ಕಿರುತೆರೆ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಡುವ ಮೂಲಕ, ಆ ಕ್ಷೇತ್ರದಲ್ಲಿ ದುಡಿಯುವ ಜನರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇತ್ತೀಚೆಗಷ್ಟೇ ಕಿರುತೆರೆಯ ಚಿತ್ರೀಕರಣಕ್ಕೆ ಅನುಮತಿ ಕೊಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಅವರು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ ಗ್ರೀನ್‌ಸಿಗ್ನಲ್ ಕೊಟ್ಟಿದೆ.
ಇನ್ನು, ಕಿರುತೆರೆ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಟ್ಟಿರುವ ಹಿನ್ನೆಲೆಯಲ್ಲಿ ಅತ್ತ, ಚಿತ್ರರಂಗ ಕೂಡ ಆಶಾಭಾವನೆಯಲ್ಲಿದೆ. ನಮಗೂ ಚಿತ್ರೀಕರಣಕ್ಕೆ ಅನುಮತಿ ಕೊಡಬಹುದು ಎಂಬ ಖುಷಿಯಲ್ಲಿದ್ದಾರೆ ಸಿನಿಮಾ ಮಂದಿ.
ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್, “ನಮ್ಮ ಮನವಿಗೆ ಸರ್ಕಾರ ಸ್ಪಂದಿಸಿದೆ. ಕಿರುತೆರೆ ಕ್ಷೇತ್ರ ಚಿತ್ರೀಕರಣ ನಿರ್ಬಂಧನೆಗೆ ಒಳಗಾಗುವುದಿಲ್ಲ. ಮನೆಯೊಳಗೆ ಚಿತ್ರೀಕರಣ ಮಾಡುವುದರಿಂದ ಶೂಟಿಂಗ್‌ಗೆ ಅನುಮತಿ ಕೊಡಲಾಗಿದೆ. ಯಾವುದೇ ಕಾರಣಕ್ಕೂ ಔಟ್ ಡೋರ್ ಚಿತ್ರೀಕರಣ ಹಾಗು ರಿಯಾಲಿಟಿ ಶೋಗಳಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಈಗ ನಾವು ಸಮಿತಿ ಜೊತೆ ನಿರ್ಧರಿಸಿ, ಯಾವ ದಿನಾಂಕದಿಂದ ಚಿತ್ರೀಕರಣವನ್ನು ನಡೆಸಬೇಕು ಎಂಬ ಬಗ್ಗೆ ಘೋಷಣೆ ಮಾಡುತ್ತೇವೆ. ಇನ್ನು, ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡೇ ಕೆಲಸ ಮಾಡುತ್ತೇವೆ. ಅದರಲ್ಲೂ ಕಡಿಮೆ ಜನರ ಜೊತೆ ಕೆಲಸ ಮಾಡಲು ನಿರ್ಧರಿಸಲಾಗಿದೆ. ಇಷ್ಟರಲ್ಲೆ ನಮ್ಮ ಕಾರ್ಯಕಾರಿ ಸಮಿತಿ ಸಭೆ ಕರೆದು, ಅಲ್ಲಿ ಏನೆಲ್ಲಾ ಸೂಚನೆ ಕೊಡಬೇಕು ಎಂಬ ಬಗ್ಗೆ ನಿರ್ಧಾರ ಆಗುತ್ತೆ’ ಎನ್ನುತ್ತಾರೆ ಶಿವಕುಮಾರ್.
ಅಂದಹಾಗೆ, ಮೇ.11ರಿಂದ ಚಿತ್ರೀಕರಣಕ್ಕೆ ಅನುಮತಿ ಕೊಡಬೇಕು ಎಂಬ ಮನವಿ ಮಾಡಿದ್ದೆವು. ಈಗ ಸರ್ಕಾರದ ಸ್ಪಂದನೆ ಸಿಕ್ಕಿರುವುದರಿಂದ ಯಾವಾಗ ಚಿತ್ರೀಕರಣ ನಡೆಸಬೇಕು ಎಂಬುದನ್ನು ಚಾನೆಲ್‌ಗಳ ಜೊತೆ ಚರ್ಚಿಸಲಾಗುವುದು ಎನ್ನುತ್ತಾರೆ ಅವರು.
ಈವರೆಗೆ 200 ಕೋಟಿಗೂ ಹೆಚ್ಚು ನಷ್ಟ!: ಈ ಕೋವಿಡ್ 19 ಎಫೆಕ್ಟ್ ನಿಂದಾಗಿ ಕಿರುತೆರೆ ಕ್ಷೇತ್ರ ಈವರೆಗೆ ಬರೋಬ್ಬರಿ 200ಕೋಟಿಗೂ ಹೆಚ್ಚು ನಷ್ಟ ಅನುಭವಿಸುವಂತಾಗಿದೆ ಎಂದು ಅಂದಾಜಿಸಲಾಗಿದೆ. ಕನ್ನಡದಲ್ಲಿ ಏನಿಲ್ಲವೆಂದರೂ, 120ಕ್ಕೂ ಹೆಚ್ಚು ಧಾರಾವಾಹಿಗಳು ಹಲವು ರಿಯಾಲಿಟಿ ಶೋಗಳ ಚಿತ್ರೀಕರಣ ನಡೆಯುತ್ತಿದ್ದು, ಸುಮಾರು 20 ಸಾವಿರದಷ್ಟು ತಂತ್ರಜ್ಞರು, ಕಲಾವಿದರು ಹಾಗು ಇತರೆ ವಿಭಾಗದ ಕಾರ್ಮಿಕರುಕೆಲಸ ಮಾಡುತ್ತಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ಕಿರುತೆರೆ ಉದ್ಯಮಕ್ಕೆ ಸುಮಾರು 200 ಕೋಟಿಗೂ ಹೆಚ್ಚು ನಷ್ಟ ಆಗುತ್ತಿದೆ ಎಂದು ಅಂದಾಜಿಸಲಾಗಿದೆ.
ಪ್ರತಿ ದಿನದ ಚಿತ್ರೀಕರಣಕ್ಕೆ ಸುಮಾರು 80 ಸಾವಿರದಿಂದ 1.30 ಲಕ್ಷ ರುಪಾಯಿವರೆಗೂ ಬೇಕು. ಆದರೆ, ಒಂದು ದಿನ ಚಿತ್ರೀಕರಣವೇನಾದರೂ ನಿಂತುಹೋದರೆ, ಅದರ ಪೆಟ್ಟು ನಿರ್ಮಾಪಕರಿಗೆ ಬೀಳುತ್ತೆ. ಇದರೊಂದಿಗೆ ಅಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರಿಗೂ ತಟ್ಟುತ್ತದೆ. ಇನ್ನು ಒಂದು ತಿಂಗಳಿಗೆ ಏನಿಲ್ಲವೆಂದರೂ, ಹದಿನೈದು ದಿನದಿಂದ 22 ದಿನಗಳವರೆಗೂ ಧಾರಾವಾಹಿ ಚಿತ್ರೀಕರಣ ನಡೆಯಲಿದೆ. ಅಲ್ಲಿ ದುಡಿಯುವ ನಟ,ನಟಿಯರಿಂದ ಹಿಡಿದು ಪ್ರತಿಯೊಬ್ಬರಿಗೂ ದಿನದ ಲೆಕ್ಕದಲ್ಲೇ
ಸಂಭಾವನೆ ಕೊಡಬೇಕು. ಅದೆಲ್ಲವನ್ನೂ ಲೆಕ್ಕ ಹಾಕಿ ತಿಂಗಳಿಗೊಮ್ಮೆ ಪೇಮೆಂಟ್ ಮಾಡಲಾಗುತ್ತದೆ. ಕಡಿಮೆ ಎಂದರೂ ಒಂದು ಧಾರಾವಾಹಿ ಚಿತ್ರೀಕರಣ ನಡೆಯುವ ಸೆಟ್‌ನಲ್ಲಿ 35 ರಿಂದ 45 ಜನ ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲ, ಒಮ್ಮೊಮ್ಮೆ ಅದರ ಸಂಖ್ಯೆ 50 ಮೀರುತ್ತದೆ. ಇವರೆಲ್ಲರಿಗೂ ದಿನದ ಸಂಭಾವನೆ ಕೊಡಲೇಬೇಕು. ಇವರ ಸಂಭಾವನೆ ಲೆಕ್ಕ ಹಾಕಿದರೆ ದಿನಕ್ಕೆ ಕೋಟಿ ರುಪಾಯಿವರೆಗೂ ತಲುಪುತ್ತದೆ. ಲಾಕ್ ಡೌನ್‌ನಿಂದಾಗಿ ಕಿರುತೆರೆ ಭಾರೀ ಆರ್ಥಿಕ ಸಂಕಷ್ಟ ಎದುರಿಸಿದೆ.
ಆಶಾಭಾವನೆಯಲ್ಲಿ ಸಿನಿಮಾ ಮಂದಿ: ಕಿರುತೆರೆ ಕ್ಷೇತ್ರಕ್ಕೆ ಸರ್ಕಾರ ಚಿತ್ರೀಕರಣ ನಡೆಸಲು ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ ಇತ್ತ ಚಿತ್ರರಂಗದಲ್ಲೂ ಆಶಾಭಾವನೆ ಮೂಡಿದೆ. ಇತ್ತೀಚೆಗಷ್ಟೇ ಫಿಲ್ಮ್ ಛೇಂಬರ್ ಅಧ್ಯಕ್ಷರು ಶೂಟಿಂಗ್‌ಗೆ ಅನುಮತಿ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ್ದರು. ಈಗ ಕಿರುತೆರೆಗೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೂ ಅನುಮತಿ ಸಿಗಬಹುದು ಎಂಬ ಆಶಾಭಾವನೆಯಲ್ಲಿದೆ. ಲಾಕ್ ಡೌನ್ ಆದಾಗಿಂದಲೂ ಸಿನಿಮಾ ಕಾರ್ಮಿಕರು, ತಂತ್ರಜ್ಞರು ಹಲವರು ಕಷ್ಟದಲ್ಲಿದ್ದರು. ಕಿರುತೆರೆಗೆ ಕೊಟ್ಟಂತೆ, ಚಿತ್ರರಂಗಕ್ಕೂ ಶೂಟಿಂಗ್‌ಗೆ ಅನುಮತಿ ಸಿಗಬಹುದು ಎಂಬ ಖುಷಿಯಲ್ಲಿದ್ದಾರೆ ಸಿನಿಮಾ ಮಂದಿ.