Advertisement

ಭೂಸ್ವಾಧೀನದಲ್ಲಿ  ಅಕ್ರಮ: ತನಿಖೆಗೆ ಆಗ್ರಹ

12:25 PM Jun 30, 2018 | |

ಪೆರ್ಮುದೆ : ಪೆರ್ಮುದೆ, ಕುತ್ತೆತ್ತೂರು ಗ್ರಾಮದ ಎಂಆರ್‌ಪಿಎಲ್‌ ನ 4ನೇ ಹಂತದ ವಿಸ್ತರಣಾ ಘಟಕದ 1011 ಎಕ್ರೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮತ್ತು ಸಿಬಂದಿ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಪೆರ್ಮುದೆ ಹಾಗೂ ಕುತ್ತೆತ್ತೂರು ಗ್ರಾಮಸ್ಥರು ಪೆರ್ಮುದೆ ಗ್ರಾಮ ಸಭೆಯಲ್ಲಿ ಅಗ್ರಹಿಸಿದರು. ಪೆರ್ಮುದೆ ಗ್ರಾ. ಪಂ. ವ್ಯಾಪ್ತಿಯ ಪೆರ್ಮುದೆ ಮತ್ತು ಕುತ್ತೆತ್ತೂರು ಗ್ರಾಮಗಳ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಗ್ರಾ. ಪಂ. ಅಧ್ಯಕ್ಷೆ ಸರೋಜಾ ಅವರ ಅಧ್ಯಕ್ಷತೆಯಲ್ಲಿ ಪೆರ್ಮುದೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಶುಕ್ರವಾರ ನಡೆಯಿತು.

Advertisement

ಭೂಸ್ವಾದೀನ ಪ್ರಕ್ರಿಯೆಯಲ್ಲಿ ಎಲ್ಲ ಭೂಮಾಲಕರಿಗೆ ನೋಟೀಸು ಜಾರಿ ಮಾಡಿಲ್ಲ. ವಿಚಾರಣ ಸಂದರ್ಭದಲ್ಲಿ ಕಚೇರಿಗೆ ಲಿಖೀತ ರೂಪದಲ್ಲಿ ಅಕ್ಷೇಪಣೆ ಕೊಡಲಾಗಿತ್ತು. ಆದರೆ ಅದನ್ನು ತಳ್ಳಿ ಹಾಕಲಾಗಿದೆ ಎಂದರು. ಒಪ್ಪಿಗೆ ಇಲ್ಲದ ರೈತರ ಜಾಗವನ್ನು ತನಿಖೆ ಮಾಡದೇ ಸುಳ್ಳು ವರದಿ ಮಾಡಲಾಗಿದೆ. ಕೆಐಎಡಿಬಿ ಕಾಯ್ದೆ ಕಲಂ 3(1),1(3), ಮತ್ತು 28 (1) ರಡಿ ಪ್ರಾಥಮಿಕ ಅಧಿಸೂಚನೆಗೆ ಪ್ರಸ್ತಾಪಿಸಿರುವ ಜಾಗಗಳಿಗೆ ಸಂಬಂಧಿಸಿದ ಚೆಕ್‌ಲಿಸ್ಟ್‌ನಲ್ಲಿ ಸುಳ್ಳು ಮಾಹಿತಿ ನೀಡಿ ಸರಕಾರವನ್ನು ದಾರಿ ತಪ್ಪಿಸುವ ಕಾರ್ಯ ಮಾಡಲಾಗಿದೆ. ಈ ಹಿಂದೆ 2 ಗ್ರಾಮ ಸಭೆಯಲ್ಲಿ ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿ, ಗ್ರಾಮ ಸಭೆಯಲ್ಲಿ ನಿರ್ಣಯ ತೆಗೆದುಕೊಂಡರೂ ಅದನ್ನು ಕಡೆಗಣಿಸಲಾಗಿದೆ. ಈ ಕೂಡಲೇ ಭೂ ಸ್ವಾಧೀನ ಪ್ರಕ್ರಿಯೆಯ ವಿರುದ್ಧ ನಿರ್ಣಯ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಮುಖ್ಯಮಂತ್ರಿ, ಕೆಐಎಡಿಬಿ, ವಿಶೇಷ ಜಿಲ್ಲಾಧಿಕಾರಿ ಬೆಂಗಳೂರು, ದ.ಕ. ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡವಂತೆ ಗ್ರಾಮಸ್ಥರು ಸಭೆಯಲ್ಲಿ ಮನವಿ ಮಾಡಿದರು.

ಭೂಸ್ವಾಧೀನ ಪ್ರಕ್ರಿಯೆಯ ಮೊದಲೇ ಆರ್‌ಟಿಸಿಯಲ್ಲಿ ಭೂಸ್ವಾಧೀನ ಎಂದು ನಮೂದಿಸಲಾಗಿದೆ. ಈ ಬಗ್ಗೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ನಮಗೆ ಯಾವುದೇ ಕೃಷಿ ಸಾಲ ಸಿಗದಂತಾಗಿದೆ ಎಂದು ರೈತರು ಅಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮಕರಣಿಕ ಜಗದೀಶ್‌ ಜು.17ರಂದು ಬಜಪೆಯಲ್ಲಿ ನಡೆಯುವ ಕಂದಾಯ ಅದಾಲತ್‌ನಲ್ಲಿ ಅರ್ಜಿ ನೀಡಿ ಸರಿಪಡಿಸಬಹುದು ಎಂದರು.

