ಬೆಳೆಗಳಿಗೆ ಕೀಟ ಬಾಧೆ ಉಂಟಾದಾಗ ಸಕಾಲದಲ್ಲಿ ಕೀಟ ನಿಯಂತ್ರಕಗಳನ್ನು ಸಿಂಪಡಣೆ ಮಾಡಬೇಕು. ಈ ಕಾರ್ಯವನ್ನು ಬ್ಯಾಕ್‌ಪ್ಯಾಕ್ (ಬೆನ್ನಿಗೆ ಕಟ್ಟಿಕೊಳ್ಳುವ ಕ್ಯಾನ್)ಗೆ ನಿಯಂತ್ರಕ ದ್ರವ ತುಂಬಿ ಸಿಂಪಡಣೆ ಮಾಡಲಾಗುತ್ತದೆ. ಇದರಲ್ಲಿ ಮಾನವಚಾಲಿತ, ಯಂತ್ರ ಆಧಾರಿತ ಸಾಧನಗಳಿವೆ. ಆದರೆ ಈ ಎರಡರಲ್ಲಿಯೂ ಸಿಂಪಡಣೆ ಕಾರ್ಯಕ್ಕೆ ತಗುಲುವ ಸಮಯ ಹೆಚ್ಚು.
ಮಾನವ ಆಧಾರಿತ ಪಂಪ್ ಆದರೆ ತೆಗೆದುಕೊಳ್ಳುವ ದಿನಗಳು ಹೆಚ್ಚು. ರಾಸಾಯನಿಕಗಳ ಸಿಂಪಡಣೆ ಸಂದರ್ಭದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಗಳೂ ಇವೆ. ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿ ನಡೆದ ಕೃಷಿಮೇಳದಲ್ಲಿ ಡ್ರೋನ್ ಬಳಸಿ ಕೀಟ ನಿಯಂತ್ರಕ ದ್ರವಾಂಶಗಳನ್ನು ಸಿಂಪಡಣೆ ಮಾಡುವ ಕಾರ್ಯದ ಪ್ರಾತ್ತಕ್ಷಿಕೆ ನಡೆಯಿತು. ಇದರ ಮುಖಾಂತರ, ಒಂದು ಎಕರೆಗೆ 15 ನಿಮಿಷದಲ್ಲಿ ಕೀಟ ನಿಯಂತ್ರಕ ಸಿಂಪಡಿಸಬಹುದು.
ಈ ಯಂತ್ರವನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ. ಈ ಡ್ರೋನ್ ಸಹಾಯದಿಂದ ನೀರು ನಿಲ್ಲಿಸಿರುವಂಥ ಭತ್ತದ ಗದ್ದೆಗಳು, ಎತ್ತರದ ತೋಟಗಾರಿಕೆ ಬೆಳೆಗಳು, ಹತ್ತಿ, ತೊಗರಿ ಇತ್ಯಾದಿ ಬೆಳೆಗಳ ಮೇಲೆ ಸಿಂಪಡಿಸಬಹುದು. ನಿರ್ದಿಷ್ಟ ಎತ್ತರದಲ್ಲಿ, ನಿರ್ದಿಷ್ಟ ವೇಗದಲ್ಲಿ ದ್ರವಗಳನ್ನು ಸಿಂಪಡಿಸಬಹುದು. ಇನ್ನೊಂದು ವಿಶೇಷ ಸಂಗತಿಯೆಂದರೆ ಈ ಯಂತ್ರಕ್ಕೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿದೆ.
ಇದರಲ್ಲಿ ಹೊಲದ ನಕ್ಷೆ ಸೇರಿಸಿದರೆ ಬೇಕಾದ ಭಾಗಗಳಿಗೆ ಮಾತ್ರ ಸಿಂಪಡಣೆ ನಡೆಯುತ್ತದೆ. ರಿಮೋಟ್ ಕಂಟ್ರೋಲ್ ಇರುವುದರಿಂದ ನಿರ್ದಿಷ್ಟ ಜಾಗದಲ್ಲಿ ಕುಳಿತು ಇದರ ಚಲನವಲನಗಳನ್ನೂ ನಿಯಂತ್ರಿಸಬಹುದು. ಆದರೆ, ನೆನಪಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ, ಇದನ್ನು ಹೊಲ- ತೋಟಗಳಲ್ಲಿ ಹಾರಾಡಿಸಲು ಸ್ಥಳೀಯ ಆಡಳಿತದ ಪೂರ್ವಾನುಮತಿ ಅಗತ್ಯ.
ಹೆಚ್ಚಿನ ಮಾಹಿತಿಗೆ: ಡಾ. ಎಂ. ವೀರನಗೌಡ, ಡೀನ್, ಕೃಷಿ ತಾಂತ್ರಿಕತೆ, ರಾಯಚೂರು ಕೃಷಿ ವಿಶ್ವವಿದ್ಯಾಲಯ, 9448303282
* ಕುಮಾರ ರೈತ