ಚಿಕ್ಕಮಗಳೂರು: ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವಂತೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲಾ ಲಾರಿ ಮಾಲೀಕರ ಸಂಘದ ವತಿಯಿಂದ ನಗರದಲ್ಲಿ ಶುಕ್ರವಾರ ಸಾಂಕೇತಿಕ ಮುಷ್ಕರ ನಡೆಸಿದರು.
ಶುಕ್ರವಾರ ದೇಶಾದ್ಯಂತ ಆಲ್ ಇಂಡಿಯಾ ಟ್ರಾನ್ಸ್ ಪೋರ್ಟ್ ಅಸೋಸಿಯೇಶನ್ ಮತ್ತು ಸೌತ್ ಇಂಡಿಯಾ ಲಾರಿ ಮಾಲೀಕರ ಅಸೋಸಿಯೇಶನ್ ಹಾಗೂ ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಮಾಲೀಕರ ಮತ್ತು ಏಜೆಂಟ್ ಅಸೋಸಿಯೇಶನ್ ಮತ್ತು ಇತರೆ ಸಂಘಗಳು ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ಲಾರಿ ಮಾಲೀಕರು ಮತ್ತು ಚಾಲಕರು ಮುಷ್ಕರ ನಡೆಸಿದರು.
ಬೆಳಗ್ಗೆಯಿಂದಲೇ ಜಿಲ್ಲಾದ್ಯಂತ ಇರುವ 1,200 ಲಾರಿಗಳನ್ನು ರಸ್ತೆಗಿಳಿಸದೆ ಮುಷ್ಕರ ನಡೆಸಿದ ಲಾರಿ ಮಾಲೀಕರು ಮತ್ತು ಚಾಲಕರು ಡೀಸೆಲ್ ದರ ದಿನದಿಂದ ದಿನಕ್ಕೆ ಏರುತ್ತಿದೆ. ಈಗಾಗಲೇ ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿರುವ ಲಾರಿ ಮಾಲೀಕರ ಹೊಟ್ಟೆ ಮೇಲೆ ಸರ್ಕಾರ ತಣ್ಣೀರು ಬಟ್ಟೆ ಹೊದೆಸಲು ಮುಂದಾಗಿದೆ. ಹೆಚ್ಚಿನ ತೆರಿಗೆ ವಿಧಿ ಸಿರುವುದರಿಂದ 15 ರಾಜ್ಯಗಳಲ್ಲಿನ ಇಂಧನ ಬೆಲೆಗಿಂತ ಕರ್ನಾಟಕದಲ್ಲಿ ಡೀಸೆಲ್ ಬೆಲೆ ಅ ಧಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ರಾಜ್ಯಗಳಿಂದ ಪ್ರತಿನಿತ್ಯ 40 ಸಾವಿರ ವಾಹನಗಳು ರಾಜ್ಯದಲ್ಲಿ ಸಂಚರಿಸುತ್ತಿದ್ದು, 1 ಲೀಟರ್ ಡೀಸೆಲ್ ಮೇಲೆ 3 ರೂ. ಕಡಿತಗೊಳಿಸಿದರೆ ಒಂದು ಲಾರಿ 200 ಲೀಟರ್ ಡೀಸೆಲ್ ತುಂಬಿಸಿದರೆ ಒಟ್ಟು 40 ಸಾವಿರ ವಾಹನಗಳಿಂದ ದಿನಕ್ಕೆ 8ಲಕ್ಷ ಲೀಟರ್ ಆಗುತ್ತದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 1.60 ಕೋಟಿ ರೂ. ಆದಾಯ ಬರುತ್ತದೆ. ಕೂಡಲೇ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವ ಮೂಲಕ ದರ ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕೇಂದ್ರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ತಾತ್ಕಾಲಿಕವಾಗಿ ಸಂತೆ ಮೈದಾನದಲ್ಲಿ ಒಂದು ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ಕೂಡಲೇ ಟ್ರಕ್ ಟರ್ಮಿನಲ್ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು. ಟ್ರಕ್ ಟರ್ಮಿನಲ್ ಇರುವ ಜಿಲ್ಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.
ಚಿಕ್ಕಮಗಳೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶಿವಾನಂದ, ಉಪಾಧ್ಯಕ್ಷ ಲಾಲೂ ಪಿಂಟೋ, ಕಾರ್ಯದರ್ಶಿ ಬೆರ್ನಾರ್ಡ್‌ಹೆನ್ರಿ, ಖಜಾಂಚಿ ಮಲ್ಲಿಕಾ, ಸಿ.ಆರ್. ರಾಮು, ರೆಹಮತ್, ಪ್ರಮೋದ್, ಗಂಗಾಧರ್, ಕೆ.ಸಿ. ಯುವರಾಜ್, ಬಸವರಾಜ್, ರಮೇಶ್ ಇದ್ದರು.