ಸೆ.16ರೊಳಗೆ 94ಸಿಸಿ ಅರ್ಜಿ ನೀಡಿ
ಸರಕಾರಿ ಜಾಗದಲ್ಲಿ ಜ.1 2015ರ ಮುಂಚೆ ಮಾಡಿ ಅರ್ಜಿ ಸಲ್ಲಿಸದವರು ಸೆ.16ರೊಳಗೆ 94ಸಿಸಿ ಅರ್ಜಿ ನೀಡಬೇಕು ಎಂದು ಜಗದೀಶ್‌ ಹೇಳಿದರು.

ಪಡುಪೆರಾರ, ಕೊಳಂಬೆಯಲ್ಲಿ 4ಮಂದಿಗೆ ಮಲೇರಿಯಾ
ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಪಡುಪೆರಾರ ಮತ್ತು ಕೊಳಂಬೆಯಲ್ಲಿ ಒಟ್ಟು 4ಮಂದಿಗೆ ಮಲೇರಿಯಾ ಪತ್ತೆಯಾಗಿದೆ. ಈ ಬಗ್ಗೆ ಗ್ರಾಮಸ್ಥರು ಪರಿಸರದಲ್ಲಿ ನೀರು ನಿಲ್ಲದಂತೆ, ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕಿ ಸಭೆಯಲ್ಲಿ ತಿಳಿಸಿದರು. 

Advertisement

ಪೋಷಕಾಂಶದ ಕೊರತೆ
ಹುಣ್ಸೆಕಟ್ಟೆಯಲ್ಲಿ 4ವರ್ಷದ ಮಗುವನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸದೇ ಪೋಷಕಾಂಶದ ಕೊರತೆ ಎದುರಿಸುತ್ತಿದೆ. ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಪೋಷಕರು ಕಳುಹಿಸಿ ಎಂದು ಮೇಲ್ವಿಚಾರಕಿ ಸಭೆಯಲ್ಲಿ ತಿಳಿಸಿದರು. ಮಂಗಳೂರು ತಾಲೂಕು ಪಂಚಾಯತ್‌ ಮುಖ್ಯ ಕಾರ್ಯಾನಿರ್ವಹಣಾಧಿಕಾರಿ ಸದಾನಂದ ಅವರು ನೋಡೆಲ್‌ ಅಧಿಕಾರಿಯಾಗಿದ್ದರು. 

ಗ್ರಾ.ಪಂ. ಉಪಾಧ್ಯಕ್ಷ ಕಿಶೋರ್‌, ತಾ.ಪಂ. ಸದಸ್ಯೆ ಶಶಿಕಲಾ ಶೆಟ್ಟಿ, ಜಿ.ಪಂ. ಸದಸ್ಯೆ ವಸಂತಿ ಕಿಶೋರ್‌, ಗ್ರಾ. ಪಂ. ಸದಸ್ಯರು, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ನಾಗೇಶ್‌ ಅವರು ವಾರ್ಡ್‌ ಸಭೆಯ ನಡವಳಿ ವಾಚಿಸಿದರು. ಪಿಡಿಒ ಹಸನಬ್ಬ ನಿರ್ವಹಿಸಿದರು.

ಸರಕಾರಿ ಬಸ್‌ ಕಲ್ಪಿಸಿ
ಕುತ್ತೆತ್ತೂರು ಪ್ರದೇಶಕ್ಕೆ ಬರುವ ಕೆಲ ಖಾಸಗಿ ಬಸ್‌ಗಳು ಸಂಚಾರ ಮೊಟಕುಗೊಳಿಸುತ್ತಿದ್ದು, ಅಂತಹ ಬಸ್‌ಗಳ ಪರ್ಮಿಟ್‌ ಅನ್ನು ರದ್ದುಗೊಳಿಸಬೇಕು. ಕೂಡಲೇ ಇಲ್ಲಿಗೆ 2 ಸರಕಾರಿ ಬಸ್‌ ಗಳನ್ನು ನಿಯೋಜಿಸಬೇಕು ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗುವುದು ಎಂದು ನಿರ್ಣಯ ತೆಗೆದುಕೊಂಡರು.

ಪ್ರಾಕೃತಿಕ ವಿಕೋಪ: 48ಗಂಟೆಯಲ್ಲಿ ಪರಿಹಾರ 
ಎಲ್ಲಿಯಾದರೂ ಪ್ರಾಕೃತಿಕ ವಿಕೋಪಕ್ಕೆ ಹಾನಿಯಾದರೆ ಗ್ರಾಮ ಕರಣಿಕ ಅಥವಾ ತಾಲೂಕು ಪ್ರಾಕೃತಿಕ ವಿಕೋಪ ಕೇಂದ್ರಕ್ಕೆ ಮನವಿ ಮಾಡಿ 48 ಗಂಟೆಯೊಳಗೆ ಪರಿಹಾರ ಸಿಗಲಿದೆ ಎಂದು ಗ್ರಾಮ ಕರಣಿಕ ಜಗದೀಶ್‌ ಸಭೆಯಲ್ಲಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next