Advertisement

ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆ; ವಿವಿಧೆಡೆ ಹಾನಿ

12:31 AM Jul 23, 2019 | sudhir |

ಕಾಪು: ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರತೀ ಅರ್ಧ ಗಂಟೆಗೊಮ್ಮೆ ಎಂಬಂತೆ ಕಾಪು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದ ಜಡಿಮಳೆ ಸುರಿದಿದ್ದು, ಮಳೆಯೊಂದಿಗೆ ಗಾಳಿಯೂ ಬೀಸಿದ ಪರಿಣಾಮ ಅಲ್ಲಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಗಾಳಿ, ಮಳೆಯಿಂದಾಗಿ ಕಡಲ ಅಬ್ಬರ ಕೂಡಾ ಹೆಚ್ಚಾಗಿದೆ.

Advertisement

ಸೋಮವಾರ ಬೆಳಗ್ಗೆ ಮುಕ್ತಾಯ ಗೊಂಡ 24 ಗಂಟೆಯ ಮಳೆ ಲೆಕ್ಕಾಚಾರದಂತೆ ಕಾಪು ತಾಲೂಕಿನಲ್ಲಿ 13.06 ಮಿ. ಮೀ. ಮಳೆ ಸುರಿದಿದೆ ಎಂದು ತಾಲೂಕು ಕಚೇರಿಯ ಪ್ರಕಟನೆ ತಿಳಿಸಿದೆ.

ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧ ಗೊಂಡಿದ್ದು, ವಿಪರೀತ ಹವಾಮನಾ ವೈಪರೀತ್ಯದಿಂದಾಗಿ ಮೀನುಗಾರಿಕೆಗೆ ತೊಂದರೆಯುಂಟಾಗಿದೆ. ಕಾಪು ತಾಲೂಕಿನಾದ್ಯಂತ ಕರಾವಳಿ ಭಾಗದಲ್ಲಿ ಸಾವಿರಾರು ಮೀನುಗಾರರು ನಾಡ ದೋಣಿ ಮೀನುಗಾರಿಕೆಯನ್ನು ಅವಲಂ ಭಿಸಿದ್ದು, ಮೀನುಗಾರಿಕೆ ವಿಳಂಬವಾಗಿರು ವುದರಿಂದ ಮೀನುಗಾರ ಕುಟುಂಬಗಳು ಕಂಗಾಲಾಗಿವೆ.

ಈಗಾಗಲೇ ಒಂದೂವರೆ ತಿಂಗಳ ಮಳೆಗಾಲದ ಮೀನುಗಾರಿಕಾ ಕಸುಬು ಕೈತಪ್ಪಿ ಹೋಗುವಂತಾಗಿದೆ ಎಂದು ಮೀನುಗಾರ ಮುಖಂಡ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್‌ ಬಂಗೇರ ದೂರಿದ್ದಾರೆ.

ಪಡುಬಿದ್ರಿ: ಎರ್ಮಾಳು, ಉಚ್ಚಿಲ ಮತ್ತು ಪಡುಬಿದ್ರಿ ಆಸುಪಾಸಿ ನಲ್ಲಿ ಭಾರೀ ಮಳೆ, ಗಾಳಿಗೆ ಮನೆ ಹಾಗೂ ಪಂಪ್‌ ಶೆಡ್‌ ಒಂದಕ್ಕೆ ಹಾನಿಯಾಗಿರುವ ಕುರಿತು ವರದಿಯಾಗಿದೆ.

Advertisement

ಎರ್ಮಾಳು ತೆಂಕ ಗ್ರಾಮದ ಶೋಭಾ ದೇವಾಡಿಗ ಎಂಬವರ ಪಂಪು ಶೆಡ್ಡಿಗೆ ವಿದ್ಯುತ್‌ ಕಂಬವು ಉರುಳಿ ಸುಮಾರು 60,000ರೂ. ನಷ್ಟ ಸಂಭವಿಸಿರುವುದಾಗಿ ತೆಂಕ ಗ್ರಾಮ ಕರಣಿಕ(ಪ್ರಭಾರ) ಶ್ಯಾಮ್‌ಸುಂದರ್‌ ತಿಳಿಸಿದ್ದಾರೆ.

ಬಡಾ ಗ್ರಾಮದ ನಾಗಮ್ಮ ಸುವರ್ಣರ ಮನೆ ಮಾಡಿನ ಹೆಂಚುಗಳು ಬಲವಾಗಿ ಬೀಸಿದ್ದ ಗಾಳಿಯಿಂದಾಗಿ ಹಾರಿಹೋಗಿದ್ದು ಸುಮಾರು 20,000 ರೂ. ನಷ್ಟವಾಗಿರಬಹುದಾಗಿ ಬಡಾ ಗ್ರಾ. ಪಂ. ಗ್ರಾಮ ಕರಣಿಕ ಜಗದೀಶ್‌ ಹೇಳಿದರು.

ಪಡುಬಿದ್ರಿ ಕಾಡಿಪಟ್ಣ ವಾಮನ್‌ ಕರ್ಕೇರ ಮನೆ ಬಳಿ ಕಡಲ್ಕೊರೆತವು ಕಾಣಿಸಿಕೊಂಡಿರುವುದಾಗಿ ಪಡು ಬಿದ್ರಿ ಗ್ರಾ. ಪಂ. ವಿಎ ಶ್ಯಾಮ್‌ಸುಂದರ್‌ ತಿಳಿಸಿದ್ದು ಸಮುದ್ರವು ಪ್ರಕ್ಷುಬ್ಧವಾಗಿರುವುದರಿಂದ ಇಲ್ಲಿ ತೀರ ಪ್ರದೇಶದಲ್ಲಿ ಕುಳಿ ಬಿದ್ದಿರುವುದರಿಂದ ಅಲ್ಪ ಪ್ರಮಾಣದ ಕೊರೆತ ಕಂಡು ಬಂದಿರುವುದಾಗಿ ಅವರು ಹೇಳಿದ್ದಾರೆ.

ಪಡುಬಿದ್ರಿ ಆಸುಪಾಸಿನಲ್ಲಿಂದು ಅಪರಾಹ್ನದ ಬಳಿಕ ಭಾರೀ ಮಳೆಯಾಗಿ ರುವುದಾಗಿ ವರದಿಯಾಗಿದೆ.

ಉಡುಪಿ: ಉಡುಪಿ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿಯೂ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಸಾಮಾನ್ಯ ಜನಜೀವನದ ಮೇಲೆ ಪರಿಣಾಮವನ್ನುಂಟು ಮಾಡಿದೆ. ಸೋಮವಾರವೂ ನಿರಂತರ ಮಳೆ ಸುರಿದಿದೆ. ಪರಿಣಾಮವಾಗಿ ನಗರದಲ್ಲಿ ಜನಸಂಚಾರ ಕೊಂಚ ವಿರಳವಿತ್ತು.

ಕಳೆದೆರಡು ದಿನಗಳ ಮಳೆ ನಗರದಲ್ಲಿಯೂ ಪೂರ್ಣ ಮಳೆಗಾಲದ ಅನುಭವ ನೀಡಿದೆ. ಸೆಕೆಯನ್ನು ದೂರ ಮಾಡಿದೆ. ಆದರೆ ರಾಷ್ಟ್ರೀಯ ಹೆದ್ದಾರಿ 169ಎಯ ಇಂದ್ರಾಳಿ, ಲಕ್ಷ್ಮೀಂದ್ರನಗರ ಮೊದಲಾದೆಡೆ ಪ್ರಗತಿಯಲ್ಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದಾಗಿ ವಾಹನ ಸವಾರರ ಸಂಕಷ್ಟ ಮುಂದುವರಿದಿದೆ.

7 ವಿದ್ಯುತ್‌ ಕಂಬಗಳಿಗೆ ಹಾನಿ

ಗಾಳಿ-ಮಳೆಯಿಂದ ರವಿವಾರ ರಾತ್ರಿ ಮೆಸ್ಕಾಂ ಉಡುಪಿ ವಿಭಾಗ ವ್ಯಾಪ್ತಿಯ ಮಲ್ಪೆ ಭಾಗದಲ್ಲಿ 3, ಉದ್ಯಾವರದಲ್ಲಿ 2 ಹಾಗೂ ಅಂಬಾಗಿಲಿನಲ್ಲಿ 2 ಕಂಬಗಳು ಧರಾಶಾಹಿಯಾಗಿ ಹಾನಿಯಾಗಿವೆ.

ಸೋಮವಾರ ಬೆಳಗ್ಗೆ ಉದ್ಯಾವರ ಕಂಪನ್‌ಬೆಟ್ಟಿನ ಸುಮತಿ ಬೆಳ್ಚಡ್ತಿ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿ ಅಂದಾಜು 50,000 ರೂ. ನಷ್ಟ ಉಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next