Advertisement

ತೋಟಗಾರಿಕೆ ವಿವಿಗೆ ಕಾಯಂ ಕುಲಪತಿ ನೇಮಿಸಲು ಆಗ್ರಹ

11:37 AM Nov 24, 2019 | Suhan S |

ಬಾಗಲಕೋಟೆ: ರಾಜ್ಯದ 23 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಬಾಗಲಕೋಟೆಯ ತೋಟಗಾರಿಕೆ ವಿವಿಗೆ ಒಂದು ವರ್ಷ ಕಳೆದರೂ ಕಾಯಂ ಕುಲಪತಿ ನೇಮಕ ಮಾಡಿಲ್ಲ. ಪ್ರಭಾರಿ ಕುಲಪತಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡು

Advertisement

ಉಪನ್ಯಾಸಕರ ವರ್ಗಾವಣೆ, ವಿವಿಧ ಕಟ್ಟಡ ಕಾಮಗಾರಿ ನಡೆಸುತ್ತಿದ್ದಾರೆ. ಸರ್ಕಾರ, ವಿವಿಗೆ ಕಾಯಂ ಕುಲಪತಿ ನೇಮಕ ಮಾಡಬೇಕು ಎಂದು ಸತ್ಯಶೋಧಕ ಸಂಘದ ಅಧ್ಯಕ್ಷ ಪರಶುರಾಮ ಮಹಾರಾಜನವರ ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಟಗಾರಿಕೆ ವಿವಿಯಲ್ಲಿ ಬ್ಯಾಕ್‌ ಲಾಗ್‌ ಹುದ್ದೆಗಳನ್ನು ಸರ್ಕಾರ ಕೂಡಲೇ ಭರ್ತಿ ಮಾಡಬೇಕು. ಕಳೆದ ಒಂದು ವರ್ಷಕ್ಕೂ ಮೇಲ್ಪಟ್ಟು ಪ್ರಭಾರಿ ಕುಲಪತಿಗಳ ಆಡಳಿತದಲ್ಲೇ ವಿವಿ ನಡೆಯುತ್ತಿದ್ದು, ಕಾಯಂ ಕುಲಪತಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು. ಪ್ರಭಾರಿ ಕುಲಪತಿಗಳಿಂದ ವಿವಿಯ ಆಡಳಿತ ಯಂತ್ರ ಸರಿಯಾಗಿ ನಡೆಯುತ್ತಿಲ್ಲ. ವ್ಯವಸ್ಥಾಪನ ಮಂಡಳಿ ಅನುಮೋದನೆ ಇಲ್ಲದೇ ತಮಗೆ  ಬೇಕಾದವರನ್ನು ವರ್ಗಾವಣೆ ಮಾಡುತ್ತಿದ್ದಾರೆ. ಕ್ರಿಯಾ ಯೋಜನೆ ಇಲ್ಲದೇ ವಿವಿಧ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಆದರೂ, ವಿವಿಯ ಬೋಧಕ ಸಿಬ್ಬಂದಿಗೆ ಬಡ್ತಿ ನೀಡಿಲ್ಲ. ಇದಕ್ಕೆ ವ್ಯವಸ್ಥಾಪನ ಮಂಡಳಿ ಪರವಾನಗಿ ಅನುಮೋದನೆ ಕೊಟ್ಟಿಲ್ಲ ಎಂದು ಕುಲಪತಿ ಹೇಳುತ್ತಿದ್ದಾರೆ. ಹಾಗಾದರೆ, ವ್ಯವಸ್ಥಾಪನ ಮಂಡಳಿ ಅನುಮೋದನೆ ಕಾಮಗಾರಿ ಹೇಗೆ ಕೈಗೊಳ್ಳಲಾಯಿತು ಎಂದು ಪ್ರಶ್ನಿಸಿದರು.

ವಿವಿಯಲ್ಲಿ ಕಳೆದ 10 ವರ್ಷಗಳಿಂದ ದಿನಗೂಲಿ ಕೆಲಸ ಮಾಡುತ್ತಿರುವ ಡಿ ದರ್ಜೆ ನೌಕರರನ್ನು ಕಾಯಂ ಮಾಡಿಲ್ಲ. ವಿವಿಯ ಆವರಣದಲ್ಲಿ ದ್ರಾಕ್ಷಿ ಸಂಸ್ಕೃರಣ ಘಟಕ ಸ್ಥಾಪಿಸಿದ್ದರೂ ಅದನ್ನು ಆರಂಭಿಸಿಲ್ಲ. ಅಲ್ಲಿರುವ ಯಂತ್ರಗಳು, ಧೂಳು ತಿಂದು ಹಾಳಾಗುತ್ತಿವೆ. ಈ ಸಂಸ್ಕೃರಣ ಘಟಕ ಆರಂಭಿಸಿದರೆ ಹಲವರಿಗೆ ಉದ್ಯೋಗ ದೊರೆಯಲಿದೆ. ಆದರೂ, ಪ್ರಭಾರಿ ಕುಲಪತಿಗಳು ಈ ಕುರಿತು ಪ್ರಯತ್ನಿಸುತ್ತಿಲ್ಲ ಎಂದು ಆರೋಪಿಸಿದರು.

ಮುಖಂಡರಾದ ಸದಾಶಿವ ಕೊಟಬಾಗಿ, ಮಂಜು ಚಲವಾದಿ, ವಿವೇಕಾನಂದ ಚಂದರಗಿ, ಶ್ರೀಧರ ನೀಲನಾಯಕ, ಅರುಣ್‌ ಗರಸಂಗಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next