ಬೆಂಗಳೂರು: ಬಾಗಲೂರಿನ ಶೆಲ್ ಕಂಪನಿ ಮುಂಭಾಗ ಎರಡು ತಿಂಗಳ ಹಿಂದೆ (ಮಾರ್ಚ್ 29) ಕನ್ನಡದ “ರಣಂ’ ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ನಡೆದ ಕಂಪ್ರಸ್ಡ್ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಸಿನಿಮಾ ಚಿತ್ರೀಕರಣಕ್ಕೆ ನಿಯಮ ಬಾಹಿರವಾಗಿ ಮೌಖೀಕ ಅನುಮತಿ ನೀಡಿದ ಬಾಗಲೂರು ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಭೀಮಾಶಂಕರ್ ಎಂಬವರನ್ನು ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣಸ್ವಾಮಿ ಅಮಾನತು ಮಾಡಿದ್ದಾರೆ.
ಯಾವುದೇ ಸಿನಿಮಾ ಚಿತ್ರೀಕರಣ ಮಾಡುವ ಮೊದಲು ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಅಥವಾ ಸಂಬಂಧಿಸಿದ ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯ. ಆದರೆ “ರಣಂ’ ಚಿತ್ರ ತಂಡ ಈ ನಿಯಮ ಪಾಲನೆ ಮಾಡಿರಲಿಲ್ಲ. ಆರಂಭದಲ್ಲಿ ಸಂಪಿಗೆಹಳ್ಳಿ ಉಪವಿಭಾಗ ಎಸಿಪಿ ಅವರಿಗೆ ಅನುಮತಿ ನೀಡುವಂತೆ ಮನವಿ ಮಾಡಿತ್ತು. ಆದರೆ, ಸಿನಿಮಾ ತಂಡ ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರದ ಹಿನ್ನೆಲೆಯಲ್ಲಿ ಎಸಿಪಿ ಅನುಮತಿ ನಿರಾಕರಿಸಿದ್ದರು.ಹೀಗಾಗಿ ನೇರವಾಗಿ ಕಾನ್‌ಸ್ಟೆಬಲ್ ಭೀಮಾಶಂಕರ್‌ರನ್ನು ಸಂಪರ್ಕಿಸಿದ್ದ ಚಿತ್ರತಂಡ ಕಾನ್‌ಸ್ಟೆಬಲ್ ಭೀಮಾಶಂಕರ್‌ಗೆ ಐದು ಸಾವಿರ ರೂ. ಕೊಟ್ಟು ಮೌಖೀಕ ಅನುಮತಿ ಪಡೆದು ಚಿತ್ರೀಕರಣ ಆರಂಭಿಸಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ರಣಂ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿದ ಕುರಿತು ಇಲಾಖಾ ತನಿಖೆ ನಡೆಸಿದಾಗ ಕಾನ್‌ಸ್ಟೆಬಲ್ ಭೀಮಾಶಂಕರ್ ಮೌಖೀಕ ಅನುಮತಿ ನೀಡಿರುವುದು ಕಂಡು ಬಂದಿದೆ. ಅಲ್ಲದೆ, ಚಿತ್ರೀಕರಣದ ಮಾಹಿತಿ ಇದ್ದರೂ ಹಿರಿಯ ಅಧಿಕಾರಿಗಳಿಗೆ ತಿಳಿಸದೆ ಕರ್ತವ್ಯ ಲೋಪ ಎಸಗಿದ್ದಾರೆ. ಹೀಗಾಗಿ ಭೀಮಾಶಂಕರ್‌ರನ್ನು ಅಮಾನತುಗೊಳಿಸಲಾಗಿದೆ ಎಂದರು.
ತಾಯಿ, ಮಗಳು ಸಾವು: ದುರಾದೃಷ್ಟವಶಾತ್ ಮಾ.29ರಂದು ಸಿನಿಮಾದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಕಂಪ್ರೈಸಡ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಶೂಟಿಂಗ್ ವೀಕ್ಷಿಸುತ್ತಿದ್ದ ಕಟ್ಟಿಗೆಹಳ್ಳಿಯ ನಿವಾಸಿ ತಬ್ರೇಜ್‌ಖಾನ್ ಅವರ ಪತ್ನಿ ಸುಮೈರಾ (28) ಅವರ ಮಗಳು ಆಯೆರಾ (7) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೂಂದು ಮಗು ಜೈನ್‌ಬ (4) ಗಂಭೀರವಾಗಿ ಗಾಯಗೊಂಡಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಗಲೂರು ಪೊಲೀಸರು ಸಿನಿಮಾ ತಂಡದ ನಾಲ್ವರನ್ನು ಬಂಧಿಸಿ, ಚಿತ್ರೀಕರಣಕ್ಕೆ ಅನುಮತಿ ಕೊಟ್ಟವರು ಯಾರು? ಎಂಬ ಬಗ್ಗೆ ಇಲಾಖಾ ತನಿಖೆ ಆರಂಭಿಸಿತ್ತು. ಈ ವೇಳೆ ಕಾನ್‌ಸ್ಟೆಬಲ್ ಭೀಮಾಶಂಕರ್ ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆ ಚಿತ್ರೀಕರಣಕ್ಕೆ ಮೌಖೀಕ ಅನುಮತಿ ನೀಡಿದಲ್ಲದೆ, ಸಿನಿಮಾ ಸಂಸ್ಥೆಯಿಂದ ಐದು ಸಾವಿರ ರೂ. ಹಣ ಕೂಡ ಪಡೆದುಕೊಂಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾನ್‌ಸ್ಟೆಬಲ್ ಭೀಮಾಶಂಕರ್‌ನನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದರು.