ಗುಳೇದಗುಡ್ಡ: ಬಾದಾಮಿ-ಕೆರೂರ ಪಟ್ಟಣಗಳಿಗೆ ಆಲಮಟ್ಟಿಯಿಂದ ಶಾಶ್ವತ ಕುಡಿಯುವ ನೀರು ಪೂರೈಸುವ 228 ಕೋಟಿ ರೂ. ವೆಚ್ಚದ ಯೋಜನೆಗೆ ಪಂಪ್‌ಹೌಸ್ ನಿರ್ಮಾಣ ಹಾಗೂ ವಾಟರ್ ಟ್ರಿಟರ್ ಯುನಿಟ್ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು.
ಕೆರೂರ ಹಾಗೂ ಬದಾಮಿ ಪಟ್ಟಣ ಹಾಗೂ ಮಾರ್ಗ ಮಧ್ಯೆ ಬರುವ 18 ಹಳ್ಳಿಗಳಿಗೆ 24×7 ಯೋಜನೆಯ ಶಾಶ್ವತ ಕುಡಿಯುವ ನೀರು ಪೂರೈಸಲು ಪಂಪ್‌ಹೌಸ್‌ಗಾಗಿ ಕಮತಗಿ ರಸ್ತೆಗೆ, ವಾಟರ್ ಟ್ರೀಟರ್ ಯುನಿಟ್ ನಿರ್ಮಾಣಕ್ಕೆ ತೋಗುಣಶಿ ಹತ್ತಿರದ ಖಾಸಗಿ ಮಾಲೀಕತ್ವದ ಹಾಗೂ ಸರಕಾರಿ ಜಾಗೆಗಳನ್ನು ಪರಿಶೀಲನೆ ನಡೆಸಿ, ಇಲ್ಲಿ ವಿದ್ಯುತ್ ಮೇನ್ ಲೈನ್ ಹಾಯ್ದು ಹೋಗಿದೆ. ಈ ಜಾಗೆಯನ್ನು ಜಲಮಂಡಳಿ ಅಭಿಯಂತರರು ಪರಿಶೀಲನೆ ಮಾಡಿದ್ದಾರೋ ಇಲ್ಲವೋ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಜಮೀನಿನ ಮಾಲೀಕರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಮಾತನಾಡಿ, ನಾನು ಸರಕಾರದ ಪರವಾದ ಪ್ರತಿನಿಧಿಯಾಗಿದ್ದು, ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇಲ್ಲಿ ಮಾಡಲಾಗುತ್ತಿದೆ. ತಾವು ಭೂಮಿ ನೀಡಿದರೆ ಕುಡಿಯುವ ನೀರಿನ ಯೋಜನೆಗೆ ಜಾಗ ಕೊಟ್ಟಂತಾಗುತ್ತದೆ. ಅಲ್ಲದೇ ನೀರಿನ ಯೋಜನೆಗೆ ಜಾಗೆ ಕೊಡುವುದರಿಂದ ಜನರಿಗೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.
ತೋಗುಣಶಿಯಲ್ಲಿ ಪರಿಶೀಲನೆ: ತೋಗುಣಶಿ ಬಸ್ ನಿಲ್ದಾಣದ ಹತ್ತಿರದ ಸರಕಾರಿ ಜಾಗೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಕೆರೂರು-ಬಾದಾಮಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆ ಕಾಮಗಾರಿ ಆರಂಭಕ್ಕೆ ಭೂಮಿ ಅವಶ್ಯವಿದೆ. ಅದಕ್ಕೆ ಜಾಗ ನೋಡುತ್ತಿದ್ದೇವೆ. ಭೂಮಿ ಸಿಕ್ಕರೆ ಟೆಂಡರ್ ಪ್ರಕ್ರಿಯೆಯು ಆರಂಭವಾಗಿ, ಕಾಮಗಾರಿ ಆರಂಭವಾಗಲಿದೆ ಎಂದರು.
ರಾಜ್ಯದಲ್ಲಿ ಬರಗಾಲ ಆವರಿಸಿದ್ದು, ಈ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಂಡರೆ ಜನರಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಭೂಮಿ ಪರಿಶೀಲನೆ ಮಾಡುತ್ತಿದ್ದೇವೆ. ನೇರ ಖರೀದಿ ಯೋಜನೆ ಮೂಲಕ ಸರಕಾರವು ಮಾಲೀಕರಿಂದ ಭೂಮಿ ಖರೀದಿ ಪ್ರಕ್ರಿಯೆ ಮಾಡುತ್ತದೆ. ತೋಗುಣಶಿ ಕ್ರಾಸ್ ಹತ್ತಿರ ಭೂಮಿ ಕೊಡಲು ಕೆಲವರು ಮುಂದೆ ಬಂದಿದ್ದು, ಅವರು ಸರಕಾರಿ ದರಕ್ಕೆ ಭೂಮಿ ನೀಡಿದರೆ ಸರಕಾರ ಭೂಮಿ ಖರೀದಿಸುತ್ತದೆ. ಭೂಮಿ ಖರೀದಿ ಪ್ರಕ್ರಿಯೆ ಬಗ್ಗೆ ತಹಶೀಲ್ದಾರ ಎಸ್.ಎಸ್. ಇಂಗಳೆ ಅವರಿಗೆ ವಹಿಸಲಾಗಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಎಚ್.ಜಯಾ, ತಹಶೀಲ್ದಾರ್ ಎಸ್.ಎಸ್.ಇಂಗಳೆ, ಉಪತಹಶೀಲ್ದಾರ್ ಎಂ.ಎಸ್.ಅಂಗಡಿ, ಮಂಡಳಿಯ ಅಭಿಯಂತರ ನಿಖೀಲ್ ಕಡ್ಲಿಮಟ್ಟಿ, ಮುಖಂಡರಾದ ಸಂಜಯ ಕಾರಕೂನ, ಎಸ್.ಎಂ.ಪಾಟೀಲ, ಶ್ರೀನಿವಾಸ ಇನಾನಿ ಸೇರಿದಂತೆ ಇತರರು ಇದ್ದರು.
ಅಕ್ರಮ ಮರಳು ಸಾಗಾಟ ತಡೆಗೆ ಸೂಚನೆ:
ತಾಲೂಕಿನ ವ್ಯಾಪ್ತಿಯ ಹಲವು ಕಡೆಗಳಲ್ಲಿ ಅಕ್ರಮ ಮರಳು ಸಾಗಾಟ ನಡೆದಿದ್ದು, ಅದರ ತಡೆಗೆ ಕ್ರಮ ಕೈಗೊಳ್ಳಬೇಕು. ತಾಲೂಕಿನ ಹಲವು ಕಡೆಗಳಿಂದ ಅಕ್ರಮ ಮರಳು ಸಾಗಾಟ ನಡೆದಿದೆ ಎಂದು ದೂರು ಕೇಳಿ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಅಕ್ರಮ ಮರಳು ಸಾಗಟವಾಗದಂತೆ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸೂಚಿಸಿದರು.