Advertisement

ಮದ್ಯ ಮಾರಾಟಕ್ಕೆ ಅನುಮತಿ; ಆಕ್ಷೇಪ

12:26 PM May 03, 2020 | mahesh |

ಕೋವಿಡ್ ಮಹಾಮಾರಿ ವಿರುದ್ಧ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದಕ್ಕೆ ಸಾಣೇಹಳ್ಳಿ ಮಠದ ಪೀಠಾಧ್ಯಕ್ಷ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಗದಗ ತೋಂಟದಾರ್ಯ ಮಠದ ಪೀಠಾಧಿ ಪತಿ ಡಾ| ಸಿದ್ಧರಾಮ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. 40 ದಿನಗಳಿಂದ ಮದ್ಯ ಸೇವನೆ ನಿಲ್ಲಿಸಿರುವ ಎಲ್ಲರೂ ಮದ್ಯಪಾನವನ್ನು ತ್ಯಜಿಸಬೇಕೆಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಕರೆ ನೀಡಿದ್ದಾರೆ.

Advertisement

ಆಘಾತಕಾರಿ ಸಂಗತಿ
ಹೊಸದುರ್ಗ: ಲಾಕ್‌ಡೌನ್‌ ಮಧ್ಯೆಯೇ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದನ್ನು ಸಾಣೇಹಳ್ಳಿ ಮಠದ ಪೀಠಾಧ್ಯಕ್ಷ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತೀವ್ರವಾಗಿ
ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀಗಳು, ಕೇಂದ್ರ ಸರ್ಕಾರ ಮದ್ಯಪಾನ ನಿಷೇಧ ಹಿಂತೆಗೆದುಕೊಂಡು, ಮದ್ಯ ಪಾನಕ್ಕೆ ಅನುಮತಿ ನೀಡಿರುವುದನ್ನು ತಿಳಿದು ನಿಜಕ್ಕೂ ಆಘಾತವಾಗಿದೆ. ಜನರ ಆರೋಗ್ಯಕ್ಕಿಂತ ಸರ್ಕಾರಕ್ಕೆ ಆದಾಯವೇ ಮುಖ್ಯವಾಗಿದೆ. ಇಂತಹ ನೇತಾರರಿಂದ ಖಂಡಿತವಾಗಿಯೂ ದೇಶದ ಪ್ರಗತಿ ಸಾಧ್ಯವಿಲ್ಲ. ಕೋವಿಡ್ ಕಾರಣದಿಂದ ನಿಷೇಧಿಸಲಾಗಿದ್ದ ಮದ್ಯ ಮಾರಾಟದಿಂದ ಬಹುತೇಕ ಮದ್ಯವ್ಯಸನಿಗಳು ದುಶ್ಚಟದಿಂದ ದೂರವಾಗಲು ನಿರ್ಧರಿಸಿದ್ದರು. ಸರ್ಕಾರದ ಈ ತೀರ್ಮಾನ ನಿದ್ರೆ ಬಂದವರಿಗೆ ನಿದ್ರೆ ಮಾತ್ರೆ ಕೊಟ್ಟಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಡಿದವರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ, ಇದು ಮತ್ತೆ ಯಾವ ಅನಾಹುತಕ್ಕೆ ಕಾರಣವಾಗುವುದೋ, ಕುಡಿತದಿಂದ ಹಣ, ಆರೋಗ್ಯ, ನೆಮ್ಮದಿ ಹಾಳಾಗುವುದಲ್ಲದೆ ಕಳ್ಳತನ, ಸುಲಿಗೆ, ಅಪಘಾತ ಮತ್ತಿತರ ಅನಾಹುತಗಳು ಸಾಲು ಸಾಲಾಗಿ ನಡೆಯಬೇಕೆ, ಬಡವರಿಗೆ ಕುಡಿಸಿ ಆ ಹಣದಿಂದಲೇ
ರಾಜ್ಯಭಾರ ಮಾಡಬೇಕೇ ಎಂದು ಪ್ರಶ್ನಿಸಿದ್ದಾರೆ. ಮದ್ಯ ನಿಷೇಧ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಇನ್ನೂ ಸ್ವಾತಂತ್ರ್ಯವಿದೆ. ಕೋವಿಡ್ ಮಾರಿ ಮರೆಯಾಗುವವರೆಗಾದರೂ ಸಂಪೂರ್ಣ
ಮದ್ಯ ನಿಷೇಧ ಮಾಡಬೇಕು. ತುಂಬಾ ನೊಂದ ಮನದಿಂದ ನಮ್ಮ ಭಾವನೆಗಳನ್ನು ಮಾಧ್ಯಮದ ಮೂಲಕ ಹಂಚಿಕೊಂಡಿದ್ದೇವೆ. ಸಾರ್ವಜನಿಕರು ಸಹ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿ ಕುಡಿತದಿಂದ ಕುಟುಂಬಗಳನ್ನು ರಕ್ಷಿಸುವ ಸಂಕಲ್ಪ ಮಾಡಬೇಕು ಎಂದು ಶ್ರೀಗಳು ತಿಳಿಸಿದ್ದಾರೆ.

