Advertisement

Udupi ಪಟಾಕಿ ಮಳಿಗೆ ತೆರೆಯಲು ಅನುಮತಿ: ವಿದ್ಯಾಕುಮಾರಿ

11:48 PM Oct 13, 2023 | Team Udayavani |

ಮಣಿಪಾಲ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಧಕ್ಕೆಯುಂಟಾಗದಂತೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಸೂಕ್ತ ಸ್ಥಳವನ್ನು ಗುರುತಿಸಿ, ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಡುಮದ್ದು ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವ ಮೊದಲು ನಿಯೋಜಿಸಲಾದ ಅಧಿಕಾರಿಗಳು ಮಳಿಗೆ ತೆರೆಯುವ ಪ್ರದೇಶಗಳನ್ನು ಖುದ್ದು ಪರಿಶೀಲನೆ ನಡೆಸಬೇಕು. ಅಂಗಡಿ ಮುಂಗಟ್ಟುಗಳ ಸಮೀಪದಲ್ಲಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಗೆ ಸಮಸ್ಯೆಯಾಗುವುದು ಕಂಡು ಬಂದಲ್ಲಿ ಪಟಾಕಿ ಮಳಿಗೆ ತೆರೆಯಲು ಅನುಮತಿ ನೀಡಬಾರದು ಎಂದರು.

ಕಾರ್ಕಳ ಹಾಗೂ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಈ ಹಿಂದಿನಂತೆ ಸಮಿತಿಯನ್ನು ರಚಿಸಿ, ಚೀಟಿ ಎತ್ತುವ ಮೂಲಕ ಸ್ಥಳ ಹಂಚಿಕೆ ಮಾಡಬೇಕು. ಉಡುಪಿ ನಗರಸಭಾ ವ್ಯಾಪ್ತಿಯ ಮಲ್ಪೆ, ಸಂತೆಕಟ್ಟೆ, ಬೀಡಿನಗುಡ್ಡೆ, ಎಂಜಿಎಂ, ಮಣಿಪಾಲ ಹಾಗೂ ಅಂಬಲಪಾಡಿ ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯುವಲ್ಲಿ ಸಂಚಾರ ವ್ಯವಸ್ಥೆಗೆ ತೊಂದರೆಯಾಗದಂತೆ ವಾಹನ ನಿಲುಗಡೆಗೆ ಅವಕಾಶವಿರುವ, ಜನವಸತಿ ಕಡಿಮೆ ಇರುವ ಪ್ರದೇಶದಲ್ಲಿ ನಿಯೋಜಿಸಲಾದ ಅಧಿಕಾರಿಗಳು ಸ್ಥಳ ಗುರುತಿಸಿ, ವ್ಯಾಪಾರ ನಡೆಸುವ ವ್ಯಕ್ತಿಗಳಿಗೆ ಹಂಚಿಕೆ ಮಾಡಬೇಕು. ಪರವಾನಿಗೆ ಕೋರಿ ಅ.16ರ ಒಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸಂಬಂಧಪಟ್ಟ ಇಲಾಖೆಗಳು ವರದಿಗಳನ್ನು ಶೀಘ್ರ ಪಡೆದು ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್‌., ಎ.ಎಸ್ಪಿ ಸಿದ್ಧಲಿಂಗಪ್ಪ, ಪೌರಾಯುಕ್ತ ರಾಯಪ್ಪ, ತಹಶೀಲ್ದಾರ್‌ಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next