ಸುಬ್ರಹ್ಮಣ್ಯ: ಔಷಧಿ ತರಲೆಂದು ಪಂಜಕ್ಕೆ ತೆರಳಿದ್ದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಘಟನೆ ಕೂತ್ಕುಂಜ ಗ್ರಾಮದಲ್ಲಿ ನಡೆದಿದೆ. ಪಲ್ಲೋಡಿ ಹೊಳೆ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಹುಡುಕಾಟ ಆರಂಭವಾಗಿದೆ.
ಪಂಜದ ಕೂತ್ಕುಂಜ ಗ್ರಾಮದ ಕುದ್ವ ಶೇಷಪ್ಪ ಗೌಡ (73) ನಾಪತ್ತೆಯಾಗಿರುವ ವ್ಯಕ್ತಿ.
ಮಾಂಗಳವಾರ ಮಧ್ಯಾಹ್ನ ಶೇಷಪ್ಪ ಗೌಡರು ಮೈ ಹುಷಾರಿಲ್ಲ ಎಂದು ಜ್ವರಕ್ಕೆ ಔಷದ ತರಲು ಪಂಜಕ್ಕೆ ಹೋಗುತ್ತೇನೆ ಎಂದು ಮನೆಯವರಲ್ಲಿ ಹೇಳಿ ಹೋಗಿದ್ದರು. ಸಂಜೆ ಆದರೂ ಮನೆಗೆ ಬರದಿದ್ದರಿಂದ ಮಗ ಹರೀಶ್ ಪಂಜಕ್ಕೆ ಸಂಪರ್ಕಿಸುವ ಕಾಲು ದಾರಿಯಲ್ಲಿ ಹುಡುಕಿಕೊಂಡು ಹೋದಾಗ ತೋಟದ ಬಳಿಯ ತೋಡಿನ ಕಾಲು ಸಂಕದ ಮೇಲೆ ಅಳವಡಿಸಿದ್ದ ಅಡ್ಡ ತುಂಡಾಗಿದ್ದುದು ಗೋಚರಿಸಿದೆ. ಇದರಿಂದ ಸಂಶಯಗೊಂಡು ಅಲ್ಲಿನ ಸಮೀಪದ ನಿವಾಸಿಗಳೊಂದಿಗೆ ಹುಡುಕಾಟ ನಡೆಸಿದಾಗ ತೋಡಲ್ಲಿ ಅವರ ಒಂದು ಚಪ್ಪಲಿ ಪತ್ತೆಯಾಗಿತ್ತು.
ಸುದ್ದಿ ತಿಳಿದು ಸುಳ್ಯದಲ್ಲಿದ್ದ ಕಂದಾಯ ನಿರೀಕ್ಷಕ ಶಂಕರ್ ಎಂ ಎ, ಪೋಲೀಸರು, ಗೃಹ ರಕ್ಷಕ ದಳದವರೊಂದಿಗೆ ರಾತ್ರಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ಮಂಗಳವಾರ ರಾತ್ರಿಯೇ ಕಾರ್ಯಾಚರಣೆಗೆಂದು ಜನರೇಟರ್ ತರಿಸಲಾಗಿತ್ತು. ಆದರೆ ನೀರಿಗೆ ಬಿದ್ದಿದ್ದರೆ ಹೊಳೆ ಸೇರುವ ಸಾಧ್ಯತೆ ಇರುವುದರಿಂದ ಬುಧವಾರ ಮುಂಜಾನೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ, ಮುಳುಗು ತಜ್ಞರು ಆಗಮಿಸಿ ಹುಡುಕಾಟ ಆರಂಭಿಸಿದ್ದಾರೆ. ಬುಧವಾರ ಮಧ್ಯಾಹ್ನ ಸುಳ್ಯ ತಹಶೀಲ್ದಾರ್ ಕುಂಞ್ಞ ಅಹಮದ್ ಅವರು ಸ್ಥಳಕ್ಕೆಆಗಮಿಸಿ ಹುಡುಕಾಟ ಕಾರ್ಯದ ಬಗ್ಗೆ ಮಾಹಿತಿ ಪಡೆದರು.