Advertisement

ಪ್ರಚಾರ ಸಾಮಾಗ್ರಿ ಮುದ್ರಣಕ್ಕೆ ಅನುಮತಿ ಕಡ್ಡಾಯ: ಡೀಸಿ

09:25 PM Sep 25, 2019 | Lakshmi GovindaRaju |

ದೇವನಹಳ್ಳಿ: ಜಿಲ್ಲೆಯ ಹೊಸಕೋಟೆ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸುವ ವ್ಯಕ್ತಿಯು ವಿವರವುಳ್ಳ ಭಿತ್ತಿ ಪತ್ರ, ಕರಪತ್ರ, ಬ್ಯಾನರ್ ಮುಂತಾದ ಪ್ರಚಾರ ಸಾಮಾಗ್ರಿಗಳನ್ನು ಮುದ್ರಿಸಲು ಪೂರ್ವಾನುಮತಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಹೇಳಿದರು.

Advertisement

ತಾಲೂಕಿನ ಚಪ್ಪರಕಲ್ಲು ಸರ್ಕಲ್‌ ಬಳಿ ಇರುವ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಗೆ ಬರುವ ಎಲ್ಲಾ ಮುದ್ರಣಾಲಯಗಳ ಮಾಲೀಕರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚುನಾವಣಾ ಪ್ರಚಾರ ಸಾಮಾಗ್ರಿಗಳ ದರ ನಿಗದಿಪಡಿಸುವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೋಸ್ಟರ್, ಬ್ಯಾನರ್, ಕರಪತ್ರ ಸೇರಿದಂತೆ ಇತರೆ ಪ್ರಚಾರ ಪರಿಕರಗಳ ಮುದ್ರಣ ಶುಲ್ಕವನ್ನು ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ನಿಗದಿಪಡಿಸಿದ ಚುನಾವಣಾ ವೆಚ್ಚದ ಮೊತ್ತಕ್ಕೆ ಸೇರಿಸಬೇಕಾಗಿರುವುದರಿಂದ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ತಿಳಿಯದೆ ಚುನಾವಣಾ ಪ್ರಚಾರ ಪರಿಕರಗಳು ಮುದ್ರಿಸಲ್ಪಟ್ಟಲ್ಲಿ ಅಂತಹ ಮುದ್ರಣಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದರು.

ಐಪಿಸಿ ಸೆಕ್ಷನ್‌ 171 ಹೆಚ್‌ ಕಾಯ್ದೆಯ ಪ್ರಕಾರ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯ ಬಗ್ಗೆ ಪ್ರಕಟಣೆ ಹೊರಡಿಸುವ ವ್ಯಕ್ತಿಯ ಫೋಟೊ ಮತ್ತು ಹೆಸರನ್ನು ಮುದ್ರಿಸಬೇಕು. ಮುದ್ರಣ ಮಾಡಿಸುವ ವ್ಯಕ್ತಿಯು ನಾನೇ ಸದರಿ ಭಿತ್ತಿಪತ್ರಗಳನ್ನು ಹಾಗೂ ಇತರೆ ಪರಿಕರಗಳನ್ನು ಮುದ್ರಣ ಮಾಡಿಸುತ್ತೇನೆ ಎಂದು ಘೋಷಿಸಿ, ದೃಢೀಕರಿಸಿ ಇಬ್ಬರು ವ್ಯಕ್ತಿಗಳಿಂದಲೂ ದೃಢೀಕರಿಸಿರಬೇಕು. ಮುದ್ರಿಸಲ್ಪಟ್ಟ ಭಿತ್ತಿಪತ್ರ ಹಾಗೂ ಇತರೆ ಪರಿಕರಗಳ ಪ್ರತಿಯನ್ನು ಸಂಬಂಧಪಟ್ಟ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಅಥವಾ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಸಲ್ಲಿಸಬೇಕೆಂದರು.

ಭಿತ್ತಿಪತ್ರಗಳಲ್ಲಿ ಕಾನೂನು ಬಾಹಿರ ವಿಷಯ ಅಥವಾ ಜಾತಿ, ಧರ್ಮ, ಪಂಗಡ, ಸಮುದಾಯ, ಭಾಷೆ, ವ್ಯಕ್ತಿತ್ವ ಮುಂತಾದವುಗಳನ್ನು ಪ್ರಚೋದಿಸುವ ವಿಚಾರಗಳನ್ನು ಪ್ರಕಟಣೆಗೊಳಿಸಿದರೆ ಅಂತಹವರ ವಿರುದ್ಧ ಕಾಯ್ದೆಯ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

Advertisement

ಮುದ್ರಣಾಲಯಗಳ ಮಾಲೀಕರುಗಳಿಗೆ ಅವರ ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳ ಪರ ಭಿತ್ತಿಪತ್ರಗಳು ಮುಂತಾದವುಗಳನ್ನು ಎಷ್ಟು ಪ್ರಮಾಣದಲ್ಲಿ ಮುದ್ರಣ ಮಾಡಲಾಗಿದೆ ಎಂಬ ಖಚಿತ ಮಾಹಿತಿಯನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳ ಕಚೇರಿಗೆ ಮುದ್ರಿತ ನಾಲ್ಕು ಪ್ರತಿ ಹಾಗೂ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ತಪ್ಪದೆ ಸಲ್ಲಿಸಬೇಕೆಂದು ಹೇಳಿದರು. ಸಭೆಯಲ್ಲಿ ಜಿಲ್ಲೆಯ ಮುದ್ರಣಾಲಯಗಳ ಮಾಲೀಕರು, ರಾಜಕೀಯ ಪಕ್ಷಗಳ ಮುಖಂಡರುಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next