ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ರಕ್ಷಿಸಲೆಂದೇ ಸಿಬಿಐ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ಸರ್ಕಾರ ವಾಪಸ್ ಪಡೆದಿದೆ ಎಂದು ಸಿಬಿಐ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ವಕೀಲರು ದೂರಿದ್ದಾರೆ.
ಈ ಪ್ರಕರಣದ ತನಿಖೆಗಾಗಿ ನೀಡಿದ್ದ ಅನುಮತಿ ಹಿಂಪಡೆದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಈ ವೇಳೆ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ವಾದ ಮಂಡಿಸಿ, ಒಮ್ಮೆ ಸಿಬಿಐಗೆ ಪ್ರಕರಣ ನೀಡಿದ ಬಳಿಕ ಹಿಂಪಡೆಯಲಾಗದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗಾಗಿ, ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಲಾದ ಅನುಮತಿ ಹಿಂಪಡೆದಿರುವ ಕ್ರಮ ಕಾನೂನು ಬಾಹಿರ.
ಶಾಸಕ ಯತ್ನಾಳ್ ಪರ ವಕೀಲ ವೆಂಕಟೇಶ್ ಪಿ.ದಳವಾಯಿ ವಾದ ಮಂಡಿಸಿ, ಈ ಪ್ರಕರಣ ಸಂಬಂಧ ಪ್ರಶ್ನೆ ಮಾಡುವ ಅಧಿಕಾರ ನಮಗಿದೆ. ಕಳೆದ ನ.28 ಸಿಬಿಐಗೆ ನೀಡಿದ್ದ ಅನುಮತಿ ಸರ್ಕಾರ ಹಿಂಪಡೆದುಕೊಂಡಿತು. ಇದನ್ನು ಪ್ರಶ್ನಿಸಿ ಡಿ.5 ರಂದು ನಾವು ಅರ್ಜಿ ಸಲ್ಲಿಸಿದೆವು, ಅದಾದ ಬಳಿಕ ಡಿ. 22ರಂದು ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಪ್ರಕರಣದಲ್ಲಿ ಸರ್ಕಾರ ಗಂಭೀರವಾಗಿ ಇದೆ ಅನ್ನುವುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ ಎಂದು ಆಕ್ಷೇಪಿಸಿದರು.
ಡಿ.ಕೆ.ಶಿವಕುಮಾರ್ ಪರ ವಾದ ಮಂಡನೆಗೆ ಹಿರಿಯ ವಕೀಲ ಉದಯ ಹೊಳ್ಳ ಕಾಲಾವಕಾಶ ಕೋರಿದ್ದರಿಂದ ನ್ಯಾಯಪೀಠ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿತು.