Advertisement
ಕೊಯ್ಲಿನ ಸಂದರ್ಭದಲ್ಲೇ ಭತ್ತ ಖರೀದಿಯ ನೋಂದಣಿ ಆರಂಭಿಸಬೇಕು ಎಂಬ ಸ್ಥಳೀಯ ರೈತರ ಬೇಡಿಕೆ ಈ ವರ್ಷವೂ ಈಡೇರಿಲ್ಲ. ಪರಿಣಾಮ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ (ಪಿಡಿಎಸ್) ಸ್ಥಳೀಯ ಕುಚ್ಚಲಕ್ಕಿ ವಿತರಣೆ ಮರೀಚಿಕೆಯಾಗಿಯೇ ಉಳಿಯಲಿದೆ.
ಸರಕಾರವೇ ರೈತರಿಂದ ನೇರವಾಗಿ ಭತ್ತ ಖರೀದಿಗೆ ಅನುಕೂಲವಾಗುವಂತೆ ರಾಜ್ಯದ ಎಲ್ಲೆಡೆ ಭತ್ತ ಖರೀದಿ ಕೇಂದ್ರ ಆರಂಭಿಸಿದೆ. ಅದರಂತೆ ಉಭಯ ಜಿಲ್ಲೆಯ 8 ಕಡೆಗಳಲ್ಲಿ (ದ.ಕ. ಜಿಲ್ಲೆಯ ಮಂಗಳೂರಿನ ಶಕ್ತಿನಗರ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯದ ಕೆಎಫ್ಸಿಎಸ್‌ಸಿ ಗೋದಾಮು ಮತ್ತು ಉಡುಪಿ ಜಿಲ್ಲೆಯ ಉಡುಪಿ ಎಪಿಎಂಸಿ ಆವರಣ, ಕುಂದಾಪುರ ಕೋಟೇಶ್ವರದ ಕೆಎಫ್ಸಿಎಸ್‌ಸಿ ಗೋದಾಮು ಮತ್ತು ಕಾರ್ಕಳದ ಎಪಿಎಂಸಿ ಆವರಣ) ಸಾಮಾನ್ಯ ಭತ್ತ ಖರೀದಿ ಕೇಂದ್ರ ತೆರೆಯಲಾಗಿದೆ. ಬೆಳ್ತಿಗೆ ಅಕ್ಕಿ ಮಾಡಬಹುದಾದ ಭತ್ತ ನೀಡಲು ಯಾವೊಬ್ಬ ರೈತನೂ ಈವರೆಗೆ ಇಲ್ಲಿ ನೋಂದಣಿ ಮಾಡಿಲ್ಲ. 2023-24ನೇ ಸಾಲಿನಲ್ಲಿ ಕೇಂದ್ರ ಸರಕಾರವು ಘೋಷಿಸಿರುವ ಬೆಂಬಲ ಬೆಲೆಯಂತೆ ಸಾಮಾನ್ಯ ಭತ್ತಕ್ಕೆ ಪ್ರತೀ ಕ್ವಿಂಟಾಲ್‌ಗೆ 2,183 ರೂ. ನೀಡಿ ಖರೀದಿ ಮಾಡಲಾಗುತ್ತದೆ. ಕಳೆದ ವರ್ಷ ರಾಜ್ಯ ಸರಾಕರದ ಕುಚ್ಚಲಕ್ಕಿಗೆ ಹೆಚ್ಚುವರಿಯಾಗಿ 500 ರೂ. ಬೆಂಬಲ ಬೆಲೆ ಘೋಷಣೆ ಮಾಡಿತ್ತು. ಈ ಬಾರಿ ರಾಜ್ಯ ಸರಕಾರ ಆ ನಿರ್ಧಾರ ಇನ್ನೂ ಪ್ರಕಟಿಸಿಲ್ಲ.
Related Articles
ರೈತರು ಖರೀದಿ ಕೇಂದ್ರಕ್ಕೆ ತಂದ ಸ್ಯಾಂಪಲ್ ಭತ್ತದ ಗುಣಮಟ್ಟವನ್ನು ತಜ್ಞರಿಂದ ವೈಜ್ಞಾನಿಕವಾಗಿ ಪರೀಕ್ಷಿಸಲಾಗುತ್ತದೆ. ಭತ್ತದ ತೇವಾಂಶದ ಗರಿಷ್ಠ ಮಿತಿ ಶೇ. 17ರಷ್ಟು ದಾಟಿರಬಾರದು. ಶೇ. 3ಕ್ಕಿಂತ ಹೆಚ್ಚು ಜೊಳ್ಳು ಇರಬಾರದು. ಬಣ್ಣ ಮಾಸಿದ, ಮುರಿದ, ಮೊಳಕೆಯೊಡೆದ ಮತ್ತು ಹುಳು ಹಿಡಿದ ಕಾಳು ಶೇ. 4ಕ್ಕಿಂತ ಹೆಚ್ಚಿರಬಾರದು. ಇತರ ಮಿಶ್ರಣ (ಸಾವಯವ, ನಿರವಯವ) ಶೇ. 1ಕ್ಕಿಂತ ಹೆಚ್ಚಿರಬಾರದು ಎಂಬ ನಿಯಮವಿದೆ. ಈ ಎಲ್ಲ ಪರೀಕ್ಷೆಯ ಅನಂತರದಲ್ಲಿ ಖರೀದಿ ಪ್ರಕ್ರಿಯೆ ನಡೆಯಲಿದೆ.
Advertisement
ನೋಂದಣಿ ಹೇಗೆ?ಭತ್ತ ಬೆಳೆದಿರುವ ರೈತರು ಕೃಷಿ ಇಲಾಖೆಯಿಂದ ನೀಡಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ(ಫ್ರೂಟ್ಸ್)ಯ ಗುರುತಿನ ಸಂಖ್ಯೆಯೊಂದಿಗೆ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಫ್ರೂಟ್ಸ್ ಐಡಿ ಜತೆಗೆ ಬ್ಯಾಂಕ್ ಖಾತೆ ಲಿಂಕ್ ಆಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಅನಂತರ ಫ್ರೂಟ್ಸ್ ತಂತ್ರಾಂಶದಲ್ಲಿ ಪರಿಶೀಲಿಸಿ, ಭತ್ತದ ಸ್ಯಾಂಪಲ್ ತರಲು ಸೂಚನೆ ನೀಡಲಾಗುತ್ತದೆ. ಕೃಷಿ ಇಲಾಖೆಯ ಗುಣಮಟ್ಟ ಪರೀಕ್ಷಕರು (ಗ್ರೇಡರ್) ಭತ್ತ ಪರೀಕ್ಷಿಸಿ ಗುಣಮಟ್ಟ ಸೂಕ್ತವಾಗಿದೆಯೆಂದು ದೃಢೀಕರಿಸಿದ ಅನಂತರದಲ್ಲಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ನೀಡಿದ ರೈತರ ಬ್ಯಾಂಕ್ ಖಾತೆಗೆ ನೆರವಾಗಿ ಹಣ ಜಮಾ ಆಗಲಿದೆ. ಸಾಮಾನ್ಯ ಭತ್ತ ಖರೀದಿಗೆ ನೋಂದಣಿ ಕೇಂದ್ರವನ್ನು ಉಭಯ ಜಿಲ್ಲೆಯ 8 ಕಡೆಗಳಲ್ಲಿ ತೆರೆಯ ಲಾಗಿದೆ. ರೈತರ ಬೇಡಿಕೆಗೆ ಅನುಗುಣವಾಗಿ ಇನ್ನಷ್ಟು ಕೇಂದ್ರ ತೆರೆಯಲು ಅವಕಾಶವಿದೆ. ಈವರೆಗೆ ಯಾವುದೇ ರೈತರು ನೋಂದಣಿ ಮಾಡಿಸಿಕೊಂಡಿಲ್ಲ. ಆದರೆ ಕುಚ್ಚಲು ಅಕ್ಕಿ ಮಾಡಬಹುದಾದ ಎಂಒ4, ಕಜೆ, ಜಯ, ಪಂಚಮುಖೀ, ಸಹ್ಯಾದ್ರಿ, ಉಮಾ, ಜ್ಯೋತಿ ಮೊದಲಾದ ತಳಿಗಳ ಖರೀದಿಗೆ ಇನ್ನೂ ಸರಕಾರದಿಂದ ಅನುಮತಿ ಬಂದಿಲ್ಲ.
– ಅನುರಾಧಾ, ಜಿಲ್ಲಾ ವ್ಯವಸ್ಥಾಪಕಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ದ.ಕ., ಉಡುಪಿ -ರಾಜು ಖಾರ್ವಿ ಕೊಡೇರಿ