Advertisement
ಹೌದು. ತಾಲೂಕಿನ ಕಿನ್ನಾಳ ಹಿರೇಹಳ್ಳ ಜಲಾಶಯ ಮಿನಿ ಡ್ಯಾಂ ಎಂದೇ ಖ್ಯಾತಿ ಪಡೆದಿದೆ. ಇದು ಕೊಪ್ಪಳ ಭಾಗದ ಲಕ್ಷಾಂತರ ಜನರ ಜೀವನಾಡಿಯಾಗಿದೆ. 1.96 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಈ ಡ್ಯಾಂ ಕಳೆದ ಕೆಲವು ವರ್ಷಗಳಿಂದ ಭಾರಿ ಸುದ್ದಿಯಾಗುತ್ತಿದೆ.
Related Articles
Advertisement
ಪ್ರತಿವರ್ಷವೂ ನೀರು ಹರಿಬಿಟ್ಟಾಗ ರೈತರು ಜಮೀನು ಹಾನಿಯಾಗುತ್ತಿದ್ದು, ರೈತರನ ನೋವು ಹೇಳತೀರದಾಗಿದೆ. ಸರ್ಕಾರ ಕೊಡುವ ಪುಡಿಗಾಸಿಗೆ ಕೈಯೊಡ್ಡುವ ಸ್ಥಿತಿ ಎದುರಾಗುತ್ತಿದೆ. ಹಾಗಾಗಿ ಹಳ್ಳದ ಎಡ-ಬಲ ಭಾಗದಲ್ಲಿನ ರೈತರ ಜಮೀನನ್ನು ಸರ್ಕಾರ, ಜಿಲ್ಲಾಡಳಿತವು ನೀರು ಹರಿಯುವ ವ್ಯಾಪ್ತಿಯನ್ನು ಗುರುತಿಸಿ ಸ್ವಾಧೀನ ಮಾಡಿಕೊಂಡು ಸರ್ಕಾರದ ನಿಯಮಗಳಡಿ ಪರಿಹಾರ ವಿತರಿಸಲಿ ಎನ್ನುವ ಒತ್ತಾಯ ರೈತಾಪಿ ವಲಯದಿಂದ ಕೇಳಿ ಬಂದಿದೆ. ಇಲ್ಲವೇ ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ, ರೈತರ ಹಿತರಕ್ಷಣೆ ಮಾಡಲಿ ಎನ್ನುವ ಒತ್ತಾಯ ಕೇಳಿ ಬಂದಿದೆ. ಪ್ರತಿವರ್ಷವೂ ಮಳೆ ಬಂದಾಗ ಹಳ್ಳದಿಂದ ನೀರು ಹರಿಬಿಡಲಾಗುತ್ತದೆ. ಹೀಗೆ ಪ್ರತಿ ವರ್ಷವೂ ಹಳ್ಳದ ಭಾಗದ ರೈತರು ಜಿಲ್ಲಾಡಳಿತದ ಮುಂದೆ ಮಂಡೆಯೂರಿ ಪರಿಹಾರಕ್ಕೆ ಗೋಗರೆಯುವ ಪರಿಸ್ಥಿತಿ ಎದುರಾಗುತ್ತದೆ. ಇದೆಲ್ಲವನ್ನು ಅರಿತು ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಇವೆಲ್ಲಗಳ ಅವಲೋಕನ ಮಾಡಿ, ಜಿಲ್ಲಾಡಳಿತದ ಸಮನ್ವಯದಿಂದ ವಿಸ್ತೃತ ವರದಿ ಸಿದ್ಧಪಡಿಸಿ ಸರ್ಕಾರದ ಮುಂದೆ ಪ್ರಬಲ ವಾದ ಮಾಡಿ ಪರಿಹಾರ ಇಲ್ಲವೇ ಭೂ ಸ್ವಾಧೀನಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಯತ್ನಿಸಲಿ ಎಂದು ರೈತ ಸಮೂಹ ಒತ್ತಾಯಿಸುತ್ತಿದೆ.
ಗೇಟಗಳ ನಿರ್ವಹಣೆಯಲ್ಲಿ ವಿಫಲ
ಕೆಲವು ವರ್ಷಗಳಿಂದ ಅತಿಯಾದ ಮಳೆಯಿಂದ ಹಿರೇಹಳ್ಳ ಡ್ಯಾಂಗೆ ಅಧಿ ಕ ಪ್ರಮಾಣದ ನೀರು ಹರಿದು ಬರುತ್ತಿದ್ದು, ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳು ವೈಜ್ಞಾನಿಕವಾಗಿ ಹಳ್ಳದ ಪಾತ್ರಕ್ಕೆ ನೀರು ಹರಿ ಬಿಡುತ್ತಿಲ್ಲ. ನೀರು ಬಂದಾಕ್ಷಣ ಏಕಾ ಏಕಿ ಹರಿ ಬಿಡುವುದು. ಇಲ್ಲದಿದ್ದರೆ ಏಕಾಏಕಿ ನೀರು ನಿಲ್ಲುಗಡೆ ಮಾಡುತ್ತಿದ್ದಾರೆ. ಇನ್ನು ಹಳ್ಳದುದ್ದಕ್ಕೂ ನಿರ್ಮಿಸಿದ ಸೇತುವೆಗಳ ಗೇಟ್‌ಗಳನ್ನು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಮಳೆಗಾಲಕ್ಕೂ ಮುನ್ನ ಗೇಟ್‌ಗಳ ಸ್ಥಿತಿಗತಿಯನ್ನು ಒಮ್ಮೆಯೂ ಬಂದು ನೋಡುತ್ತಿಲ್ಲ. ಸೇತುವೆ ಭರ್ತಿಯಾಗಿ ಹರಿಯುವ ವೇಳೆ ಗೇಟ್ ತೆಗೆಯುವ ಪ್ರಯತ್ನ ಮಾಡುತ್ತಾರೆ. ಆದರೆ ನಿರ್ವಹಣೆಯಿಲ್ಲದ ಗೇಟ್ ಗಳು ಮೇಲೆ ಬರಲ್ಲ. ಅಲ್ಲದೇ ಬೃಹದಾಕಾರದ ಗೇಟ್ ಅಳವಡಿಕೆ ಮಾಡಿದ್ದು, ಅವುಗಳನ್ನು ವೈಜ್ಞಾನಿಕ ಮಾದರಿಯಲ್ಲಿ ಎತ್ತುವ ಕೆಲಸ ನಡೆಯಬೇಕಿದೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸುಮ್ಮನಾಗುತ್ತಾರೆ. ಇದರಿಂದ ಅತಿಯಾದ ನೀರು ಸೇತುವೆ ಮೇಲೆ ಹರಿದು ಹಿರೇಹಳ್ಳದ ಎಡ-ಬಲ ಭಾಗದ ರೈತರ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಜಮೀನು ಹಾನಿ ಮಾಡುತ್ತಿದೆ. ಬಿತ್ತಿದ ಬೆಳೆ, ಕೈಗೆ ಬಂದ ಫಸಲು ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ಕಳೆದ ವರ್ಷ, ಈ ವರ್ಷ ನಡೆದ ಹಳ್ಳದ ಅವಾಂತರವೇ ಇದಕ್ಕೆ ಸಾಕ್ಷಿಯಾಗಿದೆ. ಹಳ್ಳದ ವ್ಯಾಪ್ತಿಯ ರೈತರಿಗೆ ಇದು ಬರಸಿಡಿಲು ಬಡಿದಂತಾಗುತ್ತಿದೆ.
ಹಿರೇಹಳ್ಳದ ಜಲಾಶಯದಿಂದ ಹಳ್ಳದ ಪಾತ್ರಕ್ಕೆ ನೀರು ಹರಿಬಿಟ್ಟಾಗ ರೈತರ ಜಮೀನು ಹಾನಿಯಾಗಿರುವ ವಿಷಯ ನನ್ನ ಗಮನಕ್ಕಿದೆ. ಹಾನಿಯ ಕುರಿತಂತೆ ಅದಕ್ಕೆ ಶಾಶ್ವತ ಪರಿಹಾರಕ್ಕೆ ಏನು ವ್ಯವಸ್ಥೆ ಮಾಡಬೇಕು ಎನ್ನುವ ಕುರಿತಂತೆ ವರದಿ ಸಲ್ಲಿಸುವಂತೆ ಹಿರೇಹಳ್ಳದ ಜಲಾಶಯದ ಅಧಿಕಾರಿಗಳಿಗೆ, ಸಣ್ಣ ನೀರಾವರಿಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಳ್ಳದ ಎಡ-ಬಲ ಭಾಗದಲ್ಲಿ ಭೂ ಸ್ವಾಧೀನ ಮಾಡುವುದು ಸುಲಭದ ವಿಷಯವಲ್ಲ. ಅದಕ್ಕೆ ಪರಿಹಾರ ಹೆಚ್ಚು ಬೇಕಾಗುತ್ತದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. –ಸುಂದರೇಶ ಬಾಬು, ಜಿಲ್ಲಾಧಿಕಾರಿ
ಹಿರೇಹಳ್ಳದ ನೀರಿನಿಂದ ನಮ್ಮ ಹಳ್ಳದ ದಂಡೆಯ ಎಡ-ಬಲ ಭಾಗದ ರೈತರ ಜಮೀನು ಹಾನಿಯಾಗುತ್ತಿದೆ. ಕೈಗೆ ಬಂದ ಬೆಳೆಯು ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ರೈತರ ಜಮೀನಿನ ಮೇಲ್ಪದರೇ ಕೊಚ್ಚಿ ಹೋಗಿ ಬಿತ್ತನೆಗೂ ಅವಕಾಶವಿಲ್ಲದಂತಾಗುತ್ತಿದೆ. ಪ್ರತಿವರ್ಷ ರೈತರು ಹಾನಿಗೆ ಪರಿಹಾರ ಕೇಳುವ ಬದಲು ಸರ್ಕಾರ, ಜಿಲ್ಲಾಡಳಿತವೇ ಶಾಶ್ವತ ಪರಿಹಾರ ವ್ಯವಸ್ಥೆ ಮಾಡಲಿ. ಹಳ್ಳದ ಭಾಗದಲ್ಲಿ ಭೂಸ್ವಾ ಧೀನ ಮಾಡಿ ಅವರಿಗೆ ಸರ್ಕಾರದ ನಿಯಮದಡಿ ಪರಿಹಾರ ಕೊಟ್ಟರೆ ಅವರ ಕಷ್ಟ ತೀರಿದಂತಾಗಲಿದೆ. ನಾವೂ ಜಿಲ್ಲಾಧಿಕಾರಿ ಸೇರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ. -ಈಶಪ್ಪ ಮಾದಿನೂರು, ಹಿರೇಸಿಂದೋಗಿ ರೈತ ಮುಖಂಡ
-ದತ್ತು ಕಮ್ಮಾರ