ಬಾಗಲಕೋಟೆ: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿರುವ ಸಲೂನ್ ಮತ್ತು ಪಾರ್ಲರ್‌ಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದಿಂದ ನೀಡಿದ ಸಲಹೆಗಳನ್ನು ತಪ್ಪದೇ ಪಾಲಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ ತಿಳಿಸಿದ್ದಾರೆ.
ಜ್ವರ, ಶೀತ, ಕೆಮ್ಮು ಮತ್ತು ಗಂಟಲು ನೋವು ಇರುವ ವ್ಯಕ್ತಿಗಳಿಗೆ ಒಳಗೆ ಪ್ರವೇಶ ನೀಡುವಂತಿಲ್ಲ. ಮಾಸ್ಕ ಇಲ್ಲದ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು. ಪ್ರವೇಶ ದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಶಾಪ್‌ಗ್ಳ ಎಲ್ಲ ಸಿಬ್ಬಂದಿಯೂ ಕಡ್ಡಾಯವಾಗಿ ಮಾಸ್ಕ್ ತಲೆಗೆ ಟೋಪಿ ಮತ್ತು ಏಪ್ರನ್ ಧರಿಸತಕ್ಕದ್ದು. ಪ್ರತಿಯೊಬ್ಬ ಗ್ರಾಹಕನಿಗೂ ಪ್ರತ್ಯೇಕವಾಗಿ ಬಳಸಿ ಎಸೆಯಬಹುದಾದ ಟವೆಲ್, ಪೇಪರ್ ಶೀಟ್ ಬಳಕೆ ಮಾಡಬೇಕು ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ಗ್ರಾಹಕನಿಗೆ ಬಳಕೆ ಮಾಡಿದ ಬಳಿಕ ಎಲ್ಲ ಸಾಧನೆಗಳನ್ನು 30 ನಿಮಿಷಗಳ ಕಾಲ ಶೇ.7ರ ಲೈಸೋಲ್ ಬಳಸಿ ಸೋಂಕು ನಿವಾರಣೆ ಮಾಡಬೇಕು. ಈ ಹಿನ್ನಲೆಯಲ್ಲಿ ಹೆಚ್ಚುವರಿ ಸಾಧನ ಬಳಸಬೇಕು. ಒಂದು ಸೆಟ್ ಸಾಧನಗಳನ್ನು ಬಳಕೆಯಲ್ಲಿದ್ದಾಗ ಇನ್ನೊಂದು ಸೆಟ್ ಅನ್ನು ಸೋಂಕು ನಿವಾರಣೆ ಮಾಡಲು ಇಡಬೇಕು. ಪ್ರತಿ ಹೇರ್ ಕಟಿಂಗ್ ಮಾಡಿದ ಬಳಿಕ ಸಿಬ್ಬಂದಿ ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಒಂದೇ ಸಮಯದಲ್ಲಿ ಹೆಚ್ಚಿನ ಗ್ರಾಹಕರು ಪ್ರವೇಶಿಸುವದನ್ನು ತಡೆಯಲು ಗ್ರಾಹಕರ ಸಮಯವನ್ನು ಕಾಯ್ದಿರಿಸುವ ಅಥವಾ ಟೋಕನ್ ವ್ಯವಸ್ಥೆ ಮೂಲಕ ಹೆಚ್ಚಿನ ಜನ ಸಾಂದ್ರತೆ ಉಂಟಾಗದಂತೆ ನಿಯಂತ್ರಿಸಬೇಕು ಎಂದು ತಿಳಿಸಿದ್ದಾರೆ.
