘದ ಮಹಿಳೆಯರು ಕಾರ್ಯಚಟುವಟಿಕೆಗಳನ್ನು ಕಂಡಾಗ ಆನಂದವಾಗುತ್ತಿದೆ. ಸ್ವಂತ ಕಚೇರಿಯ ಬಗ್ಗೆ ಸುಶಾಂತ್ ಸಾವಂತ್ ಅವರು ಕಾರ್ಯಪ್ರವೃತ್ತರಾಗಬೇಕು ಎಂದು ನುಡಿದರು.
ಸಂಘದ ಅಧ್ಯಕ್ಷ ರಾಮಣ್ಣ ದೇವಾಡಿಗ ಅವರು ಮಾತನಾಡಿ, ನಮ್ಮಿಂದ ವಲಯದ ಎಲ್ಲ ಕನ್ನಡಿಗರಿಗೆ ಸಹಾಯವಾಗಬೇಕು. ಎಲ್ಲರೂ ಒಗ್ಗಟ್ಟಿನಿಂದ ನಾಡು-ನುಡಿಯ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದು ನುಡಿದು ಮಹಿಳಾ ಸದಸ್ಯೆಯರ ಕಾರ್ಯಚಟುವಟಿಕೆ ಗಳನ್ನು ಪ್ರಶಂಸಿಸಿದರು.
ಮಾಲತಿ ಜೆ. ಮೊಲಿ ಕಾರ್ಯಕ್ರಮ ನಿರ್ವಹಿಸಿದರು. ವಿಶಾಲಾಕ್ಷೀ ವಿ. ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಸಹಕರಿಸಿದ ಸಂಘದ ಹಾಗೂ ಮಹಿಳಾ ವಿಭಾಗದ ಎಲ್ಲ ಪದಾಧಿಕಾರಿಗಳನ್ನು, ಸದಸ್ಯರನ್ನು ಹಾಗೂ ಸ್ಥಳವಾಕಾಶವನ್ನು ಮಾಡಿಕೊಟ್ಟ ನಂದು ಕದಂ, ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಿದ್ದ ಉದ್ಯಮಿ ಸತೀಶ್ ಶೆಟ್ಟಿ ಅವರನ್ನು ಶಾಲಿನಿ ಶೆಟ್ಟಿ ಅವರು ಸಂಘದ ಪರವಾಗಿ ಅಭಿನಂದಿಸಿ ಶುಭ ಹಾರೈಸಿದರು.