ಬದಿಯಡ್ಕ: ವಿದೇಶಕ್ಕೆ ತೆರಳುವ ಯುವಕನ ಮೂಲಕ ಉಪಾಯದಿಂದ ಮಾದಕ ವಸ್ತು ಕಳುಹಿಸಿ ಕೊಡಲೆತ್ನಿಸಿದ ಘಟನೆ ಪೆರ್ಲ ಬಳಿ ನಡೆದಿದೆ. ಈ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆಗೆ ಚಾಲನೆ ನೀಡಿದ್ದಾರೆ.ಪ್ರಕರಣ ಸಂಬಂಧ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.
ಪೆರ್ಲ ಬಳಿಯ ಅಮೆಕ್ಕಳ ನಿವಾಸಿ ಸೂಫಿ ಎಂಬವರು ನೀಡಿದ ದೂರಿನಂತೆ ಅಮೆಕ್ಕಳ ನಿವಾಸಿಯಾಗಿರುವ ಔಹಾರ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೂಫಿಯವರ ಪುತ್ರ ಕಬೀರ್ ಪಿ.ಕೆ. ರಜಾ ಅವಧಿಯ ಬಳಿಕ ನಿನ್ನೆ ಮತ್ತೆ ಕತಾರ್ ಗೆ ತೆರಳಿದ್ದಾರೆ. ಇವರು ಕತಾರ್ ಗೆ ತೆರಳುವುದನ್ನರಿತು ಅಮೆಕ್ಕಳದ ಔಹಾರ್ ನಿನ್ನೆ ಬೆಳಿಗ್ಗೆ ಕಬೀರ್‌ನನ್ನು ಭೇಟಿಯಾಗಿ ಅವರಲ್ಲಿ ಒಂದು ಡೈರಿ ನೀಡಿದ್ದು, ಅದನ್ನು ಕತಾರ್ ನಲ್ಲಿರುವ ಖಬೀರ್‌ನ ಅಣ್ಣನಿಗೆ ನೀಡುವಂತೆ ತಿಳಿಸಿದ್ದನು. ಕಬೀರ್ ಕತಾರ್ ಗೆ ಕೊಂಡೊಯ್ಯಲಿರುವ ಸಾಮಾಗ್ರಿಗಳನ್ನು ಸಿದ್ಧ ಪಡಿಸುತ್ತಿದ್ದಾಗ ಔಹರ್ ನೀಡಿದ ಡೈರಿಯನ್ನು ಮನೆಯವರು ತೆರೆದು ನೋಡಿದ್ದು, ಈ ವೇಳೆ ಅದರ ಪುಟಗಳೆಡೆಯಲ್ಲಿ ಬಿಳಿ ಹುಡಿಯನ್ನು ಅಂಟಿಸಿರುವುದು ಕಂಡುಬಂದಿದೆ. ಅದನ್ನು ಪರಿಶೀಲಿಸಿದಾಗ ಅದು ಮಾದಕ ವಸ್ತುವಾದ ಬ್ರೌನ್ ಶುಗರ್ ಎಂದು ತಿಳಿದು ಬಂತು. ಈ ಮಧ್ಯೆ ಕಬೀರ್ ನಿನ್ನೆ ಸಂಜೆ ಕತಾರ್ ಗೆ ತೆರಳಿದ್ದಾರೆ. ಡೈರಿಯಲ್ಲಿ ಅಂಟಿಸಿರುವುದು ಬ್ರೌನ್ ಶುಗರ್ ಆಗಿರುವುದರಿಂದ ಡೈರಿಯನ್ನು ಅವರು ಕೊಂಡೊಯ್ಯಲಿಲ್ಲ. ಕಬೀರ್ ಗಲ್ಫ್ ಗೆ ತೆರಳಿದ ಬಳಿಕ ಅವರ ತಂದೆ ಸೂಫಿ ಬ್ರೌನ್ ಶುಗರ್ ಒಳಗೊಂಡ ಡೈರಿಯನ್ನು ಬದಿಯಡ್ಕ ಠಾಣೆಗೆ ಕೊಂಡೊಯ್ದು ಘಟನೆ ಬಗ್ಗೆ ದೂರು ನೀಡಿದ್ದಾರೆ.
ಇದರಂತೆ ಔಹರ್‌ನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಔಹರ್‌ನ ಪತ್ತೆಗಾಗಿ ಪೊಲೀಸರು ಆತನ ಮನೆಗೂ ದಾಳಿ ನಡೆಸಿದ್ದು, ಆದರೆ ಆತ ಪತ್ತೆಯಾಗಲಿಲ್ಲ. ಆತನಿಗಾಗಿ ಶೋಧ ಮುಂದುವರಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.