Advertisement

Lok sabha Election 2024-ವೈಯಕ್ತಿಕ ಟೀಕೆ ಸರಿಯಲ್ಲ: ಜಯಪ್ರಕಾಶ್‌ ಹೆಗ್ಡೆ

05:16 PM Apr 15, 2024 | Team Udayavani |

ಉದಯವಾಣಿ ಸಮಾಚಾರ
ಕೊಪ್ಪ: ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಬಿಜೆಪಿಗರು ಹೇಳಿದ್ದರು. ಆ ಪ್ರಕಾರ ಈವರೆಗೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಅವರು ಹೇಳಿದ ಮಾತುಗಳನ್ನು ಉಳಿಸಿಕೊಂಡಿಲ್ಲ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಹೇಳಿದರು.

Advertisement

ಪಟ್ಟಣದ ಬಸ್‌ ನಿಲ್ದಾಣದ ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು 20 ತಿಂಗಳ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈ ಭಾಗದ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಕೆಲಸ ಮಾಡಿ ಮತ ಕೇಳಲು ಬಂದಿದ್ದೇನೆ. ಅಭಿವೃದ್ಧಿ ವಿಚಾರ ಇಟ್ಟುಕೊಂಡು ಮಾತನಾಡಬೇಕು. ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ ಎಂದರು.

ಅಡಕೆ ಬೆಳೆಗಾರರ ಸಮಸ್ಯೆಗೆ ನಾನು ಸ್ಪಂದಿಸಿದ್ದೇನೆ. ಗೋರಖ್‌ ಸಿಂಗ್‌ ವರದಿ ಅನುಷ್ಠಾನ ಮಾಡಲು ಅವರಿಗೆ ಎರಡು ಅವ ಧಿಯಲ್ಲಿ ಸಾಧ್ಯವಾಗಲಿಲ್ಲ. ಅಡಕೆ ಬೆಳೆಗಾರರ ಸಮಸ್ಯೆಗೆ ಜಯಪ್ರಕಾಶ್‌ ಹೆಗ್ಡೆ ಸ್ಪಂದಿಸಿಲ್ಲ, ನಾವು ಸ್ಪಂದಿಸಿದ್ದೇವೆ ಎಂದು ಬಿಜೆಪಿಗರು ಹೇಳಿದ್ದಾರೆ. ಅವರು ದಾಖಲೆ ರಹಿತವಾಗಿ ಮಾತನಾಡಬಾರದು ಎಂದು ಹೇಳಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಬಿಜೆಪಿಗರು ಜಾತಿ, ಮತ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ರಾಜಕಾರಣ ಮಾಡುತ್ತಿದ್ದಾರೆ. ದೇಶದ ಹಿತರಕ್ಷಣೆ ಮಾಡುತ್ತೇವೆ ಎನ್ನುವವರು ಈಗ ಚೀನಾ ನಮ್ಮ ದೇಶದ ಪ್ರದೇಶ ಅತಿಕ್ರಮಿಸಿದ್ದರೂ ಸುಮ್ಮನಿದ್ದಾರೆ. ಅವರ ಅವ ಧಿಯಲ್ಲಿ ಪಠಾಣ್‌ ಕೋಟ್‌ ದಾಳಿಯಾಯಿತು. ಯುವಕರಿಗೆ ಉದ್ಯೋಗ ಹುಸಿಯಾಯಿತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನವಾಯಿತು ಎಂದು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎಚ್‌.ಎಂ.ಸತೀಶ್‌ ಮಾತನಾಡಿ, ಮಲೆನಾಡಿನ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿ ಸಲು ಜಯಪ್ರಕಾಶ್‌ ಹೆಗ್ಡೆ ಅವರಿಗೆ ಮಾತ್ರ ಸಾಧ್ಯ. ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್‌ಗೆ ಮತ ಹಾಕಿ ಗೆಲ್ಲಿಸಬೇಕಿದೆ ಎಂದರು.

Advertisement

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಾಳೆಮನೆ ನಟರಾಜ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಕಿಸಾನ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಸಚಿನ್‌ ಮೀಗ, ಶೃಂಗೇರಿ ಕ್ಷೇತ್ರ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ಸಮಿತಿ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಮುಖಂಡರಾದ ವಜ್ರಪ್ಪ, ರಾಜಶಂಕರ್‌, ಎಚ್‌.ಎಸ್‌. ಇನೇಶ್‌, ಅನ್ನಪೂರ್ಣಾ ನರೇಶ್‌, ಸಂತೋಷ್‌ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next