Advertisement

ರವಿವಾರವೂ ಸಂತೆ ವ್ಯಾಪಾರಕ್ಕೆ ಅನುಮತಿ ನೀಡಿ: ಮನೋಹರ್‌ ಶೆಟ್ಟಿ

09:18 PM Sep 23, 2020 | mahesh |

ಸುರತ್ಕಲ್‌: ಇಲ್ಲಿನ ಸಂತೆ ವ್ಯಾಪಾರಸ್ಥರ ಸಭೆಯು ಸುರತ್ಕಲ್‌ ಪಾಲಿಕೆಯ ಉಪಕಚೇರಿಯಲ್ಲಿ ಬುಧ ವಾರ ಜರಗಿತು. 30 ವರ್ಷಗಳಲ್ಲಿ ನಡೆಯುತ್ತಿರುವ ರವಿವಾರದ ಸಂತೆಗೆ ಅನುಮತಿ ನೀಡಬೇಕು ಎಂದು ಇಂಟಕ್‌ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ ಅವರು ಇಂಟಕ್‌ ಸಂತೆ ವ್ಯಾಪಾರಸ್ಥರ ಒಕ್ಕೂಟದ ಪರವಾಗಿ ಮನವಿ ಮಾಡಿದರು.

Advertisement

ಬುಧವಾರದ ಸಂತೆ ಅಧಿಕೃತವಾಗಿದ್ದು, ಅನುಮತಿಯಿದೆ. ಬೃಹತ್‌ ಕೈಗಾರಿಕೆಗಳು ಸುರತ್ಕಲ್‌ ಸುತ್ತಮುತ್ತ ಆರಂಭವಾದಾಗ ಸಾವಿರಾರು ಕಾರ್ಮಿಕರ ಅನುಕೂಲಕ್ಕಾಗಿ ವಾರದ ರಜಾದಿನವಾದ ರವಿವಾರ ವ್ಯಾಪಾರಿಗಳು ಸಂತೆ ಆರಂಭಿಸಿದ್ದಾರೆ. 30 ವರ್ಷಗಳಲ್ಲಿ ಯಾರದ್ದೂ ಆಕ್ಷೇಪ ಇರಲಿಲ್ಲ. ಇದೀಗ ಬಡವರ ವ್ಯಾಪಾರಕ್ಕೆ ಅಡ್ಡಿಯುಂಟು ಮಾಡುವುದು ಉಚಿತವಲ್ಲ ಎಂದು ನುಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯ ಮನಪಾ ಸದಸ್ಯ ವರುಣ್‌ ಚೌಟ ಸುರತ್ಕಲ್‌ ಅವರು, ಮಾರುಕಟ್ಟೆ ವ್ಯಾಪಾರಸ್ಥರು ರವಿವಾರದ ಸಂತೆ ವ್ಯಾಪಾರಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಹಾಗಾಗಿ ಸಂತೆ ವ್ಯಾಪಾರಕ್ಕೆ ಅನುಮತಿ ನೀಡುವ ಬಗ್ಗೆ ಪಾಲಿಕೆಯಲ್ಲಿ ಚರ್ಚೆಯಾಗ ಬೇಕಿದೆ ಎಂದರು.

ಉಪಮೇಯರ್‌ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ಕಿರಣ್‌ ಕುಮಾರ್‌ ಕೋಡಿಕಲ್‌, ಮನಪಾ ಸದಸ್ಯರಾದ ಸುಮಿತ್ರಾ ಕರಿಯ, ಶ್ವೇತಾ ಎ., ನಯನಾ ಆರ್‌. ಕೋಟ್ಯಾನ್‌, ಸರಿತಾ ಶಶಿಧರ್‌, ಲಕ್ಷ್ಮೀ ಶೇಖರ್‌ ದೇವಾಡಿಗ, ಲೋಕೇಶ್‌ ಬೊಳ್ಳಾಜೆ, ಇಂಟಕ್‌ನ ರಾಜ್ಯ ಕಾರ್ಯದರ್ಶಿ ಸುರೇಶ್‌, ವಿನೋದ್‌ ರಾಜ್‌, ಸಂತೆ ವ್ಯಾಪಾರಸ್ಥರ ಒಕ್ಕೂಟದ ಮಹಮ್ಮದ್‌, ಮನಪಾ ಸದಸ್ಯರುಗಳು, ಅಧಿ ಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ರವಿವಾರ ಸಂತೆ ಅನುಮತಿಗೆ ಮನವಿ
ಸ್ಥಾಯೀ ಸಮಿತಿ ಸಭೆಯಲ್ಲಿ ಚರ್ಚಿಸಿ ರವಿವಾರದ ಸಂತೆಗೆ ಅನುಮತಿ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ಆಯುಕ್ತ ಶ್ರೀಧರ್‌ ಹೇಳಿದರು. ಪಾಲಿಕೆಯಿಂದ ಅನುಮತಿ ಸಿಗುವವರೆಗೆ ಬಡ ಸಂತೆ ವ್ಯಾಪಾರಸ್ಥರಿಗೆ ಬುಧವಾರ ಸಂತೆ ವ್ಯಾಪಾರದ ಜತೆಗೆ ರವಿವಾರವೂ ಅನುಮತಿ ನೀಡಿ ಬಡವರ್ಗದವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಮಹೋಹರ್‌ ಶೆಟ್ಟಿ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next