Advertisement

ಕಡಲತೀರ ಸ್ವಚ್ಛತೆಗೆ ಶಾಶ್ವತ ವ್ಯವಸ್ಥೆ: ಜಿ.ಪಂ. ಸಿಇಒ ಪ್ರಸನ್ನ ಸೂಚನೆ

01:58 AM Jun 05, 2022 | Team Udayavani |

ಉಡುಪಿ: ಜಿಲ್ಲೆಯ ಕಡಲತೀರಗಳನ್ನು ಪ್ರತಿನಿತ್ಯ ಸ್ವಚ್ಛ ಮತ್ತು ಸುಂದರವಾಗಿರುವಂತೆ ಶಾಶ್ವತ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಕಡಲತೀರ ಮತ್ತು ನದಿ ತೀರ ವ್ಯಾಪ್ತಿಯ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಸೂಚಿಸಿದರು.

Advertisement

ಶನಿವಾರ ಜಿ.ಪಂ. ಸಭಾಂಗಣದಲ್ಲಿ, ಜಿಲ್ಲೆಯ ಕಡಲತೀರಗಳಲ್ಲಿ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಿರ್ವಹಣೆ ಮಾಡುವ ಕುರಿತಂತೆ ಪಿಡಿಒಗಳಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗ್ರಾ.ಪಂ. ವ್ಯಾಪ್ತಿಯ ಕಡಲತೀರಗಳ ಸ್ವಚ್ಛತೆಯನ್ನು ಸ್ಥಳೀಯ ಸಂಜೀವನಿ ಸ್ವಸಹಾಯ ಸಂಘಕ್ಕೆ ನೀಡುವ ಮೂಲಕ ಬೀಚ್‌ನಲ್ಲಿ ಸ್ವಚ್ಛತೆ ಕಾಪಾಡಬೇಕು. ತ್ಯಾಜ್ಯ ನಿರ್ವಹಣೆ ಜತೆಗೆ ಈ ಸಂಘದ ಮಹಿಳೆಯರಿಗೆ ಬೀಚ್‌ನಲ್ಲಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಅವಕಾಶ ನೀಡಿ ಅವರಿಗೂ ಅರ್ಥಿಕ ಲಾಭ ದೊರೆಯುವಂತೆ ಮಾಡಬೇಕು. ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸುವ ಕುರಿತಂತೆ ಇವರಿಗೆ ಅಗತ್ಯ ತರಬೇತಿ ನೀಡಲಾಗುವುದು.

ಬೀಚ್‌ಗಳಲ್ಲಿ ಹಸಿ ಮತ್ತು ಒಣಕಸಗಳನ್ನು ಹಾಕಲು ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯವಿರುವಷ್ಟು ಸಂಖ್ಯೆಯ ಕಸದ ಬುಟ್ಟಿಗಳನ್ನು ಒದಗಿಸಲಾಗುವುದು ಎಂದರು.

ತ್ಯಾಜ್ಯ ಎಸೆದರೆ ಕಠಿನ ಕ್ರಮ
ಬೀಚ್‌ಗಳಲ್ಲಿ ತ್ಯಾಜ್ಯ ಎಸೆಯುವರ ಕುರಿತು ನಿಗಾ ವಹಿಸಬೇಕು. ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಹಾಗೂ ಈ ಕುರಿತಂತೆ ಪಿಡಿಒ ಗಳು ತಮಗೆ ನೀಡಿರುವ ಅಧಿಕಾರವನ್ನು ಸೂಕ್ತ ರೀತಿಯಲ್ಲಿ ಬಳಸುವಂತೆ ತಿಳಿಸಿದರು.

Advertisement

ಮೀನುಗಾರಿಕೆಗೆ ತೆರಳುವ ಮೀನುಗಾರರು ಸಮುದ್ರದಲ್ಲಿ ಯಾವುದೇ ತ್ಯಾಜ್ಯವನ್ನು ಎಸೆಯದಂತೆ ಮತ್ತು ಹರಿದ ಮೀನಿನ ಬಲೆ ಮತ್ತಿತರ ಅನುಪಯುಕ್ತ ವಸ್ತುಗಳನ್ನು ದಡಕ್ಕೆ ಬಂದು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಮೀನುಗಾರಿಕೆ ಇಲಾಖೆ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 15 ದಿನಗಳ ಒಳಗೆ ಪೈಲಟ್‌ ಯೋಜನೆಯಾಗಿ ಯಾವುದಾದರೊಂದು ಕಡಲತೀರದ ಗ್ರಾ.ಪಂ.ನಲ್ಲಿ ತ್ಯಾಜ್ಯ ನಿರ್ವಹಣೆಗೆ ಶಾಶ್ವತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್‌, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕ್ಲಿಫ‌ರ್ಡ್‌ ಲೋಬೊ, ವಿವಿಧ ಸೇವಾ ಸಂಘಟನೆಗಳ ಪ್ರತಿನಿಧಿಗಳ, ಕಡಲತೀರ ವ್ಯಾಪ್ತಿಯ ಗ್ರಾ.ಪಂ.ಗಳ ಪಿಡಿಒಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next