ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆ ವ್ಯಾಪ್ತಿಯಲ್ಲೇ ನಿಗೂಢ ಸದ್ದುಗಳು ಕೇಳಿಬರುತ್ತಿವೆ. ಗಣಿಗಾರಿಕೆ ಸದ್ದಡಗಿಸಿ ಕೆ.ಆರ್.ಎಸ್. ಜಲಾಶಯ ಸಂರಕ್ಷಣೆಗೆ ಸರ್ಕಾರ ಮುಂದಾಗಿದ್ದು, ಈ ಹಿನ್ನಲೆಯಲ್ಲಿ ಗಣಿಗಾರಿಕೆಯ ಶಾಶ್ವತ ನಿಷೇಧಕ್ಕೆ ಚಾಲನೆ ದೊರೆತಂತಾಗಿದೆ.
2018ರ ಜುಲೈ 25ರಂದು ಭಾರೀ ಶಬ್ದ ಕೇಳಿದ ಹಿನ್ನೆಲೆಯಲ್ಲಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತು ವಾರಿ ಕೇಂದ್ರ ಗಣಿಗಾರಿಕೆ ಸದ್ದಿನಿಂದ ಕೆ.ಆರ್.ಎಸ್.ಗೆ ಉಂಟಾಗುವ ಅಪಾಯ ಸ್ಪಷ್ಟಪಡಿಸಿತ್ತು. ಜಿಲ್ಲಾ ಮಟ್ಟದ ಅಧಿಕಾರಿಗಳು ಗಣಿಗಾರಿಕೆ ವಿರುದ್ಧ ಸಮರ ಸಾರಿದ್ದರೂ, ಆಡಳಿತಾರೂಢ ನಾಯಕರ ಪ್ರಭಾವದಿಂದಾಗಿ ಪ್ರಯೋಜನ ಆಗಿರಲಿಲ್ಲ. ಸದ್ಯದ ಪ್ರಭಾವಿ ರಾಜಕಾರಣಿಗಳ ಕೃಪಾಶೀರ್ವಾದದೊಡನೆ ನಡೆಸಲಾಗುತ್ತಿರುವ ಗಣಿಗಾರಿಕೆ ನಿಷೇಧಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ನಿಲುವು ತೆಗೆದುಕೊಂಡಿರುವುದು ಕೆಆರ್‌ಎಸ್ ಸಂರಕ್ಷಣೆ ಕರಿತು ಆಶಾಭಾವ ಮೂಡಿದಂತಾಗಿದೆ.
ಭೂಕಂಪ ವಲಯದಲ್ಲಿ ಕೆಆರ್‌ಎಸ್: ಕೆಆರ್‌ಎಸ್ ಅಣೆಕಟ್ಟು ಭೂಕಂಪ ವಲಯದಲ್ಲಿದೆ. 157 ಗೇಟ್‌ಗಳು ಕಲ್ಲು ಬಂಡೆಗಳ ಮೇಲೆ ನಿಂತಿವೆ. ಅಣೆಕಟ್ಟು ಸುಮಾರು 90 ವರ್ಷ ಹಳೆಯದ್ದು, ಸಣ್ಣ ಕಂಪನವನ್ನೂ ತಡೆದುಕೊಳ್ಳುವುದಿಲ್ಲ. ಗಣಿಗಾರಿಕೆಗೆ ಅವಕಾಶ ನೀಡಿದರೆ ಅಣೆಕಟ್ಟು ಬಿರುಕು ಬಿಡುವುದರಲ್ಲಿ ಅನುಮಾನವಿಲ್ಲ ಎಂದು ಮೈಸೂರಿನ ಇಂಜಿನಿಯರ್ ತಂಡ ಮುಖ್ಯಮಂತ್ರಿ, ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ಜಲ ಆಯೋಗಕ್ಕೂ ಪತ್ರಕ್ಕೂ ಪತ್ರ ಬರೆದಿದೆ.
