Advertisement

ʼಭಾರತದಲ್ಲಿ ಸರ್ವಾಧಿಕಾರʼ: ರಾಜಕೀಯವಾಗಿ ಸದ್ದು ಮಾಡಿದ ಯೂಟ್ಯೂಬರ್‌ ಧ್ರುವ್‌ ರಥೀ ವಿಡಿಯೋ

04:55 PM Feb 26, 2024 | Team Udayavani |

ಮುಂಬಯಿ: ಖ್ಯಾತ ಯೂಟ್ಯೂಬರ್‌ ಧ್ರುವ್‌ ರಥೀ ಇತ್ತೀಚೆಗೆ ಹಾಕಿರುವ ವಿಡಿಯೋ ರಾಜಕೀಯವಾಗಿ ಸಂಚಲನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ವೈಯಕ್ತಿಕ ದಾಳಿಗಳು ನಡೆಯುತ್ತಿದೆ ಧ್ರುವ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಸಂಪೂರ್ಣವಾಗಿ ವಿಡಿಯೋ ನೋಡಿ ಎಂದು ಮನವಿ ಮಾಡಿದ್ದಾರೆ.

Advertisement

ʼಭಾರತದಲ್ಲಿ ಸರ್ವಾಧಿಕಾರ ʼ ಎನ್ನುವ ಹೆಡ್ಡಿಂಗ್‌ ಕೊಟ್ಟಿರುವ ವಿಡಿಯೋ ಮೂರೇ ದಿನದಲ್ಲಿ 11 ಮಿಲಿಯನ್‌ ವೀಕ್ಷಣೆ ಕಂಡಿದೆ. ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ಕೆಲವೊಂದಿಷ್ಟು ಅಂಶಗಳನ್ನು ವಿಡಿಯೋದಲ್ಲಿ ಹೇಳಲಾಗಿದೆ. ಇದೇ ಕಾರಣದಿಂದ ವಿಡಿಯೋ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದೆ. ಹಲವು ರಾಜಕೀಯ ಮುಖಂಡರು ಇದನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಧ್ರುವ್‌ ರಥೀ ಕೆಲವೊಂದಿಷ್ಟು ಉದಾಹರಣೆಯನ್ನು ಕೊಟ್ಟು ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಬಿಜೆಪಿ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದೆ.

“ವೀಡಿಯೊಗೆ 10 ಮಿಲಿಯನ್ ವೀಕ್ಷಣೆ ಆಗಿದೆ. ಎಲ್ಲಾ ಬಿಜೆಪಿ ಬೆಂಬಲಿಗರಿಗೆ ನನ್ನ ಏಕೈಕ ವಿನಂತಿ- ದಯವಿಟ್ಟು ಮುಕ್ತ ಮನಸ್ಸಿನಿಂದ ಪೂರ್ಣ ವೀಡಿಯೊವನ್ನು ಒಮ್ಮೆ ನೋಡಿ. ನನ್ನ ಮೇಲಿನ ವೈಯಕ್ತಿಕ ದಾಳಿಗಳು ದಿಕ್ಕು ತಪ್ಪಿಸುತ್ತಿವೆ. ನೀವು ನಿಜವಾಗಿಯೂ ರಾಷ್ಟ್ರದ ಬಗ್ಗೆ ಕಾಳಜಿ ವಹಿಸುತ್ತಿದ್ದರೆ ನಿಜವಾದ ಸಮಸ್ಯೆ ತುಂಬಾ ಗಂಭೀರವಾಗಿದೆ. . ಎದ್ದೇಳಿ! ಜೈ ಹಿಂದ್,” ಧ್ರುವ್‌ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಹೇಳಿದ್ದೇನು?: ಯೂಟ್ಯೂಬರ್‌ ಧ್ರುವ್‌ ರಥೀ ತನ್ನ ವಿಡಿಯೋಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಅವರ ಕೆಲವೊಂದು ವಿಡಿಯೋಗಳು ವಿವಾದವನ್ನು ಸೃಷ್ಟಿಸಿದ್ದುಂಟು. ಈ ವಿಡಿಯೋದಲ್ಲಿ ಮೋದಿ ಅವರ ಸರ್ಕಾರದ ಬಗ್ಗೆ ಹೇಳುತ್ತಾ,  ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಭಾರತ ಸರ್ಕಾರವನ್ನು ಸರ್ವಾಧಿಕಾರಿಯಂತೆ ಉತ್ತರ ಕೊರಿಯಾ ಸರ್ಕಾರದೊಂದಿಗೆ ಹೋಲಿಸಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ಕೊನೆಗೊಂಡಿದೆಯೇ ಎನ್ನುವ ಅಂಶದ ಬಗ್ಗೆ ವಿಡಿಯೋದಲ್ಲಿ ಅವರು ಮಾತನಾಡಿದ್ದಾರೆ. ದೇಶದ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ ಕೇಂದ್ರದ ಕೈಗೊಂಬೆಯಂತಿದೆ. ಸರ್ಕಾರ ಅದನ್ನು ತನಗೆ ಬೇಕಾದಂತೆ ಇತರೆ ಪಕ್ಷದ ನಾಯಕರ ವಿರೋಧ ದಾಳಿ ನಡೆಸಲು ಬಳಸುತ್ತಿದೆ ಎನ್ನುವುದನ್ನು ಕೆಲ ಘಟನೆಯ ಉದಾಹರಣೆಯನ್ನು ಕೊಟ್ಟು ಹೇಳಿದ್ದಾರೆ. ಇನ್ನು ದೇಶದ ಚುನಾವಣೆ ಆಯೋಗದ ಬಗ್ಗೆಯೂ ಕೆಲವೊಂದು ವಿಚಾರಗಳನ್ನು ಮುಂದಿಟ್ಟಿದ್ದಾರೆ.

Advertisement

ರೈತರ ಪ್ರತಿಭಟನೆ ಹಾಗೂ ಚಂಡಿಗಢ ಮೇಯರ್‌ ಚುನಾವಣೆಯ ಬಗ್ಗೆಯೂ ವಿಡಿಯೋದಲ್ಲಿ ಹೇಳಲಾಗಿದೆ. ತಾನು ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಮಾತನಾಡಿಲ್ಲ. ವಾಸ್ತವ ಸಂಗತಿಗಳನ್ನು ಮಾತ್ರ ಹೇಳಿದ್ದೇನೆ ಎಂದು ಧ್ರುವ್‌ ಹೇಳಿದ್ದಾರೆ.

ಸದ್ಯ ಧ್ರುವ್‌ ರಥೀ ಅವರ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಧ್ರುವ್‌ ರಥೀ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ. ಈ ವಿಡಿಯೋವನ್ನು ತೆಗೆದು ಹಾಕಬೇಕೆಂದು ಕೇಂದ್ರಕ್ಕೆ ಆಗ್ರಹಿಸಿದ್ದಾರೆ. ಇನ್ನು ಕೆಲವರು ಕಾಂಗ್ರೆಸ್‌ ಸರ್ಕಾರದ ದಿನಗಳ ಪೋಸ್ಟ್‌ ಮಾಡಿ, ಧ್ರುವ್‌ ರಥೀ ವಿಡಿಯೋಗೆ ಮೆಚ್ಚುಗೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next