ಕುಡುಬಿ ಜನಾಂಗದ ಸಂಸ್ಕೃತಿ, ಕಲೆ ಉಳಿಸುವ ಪರ್ವ ಬಜಪೆ : ಸಂಸ್ಕೃತಿ, ಪರಂಪರೆ, ಭಾಷೆ, ಕಲೆ ಉಳಿಸುವ ಪರ್ವ ಹೋಳಿ ಸಂಭ್ರಮವನ್ನು ಪೆರ್ಮುದೆ ಕುಡುಬಿ ಸಮಾಜದ ರಾಮಗುರಿಕಾರರ ಮನೆಯಲ್ಲಿ 9 ದಿನಗಳ ಕಾಲ ಆಚರಿಸಲಾಗುತ್ತದೆ.
ಶುಕ್ರವಾರ ಮಧ್ಯಾಹ್ನ ರಾಯಭಾರಿ ಹೊನ್ನಯ್ಯ ಗೌಡರ ಮನೆಯಿಂದ ಮಲ್ಲಿಕಾರ್ಜುನ ದೇವರ ಮೂರ್ತಿಯನ್ನು ವಾದ್ಯ, ಚೆಂಡೆ, ವಿವಿಧ ವೇಷಗಳೊಂದಿಗೆ ರಾಮ ಗುರಿಕಾರರ ಮನೆಗೆ ಮೆರವಣಿಗೆಯಲ್ಲಿ ತರಲಾಯಿತು. ಗುರಿಕಾರರ ಮನೆಯಲ್ಲಿ ಗುಮ್ಮಟೆ ಹಾಗೂ ಕೋಲಾಟ ಹಾಗೂ ವಿವಿಧ ವೇಷಗಳ ನೃತ್ಯ, ಚಿಕ್ಕ ಬಾಲಕರ ಯಕ್ಷಗಾನ ನೃತ್ಯ ಮೊದಲಾದ ವಿವಿಧ ವಿನೋಧವಾಳಿಗಳು ಶನಿವಾರ ಮುಂಜಾನೆಯ ತನಕ ನಡೆಯಲಿದೆ.
ಕೊನೆಯಲ್ಲಿ ಕುಡುಬಿ ಕೊಂಕಣಿ ಪದ್ಯದಲ್ಲಿ ಕೋಲಾಟದಲ್ಲಿಯೇ ಸೇತುಕಟ್ಟಿ ರಾವಣನ ಸಂಹಾರ ಮಾಡಿ ಸೀತೆಯನ್ನು ಕರೆದುಕೊಂಡು ಬರುವ ಪ್ರಕ್ರಿಯೆ ಇಲ್ಲಿ ನಡೆಯುತ್ತದೆ. ಆ ಬಳಿಕ ಎಲ್ಲರೂ ಹಾಕಿದ ಬಟ್ಟೆ ತೆಗೆದು ಬೆಂಕಿಗೆ ಹಾಕಿ ಸ್ನಾನ ಮಾಡಿ ಬರುತ್ತಾರೆ. ಇದು ಸೀತೆಯ ಪವಿತ್ರತೆಯ ಬಗ್ಗೆ ಹೇಳಲಾಗುತ್ತದೆ. ಇಲ್ಲಿಗೆ ಹೋಳಿ ಹಬ್ಬ ಸಂಪನ್ನಗೊಳ್ಳುತ್ತದೆ. ಜಿಲ್ಲೆಯಲ್ಲಿ ಮಿಜಾರು, ಎಡಪದವು, ಕೊಂಪದವು, ಮುಚ್ಚಾರು, ಬಜಪೆ, ಪೆರ್ಮುದೆ, ಎಕ್ಕಾರು, ಪುತ್ತಿಗೆ, ಕಡಂದಲೆ, ಸಿದ್ದಕಟ್ಟೆ, ಕೊಣಾಜೆ, ಕುತ್ತಾರಿನಲ್ಲಿ ಹೆಚ್ಚಾಗಿ ಕುಡುಬಿ ಸಮಾಜದವರನ್ನು ಕಾಣಬಹುದು.
ಶಿವರಾತ್ರಿ ದಿನ ಶುರುವಾಗುತ್ತದೆ ಹೋಳಿಗೆ ಪೂರ್ವ ತಯಾರಿ
ಒಂದು ವಾರ್ಡ್‌ಗೆ ಒಬ್ಬ ಗುರಿಕಾರ, ಒಬ್ಬ ರಾಯಭಾರಿ, 5 ಮಂದಿ ಮನೆತನದ ಮುಖ್ಯಸ್ಥರು ಇರುತ್ತಾರೆ. ಶಿವರಾತ್ರಿಯ ದಿನ ಗುರಿಕಾರನ ಮನೆಯಲ್ಲಿ ಈ 5 ಮಂದಿ ಸಮಾಜದ ಮನೆತನದ ಮುಖ್ಯಸ್ಥರಿಗೆ ಗುಮ್ಮಟೆಯನ್ನು ನೀಡಿ ಮಾರ್ಯಾದೆ ನೀಡಲಾಗುತ್ತದೆ. ಅದೇ ದಿನ ಹೋಳಿ ಶುರುವಾಗುತ್ತದೆ. ಅಂದಿನಿಂದ ಹುಣ್ಣಮೆ ತನಕ ಗುರಿಕಾರನ ಮನೆಯಲ್ಲಿ ಹಬ್ಬದ ಪೂರ್ವ ತಯಾರಿ ನಡೆಯುತ್ತದೆ.
ಮನೆಮನೆಯಲ್ಲಿ ಹೋಳಿ ಆಚರಣೆ
ಹುಣ್ಣಿಮೆ ದಿನದಿಂದ ಸಂಜೆಯ ವೇಳೆ ಮನೆಮನೆಗೆ ತೆರಳಿ ಗುಮ್ಮಟೆಯನ್ನು ಬಾರಿಸಿ ಹೋಳಿ ಆಚರಿಸುತ್ತಾರೆ. ಮನೆಮನೆಯಲ್ಲಿ ಇವರಿಗೆ ಬೆಲ್ಲ, ತೆಂಗಿನಕಾಯಿಯನ್ನು ಕೊಡುವ ಕ್ರಮ ಇದೆ. ಅದೇ ದಿನ ಗುರಿಕಾರ ಮನೆಯಲ್ಲಿ ಹೋಳಿಯ ಹಬ್ಬ ಆಚರಣೆ ಬಗ್ಗೆ ದಿನ ನಿಗದಿ ಆಗುತ್ತದೆ. ಹುಣ್ಣಿಮೆಯಿಂದ ವಿವಿಧ ಕಡೆಗಳಲ್ಲಿ 3, 5, 7, 9 ಬೆಸ ಸಂಖ್ಯೆಯಲ್ಲಿ ಹೋಳಿಯ ದಿನ ಆಚರಣೆ ನಿಗದಿ ಮಾಡಲಾಗುತ್ತದೆ. ಸೀತೆ ಯನ್ನು ತಯಾರಿಯ ದ್ಯೋತಕವಾಗಿ 18 ವರ್ಷದ ಕೆಳಗಿನ ಹುಡುಗನನ್ನು ಸೀತೆಯನ್ನಾಗಿ ನೇಮಕ ಮಾಡಲಾಗುತ್ತದೆ.