ಅನಾಹುತಗಳು ಅಷ್ಟಿಷ್ಟಲ್ಲ: ತೋಂಟದ ಶ್ರೀ ಬೇಸರ
ಗದಗ: ಮದ್ಯ ಮಾರಾಟ ನಿಷೇಧಿಸಿದ್ದ ಕೇಂದ್ರ ಸರಕಾರ ಮತ್ತೆ ಅನುಮತಿ ನೀಡಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ತೋಂಟದಾರ್ಯ ಮಠದ ಪೀಠಾಧಿಪತಿ
ಡಾ| ಸಿದ್ಧರಾಮ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮದ್ಯಪಾನದಿಂದಾಗುವ ಅನಾಹುತಗಳು ಅಷ್ಟಿಷ್ಟಲ್ಲ. ಮದ್ಯವ್ಯಸನಿಗಳು ಮಾನಸಿಕ ಸ್ಥಿಮಿತ ಕಳೆದುಕೊಂಡಿರುತ್ತಾರೆ. ಎಲ್ಲಿ ಬೇಕಾದಲ್ಲಿ ಬಿದ್ದು, ಹೊರಳಾಡಿ ಬಂದು ಮನೆಮಂದಿಗೆಲ್ಲ ಕೋವಿಡ್  ಹಬ್ಬಿಸುವ ಸಾಧ್ಯತೆಗಳು ಹೆಚ್ಚು. ಮದ್ಯವ್ಯಸನಿಗಳಿಂದಾಗಿ ಮೊದಲು ಬೀದಿ ಪಾಲಾಗುತ್ತಿದ್ದ ಕುಟುಂಬಗಳು, ಇನ್ನು ಮಸಣದ ಪಾಲಾಗುವ ದಿನಗಳು ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಂಧಿನಾಡಿನವರಾದ ಪ್ರಧಾನಿ ಮೋದಿ ಹಾಗೂ ಗೃಹಸಚಿವ ಅಮಿತ್‌ ಶಾ ಅವರಿಂದ ಇಂತಹ ಕ್ರಮವನ್ನು ಭಾರತದ ಸಭ್ಯ ಸುಸಂಸ್ಕೃತ ಸಮಾಜ ನಿರೀಕ್ಷಿಸಿರಲಿಲ್ಲ. ಕೇಂದ್ರದ ಈ ನಡೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಚಲಿತರಾಗದೇ ಕೋವಿಡ್ ವೈರಸ್‌ ಹಬ್ಬುವುದನ್ನು ತಡೆಗಟ್ಟಲು ಮದ್ಯಪಾನವನ್ನು ಸಂಪೂರ್ಣ ನಿಷೇಧಿ ಸಲೇಬೇಕು. ಜೊತೆಗೆ ಮದ್ಯ ಮಾರಾಟ ನಿಷೇಧಿ ಸುವಂತೆ ಒತ್ತಾಯಿಸಿ ದೇಶದ ಸಭ್ಯ ಸುಸಂಸ್ಕೃತ ನಾಗರಿಕರು, ಧರ್ಮ ಗುರುಗಳು, ಯುವಜನರು ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದ್ದಾರೆ.

ಮದ್ಯ ನಿಷೇಧ ಮಾಡಿ: ಪಂಚಮಸಾಲಿ ಶ್ರೀ
ಬಾಗಲಕೋಟೆ: ದೇಶದಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇ ಧಿಸುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಕೂಡಲಸಂಗಮ ಲಿಂಗಾಯತ ಪಂಚಮ ಸಾಲಿ ಜಗದ್ಗುರು
ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಪ್ರಧಾನಿಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಡೀಸಿ ಕ್ಯಾ.ಡಾ.ಕೆ. ರಾಜೇಂದ್ರ ಅವರ ಮೂಲಕ
ಮನವಿ ಸಲ್ಲಿಸಿದರು. ಕೋವಿಡ್‌-19 ವೈರಸ್‌ನಿಂದಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹ, ಆದರೆ ಲಾಕ್‌ಡೌನ್‌ ವೇಳೆ ಸ್ಥಗಿತಗೊಂಡಿರುವ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸದೇ ಸಂಪೂರ್ಣವಾಗಿ ನಿಷೇ ಧಿಸ ಬೇಕೆಂದು ಒತ್ತಾಯಿಸಿದ್ದಾರೆ. ಶ್ರೀ ತಡೆಗಟ್ಟುವಲ್ಲಿ ಲಾಕ್‌ಡೌನ್‌ ವೇಳೆ ಮದ್ಯ ಮಾರಾಟ ನಿಷೇಧಿ
ಸಿರುವುದರಿಂದ ಒಂದಿಬ್ಬರು ಮದ್ಯವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಹೊರತುಪಡಿಸಿ ಮದ್ಯ ಮಾರಾಟ ನಿಷೇಧದಿಂದ ದೇಶದ ಜನತೆಗೆ ಸಾಕಷ್ಟು ಪ್ರಯೋಜನವಾಗಿದೆ. ಅಲ್ಲದೇ ಸಾಮಾಜಿಕ, ಆರ್ಥಿಕ ಹಾಗೂ ಅಪರಾಧಗಳ ಸಂಖ್ಯೆ ಗಣನೀಯ ಕಡಿಮೆಯಾಗಿದೆ. ಆದ್ದರಿಂದ, ಸಮಾಜದ ಸ್ವಾಸ್ಥ್ಯ ಹಾಗೂ ದೇಶದ ಜನತೆಯ ಆರೋಗ್ಯ ರಕ್ಷ‌ಣೆಗಾಗಿ ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಸರ್ಕಾರಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next