ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್ ವಲಯದಲ್ಲಿ ಗುರುತಿಸಲಾಗಿರುವ 13 ಬ್ಲಾಕ್(ದಿಬ್ಬ)ಗಳಲ್ಲಿ ಮರಳುಗಾರಿಕೆಗೆ ಪರಿಸರ ಇಲಾಖೆಯಿಂದ ಅನುಮತಿ ಲಭಿಸಿದ್ದು, ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕರ್ನಾಟಕ ಕರಾವಳಿ ವಲಯ ನಿರ್ವ
ಹಣೆ ಸಮಿತಿ (ಕೆಸಿಝಡ್‌ಎಂ) ಸಭೆಯು ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಗೆ ಜಿಲ್ಲೆಯಿಂದ ಸಲ್ಲಿಸಲಾಗಿದ್ದ ವರದಿಗೆ ಅನುಮೋದನೆ ನೀಡಿದೆ.
ಸಿಆರ್‌ಝಡ್ ವ್ಯಾಪ್ತಿಯ ನೇತ್ರಾವತಿ ನದಿಯಲ್ಲಿ 8, ಗುರುಪುರ ನದಿಯಲ್ಲಿ 4 ಹಾಗೂ ಶಾಂಭವಿ ನದಿಯಲ್ಲಿ ಒಂದು ಸೇರಿದಂತೆ ಒಟ್ಟು 13 ಬ್ಲಾಕ್‌ಗಳು ಅನುಮೋದನೆಗೊಂಡಿವೆ. 13 ಬ್ಲಾಕ್‌ಗಳಲ್ಲಿ ಈ ಬಾರಿ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಮರಳು ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಬಾರಿ ನೇತ್ರಾವತಿ ನದಿಯಲ್ಲಿ 13 ಬ್ಲಾಕ್ ಹಾಗೂ ಗುರುಪುರ ನದಿಯಲ್ಲಿ 9 ಬ್ಲಾಕ್ ಸೇರಿದಂತೆ ಒಟ್ಟು 22 ಬ್ಲಾಕ್‌ಗಳನ್ನು ಗುರುತಿಸಿ ಅದರಿಂದ ಒಟ್ಟು 8.5 ಲಕ್ಷ ಟನ್ ಮರಳು ಲಭ್ಯತೆ ಅಂದಾಜಿಸಲಾಗಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬ್ಲಾಕ್‌ಗಳ ಸಂಖ್ಯೆ ಕಡಿಮೆಯಿದ್ದರೂ ಒಟ್ಟು ಮರಳು ಲಭ್ಯತೆಯಲ್ಲಿ ಸುಮಾರು 1.5 ಲಕ್ಷ ಟನ್ ಹೆಚ್ಚಳ ನಿರೀಕ್ಷಿಸಲಾಗಿದೆ.
ಈ ಬಾರಿಯ ಬೇಥಮೆಟ್ರಿಕ್ಸ್ ಸರ್ವೇಯಲ್ಲಿ ನೇತ್ರಾವತಿ, ಗುರುಪುರ -ಫಲ್ಗುಣಿ ಹಾಗೂ ಶಾಂಭವಿ ನದಿಯಲ್ಲಿ ಹೊಸದಾಗಿ ಗುರುತಿಸಿರುವ ಮರಳು ದಿಬ್ಬಗಳ ವರದಿಯ ಬಗ್ಗೆ ಎನ್‌ಐಟಿಕೆ ಸಲ್ಲಿಸಿರುವ ತಾಂತ್ರಿಕ ವರದಿಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯ ಸಮಿತಿ ಪರಿಶೀಲಿಸಿ ಮೇ ತಿಂಗಳಿನಲ್ಲಿ ಕೆಸಿಝಡ್‌ಎಂ ಕಳುಹಿಸಿಕೊಟ್ಟಿತ್ತು. ಬೇಥಮೆಟ್ರಿಕ್ಸ್ ಸರ್ವೇಯಲ್ಲಿ ಸಿಆರ್‌ಝಡ್ ವಲಯದಲ್ಲಿ ಒಟ್ಟು 14 ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 13 ಬ್ಲಾಕ್‌ಗಳು ಕೆಸಿಝಡ್‌ಎಂನಿಂದ ಅನುಮೋದನೆಗೊಂಡಿವೆ. ಮರಳುಗಾರಿಕೆ ಅನುಮತಿ ಆದೇಶ ಇನ್ನೆರಡು ವಾರದೊಳಗೆ ಕೆಸಿಝಡ್‌ಎಂನಿಂದ ಪ್ರಕಟಗೊಂಡು ಬಹುತೇಕ ಸೆ. 10ರೊಳಗೆ ಜಿಲ್ಲಾಡಳಿತಕ್ಕೆ ಬರುವ ಸಾಧ್ಯತೆಗಳಿವೆ. ಕೂಡಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯನ್ವಯ ಷರತ್ತುಗಳಿಗೆ ಅನುಗುಣವಾಗಿ ಮರಳುಗಾರಿಕೆಗೆ ಪರವಾನಿಗೆ ನೀಡುವ ಪ್ರಕ್ರಿಯೆ ನಡೆಸಲಿದೆ.
ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಕುರಿತಂತೆ ದ.ಕ. ಜಿಲ್ಲೆಯಿಂದ ಸಲ್ಲಿಕೆಯಾಗಿರುವ ವರದಿಯನ್ನು ಪರಿಶೀಲಿಸಿ 13 ಬ್ಲಾಕ್‌ಗಳಲ್ಲಿ ಮರಳುಗಾರಿಕೆಗೆ ಅನುಮತಿ ಲಭಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಇತರ ಪ್ರಕ್ರಿಯೆಗಳನ್ನು ಅತಿ ಶೀಘ್ರ ನಡೆಸಿ ಮರಳುಗಾರಿಕೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು.
- ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವರು