ಮಹಾನಗರ : ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಬಿಜೆಪಿ ಯುವಮೋರ್ಚಾದ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ಸೆ. 7ರಂದು ಬೆಳಗ್ಗೆ 11ರಿಂದ 2 ಗಂಟೆಯೊಳಗೆ ನೆಹರೂ ಮೈದಾನದಲ್ಲಿ ಸಮಾವೇಶ ನಡೆಸಲು ಅವಕಾಶ ನೀಡಿದ್ದಾರೆ.
ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರವೂ ಸಹಿತ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ನೆಹರೂ ಮೈದಾನದಲ್ಲಿ ಬುಧವಾರವೇ ಪೊಲೀಸರು ಬೀಡುಬಿಟ್ಟಿದ್ದಾರೆ.
ಬಿಜೆಪಿ ಸಮಾವೇಶಕ್ಕೆ ಪೂರ್ವಭಾವಿಯಾಗಿ ಜನರಲ್ಲಿ ಭಯದ ವಾತಾವರಣ ನಿವಾರಿಸಲು ಬುಧವಾರ ಬೆಳಗ್ಗೆ ಪೊಲೀಸರು ನಗರದ ವಿವಿಧ ಭಾಗಗಳಲ್ಲಿ ಪಥ ಸಂಚಲನ ನಡೆಸಿದರು. ನೆಹರೂ ಮೈದಾನದಲ್ಲಿ ಆರಂಭಗೊಂಡ ಜಾಥಾವು ಹಂಪನಕಟ್ಟ ವೃತ್ತ, ಲೈಟ್‌ಹೌಸ್ ಹಿಲ್ ರಸ್ತೆ, ಜ್ಯೋತಿ, ಬಲ್ಮಠ, ಕರಾವಳಿ ಸರ್ಕಲ್, ಕಂಕನಾಡಿ, ಫಳ್ನೀರ್ ಮೂಲಕ ಸಾಗಿ ಮತ್ತೆ ನೆಹರೂ ಮೈದಾನದಲ್ಲಿ ಸಮಾಪನಗೊಂಡಿತು.
ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಹಾಗೂ ಡಿಸಿಪಿ(ಕಾನೂನು ಹಾಗೂ ಸುವ್ಯವಸ್ಥೆ) ಹನುಮಂತರಾಯ ಅವರ ನೇತೃತ್ವದಲ್ಲಿ ನಡೆದ ಪಥ ಸಂಚಲನದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ, ಕೆಎಸ್‌ಆರ್‌ಪಿ ಹಾಗೂ ಇತರ ಪೊಲೀಸ್ ಸಿಬಂದಿ ಪಾಲ್ಗೊಂಡಿದ್ದರು.
ಸಮಾವೇಶದಲ್ಲಿ ಪಾಲ್ಗೊಳ್ಳಲು ದ.ಕ.ಜಿಲ್ಲೆ ಸಹಿತ ವಿವಿಧ ಜಿಲ್ಲೆಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವುದರಿಂದ ನಗರದಲ್ಲಿ ಸಂಚಾರ ವ್ಯತ್ಯಯದ ಜತೆಗೆ ದೂರದೂರಿನಿಂದ ಆಗಮಿಸಿದ ವಾಹನಗಳ ಪಾರ್ಕಿಂಗ್ ಸಮಸ್ಯೆಯೂ ತಲೆದೋರುವ ಸಾಧ್ಯತೆ ಇದೆ.
ಈ ತನಕ ಸಂಚಾರ ಬದಲಾವಣೆಯ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಮಾವೇಶದ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಸಂಚಾರ ಬದಲಾವಣೆ ಮಾಡಲಾಗುವುದು. ಈ ಕುರಿತು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ಪುತ್ತೂ¤ರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳಲ್ಲಿ ಈಗಾಗಲೇ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ.
ರ್ಯಾಲಿ ನಡೆಸಿಯೇ ಸಿದ್ಧ
ರ್ಯಾಲಿಗೆ ಅವಕಾಶ ನೀಡದಿದ್ದರೂ ನಾವು ಬೆಳಗ್ಗೆ 11ಕ್ಕೆ ಜ್ಯೋತಿ ವೃತ್ತದಿಂದ ರ್ಯಾಲಿ ನಡೆಸುತ್ತೇವೆ. ಸುಮಾರು 10 ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸುವರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಕಾರ್ಯಕರ್ತರು ಆಗಮಿಸುತ್ತಾರೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ ಉದಯವಾಣಿಗೆ ತಿಳಿಸಿದ್ದಾರೆ.