ಆಸನಗಳ ನಡುವೆ ಕನಿಷ್ಠ 1 ಮೀಟರ್ ಅಂತರ ವಿರುವಂತೆ ನಿರ್ವಹಣೆ ಮಾಡಬೇಕು. ನೆಲ, ಲಿಪ್ಟ್, ಲಾಂಜ್, ಸುತ್ತಲಿನ ಪ್ರದೇಶ, ಮೆಟ್ಟಿಲು ಮತ್ತು ಕೈಹಿಡಿಕೆಗಳು ಸೇರಿದಂತೆ ಎಲ್ಲ ಜಾಗಗಳನ್ನು ದಿನಕ್ಕೆ ಕನಿಷ್ಠ ಎರಡು ಬಾರಿ ಶೇ.1ರ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದ ಮೂಲಕ ಸೋಂಕು ನಿವಾರಣೆ ಮಾಡಿಕೊಳ್ಳಬೇಕು. ಕಾರ್ಪೆಟ್‌ಗಳು ಮತ್ತು ಕೊಠಡಿಯ ನೆಲ ಭಾಗಗಳನ್ನು ಆಗಾಗ ಸ್ವತ್ಛಗೊಳಿಸಬೇಕು. ಬ್ಲೇಡ್ ಎಸೆಯಬಹುದಾದ ರೇಜರ್ ಸೇರಿದಂತೆ ಇತ್ಯಾದಿ ಚೂಪಾದ ತ್ಯಾಜ್ಯಗಳನ್ನು ಶೇ.1ರ ಸೋಡಿಯಂ ಹೈಪ್ಲೋಕ್ಲೋರೈಟ್ ದ್ರಾವಣದೊಂದಿಗೆ ಒಡೆದು ಹೋಗದ, ಸೋರಿಕೆಯಾಗದ ಬಿಳಿ ಕಂಟೈನರ್‌ನಲ್ಲಿ ಸಂಗ್ರಹಿಸಬೇಕು. ಕಂಟೈನರ್ ರಷ್ಟು ಭಾಗ ತುಂಬಿದ ಬಳಿಕ ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಏಜೆನ್ಸಿಗೆ ಒಪ್ಪಿಸಬೇಕು ಎಂದು ಹೇಳಿದ್ದಾರೆ.
ಪ್ರವೇಶ ದ್ವಾರದಲ್ಲಿ ಕೆಮ್ಮು ಮತ್ತು ಸಾಮಾಜಿಕ ಅಂತರದ ಬಗೆಗಿನ ಶಿಷ್ಟಾಚಾರಗಳಿಗೆ ಸಂಬಂಧಿಸಿದ ಪೋಸ್ಟರ್ ಲಗತ್ತಿಸಬೇಕು. ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್ ಭೇಟಿ ನೀಡಬಹುದಾಗಿದೆ. ಮಾಸ್ಕ್ ಮತ್ತು ಕೆಮ್ಮಿಗೆ ಸಂಬಂ ಧಿಸಿದ ಶಿಷ್ಟಾಚಾರದ ಬಗ್ಗೆ ಎಲ್ಲ ಸಿಬ್ಬಂದಿ ಮತ್ತು ಸಹಾಯಕರಿಗೆ ಮಾರ್ಗದರ್ಶನ ನೀಡಬೇಕು. ಕೋವಿಡ್‌ಗೆ ಸಂಬಂಧಿಸಿದ ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ಕ್ಲಿನಿಕ್ ಗೆ ಕಳುಹಿಸಬೇಕು. ಅಥವಾ ಆಪ್ತಮಿತ್ರ ಸಹಾಯವಾಣಿ 14410 ಸಂಖ್ಯೆಗೆ ಕರೆ ಮಾಡಬೇಕು. ಅವರು ಸಂಪೂರ್ಣ ಗುಣಮುಖರಾಗುವ ತನಕ ಅವರನ್ನು ಮತ್ತೆ ಆವರಣ ಪ್ರವೇಶಕ್ಕೆ ಅವಕಾಶ ನೀಡಬಾರದು. ಈ ಎಲ್ಲ ಸಲಹೆಗಳನ್ನು ತಪ್ಪದೇ ಪಾಲಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.