ಹುಬ್ಬಳ್ಳಿ: ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಖ್ಯ. ಗುರಿಗೆ ಸಾಧಿಸಲು ತಕ್ಕ ಪರಿಶ್ರಮ ವಹಿಸಬೇಕು. ಅಂದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಗದಗ ಎಸ್‌ಪಿ ಶ್ರೀನಾಥ ಜೋಶಿ ಹೇಳಿದರು.
ಇಲ್ಲಿನ ನ್ಯೂ ಕಾಟನ್ ಮಾರ್ಕೆಟ್ ರಸ್ತೆಯ ಸಾಂಸ್ಕೃತಿಕ ಭವನದಲ್ಲಿ ನಡೆದ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪಿಯು ವಿಜ್ಞಾನ ಮಹಾವಿದ್ಯಾಲಯದ ವಾರ್ಷಿಕೋತ್ಸವ ಮತ್ತು ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮುನ್ನ ಆಶಾವಾದಿಗಳಾಗಿ ಸಮರ್ಪಕವಾಗಿ ಆಲೋಚಿಸಬೇಕು. ಆಯ್ಕೆ ಮಾಡಿಕೊಂಡ ಮಾರ್ಗ ಖಚಿತವಾಗಿದ್ದರೆ ಸಾಧನೆ ಶತಸಿದ್ಧ ಎಂದರು.
ಕಿರುತೆರೆ ನಟ ವಿನಯ ಮಾತನಾಡಿ, ತಾವು ವಿದ್ಯಾನಿಕೇತನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದ ನೆನಪುಗಳನ್ನು ಮೆಲಕು ಹಾಕಿದರು. ವಿದ್ಯಾರ್ಥಿಯು ಆತ್ಮವಿಶ್ವಾಸ ಹೊಂದಿ ಸರಿಯಾಗಿದ್ದುದನ್ನು ಮಾತ್ರ ಮೈಗೂಡಿಸಿಕೊಂಡು, ಬೇಡವಾದದ್ದನ್ನು ದೂರವಿರಿಸಬೇಕು ಎಂದರು.
ಮಹಾವಿದ್ಯಾಲಯದಿಂದ 2018-19ರ ಸಾಲಿನ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು, ಐಐಟಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಮತ್ತು ಕೆಸೆಟ್‌ನಲ್ಲಿ ಉತ್ತಮ ರ್‍ಯಾಂಕ್ ಪಡೆದ ಹತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆ ಕಾರ್ಯದರ್ಶಿ ಅನಿಲಕುಮಾರ ಚೌಗಲಾ ಅವರಿಗೆ ಅಖೀಲ ಕರ್ನಾಟಕ ಜೈನ ಶಿಕ್ಷಕರ ವೇದಿಕೆ 2019ರ ದಶಮಾನೋತ್ಸವ ಸಂಭ್ರಮದಲ್ಲಿ ನೀಡಲಾದ ಜ್ಞಾನಶ್ರೀ ಪ್ರಶಸ್ತಿ ನೀಡಿದ್ದು, ಮಹಾವಿದ್ಯಾಲಯದ ಪರವಾಗಿ ಗೌರವಿಸಲಾಯಿತು.
ನಿರ್ದೇಶಕರಾದ ಲಗಮಣ್ಣ ಚೌಗಲೆ, ಡಾ| ರಮೇಶ ಭಂಡಿವಾಡ ಮೊದಲಾದವರು ಇದ್ದರು. ಪ್ರಾಚಾರ್ಯ ಡಾ| ಆನಂದ ಮುಳಗುಂದ ಅಧ್ಯಕ್ಷತೆ ವಹಿಸಿ ವಾರ್ಷಿಕ ವರದಿ ವಾಚಿಸಿದರು. ಸಂಸ್ಥೆಯ ನಿರ್ದೇಶಕ ಪ್ರೊ| ಗಂಗಾಧರ ಕಮಡೊಳ್ಳಿ ಸ್ವಾಗತಿಸಿದರು. ಪ್ರೊ| ಫಿಲೋಮಿನಾ, ಪ್ರೊ| ಅಜಿಮಖಾನ, ಪ್ರೊ|ಅನ್ನಪೂರ್ಣಾ ನಿರೂಪಿಸಿದರು. ಕಾರ್ಯಾಧ್ಯಕ್ಷೆ ಶ್ರೀದೇವಿ ಚೌಗಲಾ ವಂದಿಸಿದರು.