ಆ.17ರಂದು ಕೆಆರ್‌ಎಸ್ ಸುತ್ತ ಕೇಳಿ ಬಂದ ಭಾರೀ ಶಬ್ದಗಳು ಸರಣಿಯಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೆಆರ್‌ಎಸ್ ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದೆ. ಕ್ರಷರ್‌ಗಳಿಗೂ ಬೀಗಮುದ್ರೆ ಹಾಕಿದೆ. ಗಣಿಗಾರಿಕೆಯಿಂದ ಪರಿಸರ, ಗಾಳಿ, ನೀರು ಹಾಗೂ ಅಣೆಕಟ್ಟೆ ಭದ್ರತೆಗೆ ಕಂಟಕವಾಗಿರುವುದರಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಶಾಶ್ವತ ನಿಷೇಧ ಮಾಡುವಂತೆಯೂ ಜಿಲ್ಲಾಡಳಿತ ರಾಜ್ಯಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
Advertisement
ಕೆ.ಆರ್.ಎಸ್. ಅಣೆಕಟ್ಟೆಗೆ ಅಪಾಯವಿದೆ ಎಂಬ ವೈಜ್ಞಾನಿಕ ವರದಿ ಬಹಿರಂಗಗೊಂಡ ಬಳಿಕ ರಾಜಕೀಯ ಶಕ್ತಿಗಳ ಬೆಂಬಲದೊಡನೆ, ರಾಜಾರೋಷವಾಗಿ ಗಣಿಗಾರಿಕೆ ನಡೆಸುತ್ತಿದ್ದ ಗಣಿಧಣಿಗಳಿಗೆ ಬಿಜೆಪಿ ಸರ್ಕಾರದ ಗಣಿ ನಿಷೇಧದ ಸಮರ ನುಂಗಲಾರದ ತುತ್ತಾಗಿದೆ.
Related Articles
Advertisement
ನೈಸರ್ಗಿಕ ವಿಕೋಪ ಕೇಂದ್ರದ ವರದಿಗೆ ಪುಷ್ಟಿ: ಕೆಆರ್‌ಎಸ್ ಭದ್ರತೆ ದೃಷ್ಟಿಯಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವುದು ಸೂಕ್ತ. ಗಣಿ ಚಟುವಟಿಕೆಗಳು ಮುಂದುವರಿದರೆ ಅಣೆಕಟ್ಟೆಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕೇಂದ್ರ ಭೂ ಮಾಪನ ಅಧ್ಯಯನ ತಂಡ ಸಲ್ಲಿಸಿರುವ ವರದಿಯಲ್ಲೂ ಸ್ಪಷ್ಟವಾಗಿ ತಿಳಿಸಿದೆ. ಅಣೆಕಟ್ಟೆಯ ಬಳಿ ಕೇಳಿಬರುತ್ತಿರುವ ನಿಗೂಢ ಶಬ್ದಗಳು ಎಚ್ಚರಿಕೆ ಕರೆಗಂಟೆಗಳಾಗಿವೆ. ಇದನ್ನು ಕೆಆರ್‌ಎಸ್‌ನಲ್ಲೇ ಇರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿಖರವಾಗಿ ಗುರುತಿಸಿತ್ತು. ಕೇಂದ್ರ ಭೂ ಮಾಪನ ಅಧ್ಯಯನ ತಂಡ ಅದಕ್ಕೆ ಪುಷ್ಟಿಕರಿಸುವಂತೆ ವರದಿ ನೀಡಿದೆ.
ಅಧ್ಯಯನ ಸಾಧ್ಯವಿಲ್ಲ: ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಅಪಾಯವಿದೆಯೋ, ಇಲ್ಲವೋ ಎಂಬ ಬಗ್ಗೆ ಡಿಸೆಂಬರ್‌ನಲ್ಲಿ ಪರಿಶೀಲನೆಗೆ ಆಗಮಿಸಿದ್ದ ಪುಣೆ ವಿಜ್ಞಾನಿಗಳ ತಂಡ ಜನರ ವಿರೋಧಕ್ಕೆ ಮಣಿದು ಅಧ್ಯಯನ ನಡೆಸದೆ ವಾಪಸ್ ತೆರಳಿತ್ತು. ನಂತರದಲ್ಲಿ ಮತ್ತೂಮ್ಮೆ ಅಧ್ಯಯನ ನಡೆಸುವಂತೆ ಸರ್ಕಾರ ಕೋರಿಕೆ ಇಟ್ಟ ಸಂದರ್ಭದಲ್ಲಿ ಗಣಿಗಾರಿಕೆ ನಡೆಯುವ ಸಮಯ ದಲ್ಲಿ ಅದನ್ನು ಅಧ್ಯಯನ ಮಾಡಬೇಕಾಗುತ್ತದೆ. ಗಣಿ ಪ್ರದೇಶದಲ್ಲಿ ಯಾವ ರೀತಿಯ ಸ್ಫೋಟ ಗಳನ್ನು ಮಾಡಲಾಗುತ್ತಿದೆ ಎಂಬುದರ ಅರಿವಿಲ್ಲ. ಕಲ್ಲು ಬಂಡೆಗಳನ್ನು ಸಿಡಿಸಲು ಯಾವ ಸ್ಫೋಟಕ ವಸ್ತುಗಳನ್ನು ಬಳಸುತ್ತಿದ್ದಾರೆ. ಅದು ಮೆಗ್ಗರ್ ಬ್ಲಾಸ್ಟೋ, ಬೋರ್ ಬ್ಲಾಸ್ಟಿಂಗೋ ಎಂಬ ಅರಿವಿ ಲ್ಲದೆ ಅಧ್ಯಯನ ನಡೆಸಲಾಗುವುದಿಲ್ಲ. ನಾವು ವೈಜ್ಞಾನಿಕವಾಗಿ ನಡೆಸುವ ಸ್ಫೋಟದ ಅಧ್ಯಯ ನಕ್ಕೂ, ಗಣಿಗಾರಿಕೆಯಲ್ಲಿ ಸಂಭವಿಸಬಹುದಾದ ಸ್ಫೋಟಗಳಿಗೂ ಸಾಕಷ್ಟು ವ್ಯತ್ಯಾಸಗಳಿರುತ್ತವೆ ಎಂದು ಹೇಳಿ ಕೈಚೆಲ್ಲಿದೆ.
ಭಾರತೀಯ ಸರ್ವೇಕ್ಷಣೆ ಇಲಾಖೆ ಮೊರೆ: ಕೆಆರ್‌ಎಸ್ ಅಣೆಕಟ್ಟೆ ಬಳಿ ಕೇಳಿಬರುತ್ತಿರುವ ಭಾರೀ ಶಬ್ದಗಳ ಹಿಂದಿನ ಸತ್ಯಾಂಶ ತಿಳಿಯುವುದಕ್ಕೆ ಭಾರತೀಯ ಸರ್ವೇಕ್ಷಣೆ ಇಲಾಖೆ ಅಧಿಕಾರಿಗ ಳಿಂದಲೂ ಪರಿಶೀಲಿಸುವ ಪ್ರಯತ್ನ ನಡೆಸಲಾಗಿದೆ. ಆ ತಂಡ ಈಗ ಮಹಾರಾಷ್ಟ್ರ, ಕೊಡಗು, ದಕ್ಷಿಣ ಕನ್ನಡದಲ್ಲಿ ಉಂಟಾಗಿರುವ ಭೂ ಕುಸಿತ ಕುರಿತ ಅಧ್ಯಯನದಲ್ಲಿ ತೊಡಗಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಬಳಿಕ ಕೆಆರ್‌ಎಸ್ ಅಣೆಕಟ್ಟೆಗೆ ಬರುವುದಾಗಿ ತಿಳಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.
ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿರುವ ಸತ್ಯ ತಿಳಿದರೂ ಗಣಿಗಾರಿಕೆ ಯನ್ನು ಕಾನೂನು ಬದ್ಧಗೊಳಿಸಬೇಕೆಂದು ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ಕೂಗೆಬ್ಬಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗಣಿಗಾರಿಕೆಯಿಂದಷ್ಟೇ ಅಭಿವೃದ್ಧಿ ಎನ್ನುವುದು ಅವಿವೇಕದ ಮಾತು ಎಂದು ಕೆಂಡ ಕಾರುತ್ತಿದ್ದಾರೆ.
ಅಣೆಕಟ್ಟು ತಪಾಸಣೆಗೆ ಮನವಿ: 90 ವರ್ಷಗಳ ಹಳೆಯದಾಗಿರುವ ಕೆಆರ್‌ಎಸ್ ಭದ್ರತೆ ಕುರಿತಂತೆ ತಪಾಸಣೆ ನಡೆಸುವಂತೆ ಕೆಆರ್‌ಎಸ್ ಉನ್ನತ ಮಟ್ಟದ ಸಮಿತಿಗೆ ಈಗಾಗಲೇ ಜಿಲ್ಲಾಡಳಿತ ಮನವಿ ಮಾಡಿದೆ. ಅದಕ್ಕೆ ಒಪ್ಪಿಗೆ ದೊರಕಿದ್ದು, ಆದಷ್ಟು ಬೇಗ ತಂಡ ರಚನೆ ಮಾಡಿ ಸುಭದ್ರತೆ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದೆ ಎನ್ನಲಾಗಿದೆ.
ಗಣಿ ನಡೆಯುವಾಗಷ್ಟೇ ನಿಗೂಢ ಶಬ್ದಗಳು:
ಕಲ್ಲು ಗಣಿಗಾರಿಕೆ ನಡೆಯುವ ಸಮಯದಲ್ಲಷ್ಟೇ ಭಾರೀ ಶಬ್ದಗಳ ಜೊತೆ ಭೂಕಂಪನದ ಅನುಭವವಾಗುತ್ತದೆ. ಉಳಿದಂತೆ ಯಾವ ಶಬ್ದಗಳೂ ಇಲ್ಲದೆ ಶಾಂತವಾಗಿರುತ್ತದೆ. ಪ್ರಸ್ತುತ ಕಲ್ಲು ಗಣಿಗಾರಿಕೆ, ಕ್ರಷರ್ ಕಾರ್ಯಾಚರಣೆ ಮೇಲೆ ನಿಷೇಧ ಹೇರಿರುವುದರಿಂದ ಈಗ ಅಂತಹ ಶಬ್ದಗಳು ಕೇಳಿಬರುತ್ತಿಲ್ಲ. ಇದನ್ನು ಗಮನಿಸಿದಾಗ ನಿಗೂಢ ಶಬ್ದಗಳನ್ನು ಸೃಷ್ಟಿ ಮಾಡುತ್ತಿರುವುದು ಗಣಿ ಪ್ರದೇಶದಲ್ಲಿ ನಡೆಯುವ ಸ್ಫೋಟಗಳೇ ಎನ್ನುವುದನ್ನು ಪುಷ್ಟಿಕರಿಸಿವೆ. ಅಲ್ಲದೆ, ಕೆಆರ್‌ಎಸ್‌ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ಹಾಗೂ ಕ್ರಷರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆಯೇ ವಿನಾ, ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ನಡೆಯುತ್ತಿರುವ ಗಣಿಗಾರಿಕೆ ಹಾಗೂ ಕ್ರಷರ್‌ಗಳು ಬಹುತೇಕ ಅಕ್ರಮವಾಗಿವೆ. ಪ್ರಭಾವಿ ರಾಜಕಾರಣಿಗಳು ಹಾಗೂ ಅವರ ಬೆಂಬಲಿಗರೇ ಗಣಿಗಾರಿಕೆಯಲ್ಲಿ ನಿರತರಾಗಿದ್ದಾರೆ.
•ಮಂಡ್ಯ ಮಂಜುನಾಥ್