ಮುಂಬಯಿ: ನಾಟಕ ರಂಗದಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಎಲ್ಲ ಕಲಾವಿದರ ಪ್ರತಿಭೆಯನ್ನು ಹೊರಹೊಮ್ಮಿಸುವ ನಿರ್ದೇಶಕ ತನ್ನ ಸೃಜನಶೀಲತೆಯನ್ನು ಬಳಸಿಕೊಳ್ಳಬೇಕು. ಗಿರೀಶ್ ಕಾರ್ನಾಡ್ ಬರೆದದ್ದು ತುಘಲಕ್ ಕಾದಂಬರಿ; ನಾಟಕವಲ್ಲ. ಕೆ. ಕೆ. ಸುವರ್ಣರು ಅದನ್ನು ನಾಟಕವಾಗಿ ಬರೆಯಬೇಕೆಂದು ಒತ್ತಡ ಹಾಕಿದ ಪರಿಣಾಮ ತುಘಲಕ್ ಇಂದು ಅತ್ಯುತ್ತಮ ನಾಟಕವಾಗಿ ನಮಗೆ ದೊರೆತಿದೆ ಎಂದು ಹಿರಿಯ ರಂಗಕಲಾವಿದ, ಕಂಠದಾನ ಕಲಾವಿದ ಜಯಶೀಲ ಸುವರ್ಣ ಅವರು ಅಭಿಪ್ರಾಯಪಟ್ಟರು.
ನಗರದ ಹಿರಿಯ ರಂಗಸಂಸ್ಥೆ ಕನ್ನಡ ಕಲಾ ಕೇಂದ್ರವು ಶನಿವಾರ ಸಯಾನ್‌ನ ಸಂಘದ ಕಿರು ಸಭಾಗೃಹದಲ್ಲಿ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ರಂಗಾನುಭವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಾನೆಂದೂ ತುಘಲಕ್ ನಾಟಕ ಆಗುತ್ತದೆ ಎಂದು ಭಾವಿಸಲಿಲ್ಲ ಎಂಬ ಗಿರೀಶ್ ಕಾರ್ನಾಡ್ ಅವರ ಮಾತನ್ನು ಸ್ಮರಿಸುತ್ತಾ ಇಂದಿನ ಪ್ರೇಕ್ಷಕ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ನಾಟಕವನ್ನು ಮನೆಯಲ್ಲೇ ಕುಳಿತು ನೋಡಬಲ್ಲ. ಆದ್ದರಿಂದ ಅತ್ಯುತ್ತಮ ನಾಟಕವನ್ನು ರಂಗದ ಮೇಲೆ ತರಬೇಕು. ಒಳ್ಳೆಯ ನಾಟಕವನ್ನು ನೋಡುವಂತೆ ಕೆಟ್ಟ ನಾಟಕವನ್ನೂ ನೋಡಬೇಕು. ಇದು ಬೆಳವಣಿಗೆಗೆ ಸಹಕಾರಿ ಆಗುತ್ತದೆ ಎಂದರು.
ಅತಿಥಿಗಳಾಗಿದ್ದ ರಂಗಾನುಭವದಲ್ಲಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ನಾರಾಯಣ ಶೆಟ್ಟಿ ನಂದಳಿಕೆ, ಡಾ| ಜಿ. ಪಿ. ಕುಸುಮಾ, ನವೀನ್ ಶೆಟ್ಟಿ ಇನ್ನಬಾಳಿಕೆ, ಗೀತಾ ಎಲ್. ಭಟ್, ಗೋಪಾಲ್ ತ್ರಾಸಿ ಹಾಗೂ ಜಗದೀಶ್ ಡಿ. ರೈ ತಮ್ಮ ರಂಗ ಬದುಕಿನಲ್ಲಿನ ಅನುಭವಗಳ ಬಗ್ಗೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ಅಧ್ಯಕ್ಷ ಮಧುಸೂದನ್ ಟಿ. ಆರ್ ಮಾತನಾಡಿ, ಜಾತಿ, ಮತ, ಧರ್ಮ, ಭಾಷೆ, ಶ್ರೀಮಂತ, ಬಡವ ಎಂಬ ಗಡಿಗಳನ್ನು ಮೀರಿ ನಿಂತಿದೆ ರಂಗಭೂಮಿ. ರಂಗಭೂಮಿಗೆ ಸೀಮಿತವಾಗಿರುವ ಕನ್ನಡ ಕಲಾಕೇಂದ್ರ ಪ್ರಥಮವಾಗಿ ವಿಶ್ವ ರಂಗಭೂಮಿ ದಿನವನ್ನು ಆಚರಿಸುತ್ತಿದೆ. ಆ ಮೂಲಕ ಮುಂಬಯಿ ರಂಗಭೂಮಿಯಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದೆ. ಇಂತಹ ಕಾರ್ಯಕ್ರಮಗಳು ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವುದಕ್ಕೆ ಸಹಕಾರಿಯಾಗಲಿದೆ. ಮುಂದೆ ನಮ್ಮ ಯೋಜನೆಯಂತೆ ಮುಂಬಯಿ ರಂಗ ನಿರ್ದೇಶ ಕರಿಂದಲೇ ಮುಂಬಯಿ ಕಲಾ ಸಂಘಟನೆಗಳಿಂದ ಕನಿಷ್ಠ ಐದು ನಾಟಕಗಳೊನ್ನೊಳಗೊಂಡ ನಾಟಕ ಉತ್ಸವ ಆಯೋಜಿಸಲಾಗುವುದು ಎಂದು ತಿಳಿಸಿ ಶುಭ ಹಾರೈಸಿದರು.
ಅರ್ಥಪೂರ್ಣವಾಗಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಕಂಬಾರ ಅವರ ಮಹಾಮಾಯಿ ನಾಟಕದ ದೃಶ್ಯವನ್ನು ಗಣೇಶ್ ಕುಮಾರ್ ಮತ್ತು ಸಾ. ದಯಾ ವಾಚಿಸಿದರು. ಕೇಂದ್ರದ ಸದಸ್ಯ ಭೀಮರಾಯ ಚಿಲ್ಕ ಸ್ವಾಗತಿಸಿದರು. ಯಕ್ಷಗಾನ ಕಲಾವಿದ, ಕೇಂದ್ರದ ಗೌರವ ಪ್ರಧಾನ ಕಾರ್ಯದರ್ಶಿ ರಮೇಶ್ ಬಿರ್ತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಚಿತ್ರ-ವರದಿ: ರೊನಿಡಾ ಮುಂಬಯಿ