ಬಾಗಲಕೋಟೆ: ರಾಜ್ಯದ 23 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯಕ್ಕೆ ನಾಲ್ಕು ವರ್ಷಗಳ ಅವಧಿಗೆ ಕುಲಪತಿಯಾಗಿ ಡಾ| ಕೆ.ಎಂ. ಇಂದಿರೇಶ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದಾರೆ.
ಕಳೆದ 22ತಿಂಗಳಿಂದ ಹಂಗಾಮಿ ಕುಲಪತಿಯಾಗಿದ್ದ ಡಾ| ಕೆ.ಎಂ. ಇಂದಿರೇಶ ಅವರು ಒಳಗೊಂಡ ಮೂವರ ಹೆಸರನ್ನು ತಜ್ಞರ ಸರ್ಚ್ ಕಮೀಟಿ ಸರ್ಕಾರಕ್ಕೆ ವರದಿ ಕಳುಹಿಸಿತ್ತು. ರಾಜ್ಯಪಾಲರು, ಡಾ|ಇಂದಿರೇಶ ಅವರನ್ನು ನಾಲ್ಕು ವರ್ಷಗಳ ಅವಧಿಗೆ ಕುಲಪತಿಯನ್ನಾಗಿ ನೇಮಕ ಮಾಡಿ, ಆದೇಶಿಸಿದ್ದಾರೆ.
ಇಂದಿರೇಶರ ಪರಿಚಯ: ತೋಟಗಾರಿಕೆಯಲ್ಲಿ ಬಿ.ಎಸ್‌ಸಿ. ಪದವಿ ಹಾಗೂ ತರಕಾರಿ ವಿಜ್ಞಾನದಲ್ಲಿ ಎಂ.ಎಸ್‌ಸಿ ಹಾಗೂ ಪಿಎಚ್‌ಡಿ ಪದವಿ ಪಡೆದಿರುವ, ಡಾ| ಇಂದಿರೇಶ, 1982ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ವಿಸ್ತರಣಾ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿ, 1986ರಲ್ಲಿ ಅರಸಿಕೇರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಬ್ರಹ್ಮಾವರದಲ್ಲಿ ಏಳು ವರ್ಷ ಸೇವೆ, ಅರಸಿಕೇರಿ ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ, ನಂತರ ಬೆಂಗಳೂರು ವಿಶ್ವವಿದ್ಯಾಲಯದಿಂದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
2013ರಿಂದ 2017ರ ವರೆಗೆ ಮೈಸೂರು ತೋಟಗಾರಿಕೆ ಕಾಲೇಜಿನಲ್ಲಿ ಡೀನ್ ಆಗಿದ್ದ ಅವರು, 2017ರಿಂದ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿ, ಶಿಕ್ಷಣ ನಿರ್ದೇಶಕರಾಗಿ ಹಾಗೂ ಸದ್ಯ 22 ತಿಂಗಳ ಪ್ರಭಾರಿ ಕುಲಪತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಬಿವಿವಿ ಸಂಘ ಸಂತಸ: ಡಾ| ಕಬ್ಟಾಳಿ ಮಹಾಲಿಂಗಪ್ಪ ಇಂದ್ರೇಶ ಅವರನ್ನು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ನಾಲ್ಕು ವರ್ಷದ ಅವಧಿಗೆ ನೇಮಕಗೊಂಡಿದ್ದಕ್ಕೆ ಬಿವಿವಿ ಸಂಘ ಸಂತಸ ವ್ಯಕ್ತಪಡಿಸಿದೆ. ಹಣ್ಣು ಬೆಳೆಗಾರರ ನಾಡೆನಿಸಿದ ಉತ್ತರ ಕರ್ನಾಟಕದ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ರೈತರ ಮುಖವಾಗಿ ತೋಟಗಾರಿಕೆಯ ಜನರ ಅಭಿವೃದ್ಧಿಗಾಗಿ ಶ್ರಮಿಸಲಿ, ಇಲ್ಲಿನ ಅಧ್ಯಯನ ಅಧ್ಯಾಪನ, ಸಂಶೋಧನೆಗಳು ಗ್ರಾಮೀಣರತ್ತ ತೋಟಗಾರಿಕೆ ಬೆಳೆಗಾರರತ್ತ ಮುಖ ಮಾಡಲಿ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಶಾಸಕ ಡಾ|ವೀರಣ್ಣ ಚರಂತಿಮಠ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ. ಸಜ್ಜನ (ಬೇವೂರ) ಆಶಯ ವ್ಯಕ್ತಪಡಿಸಿದ್ದಾರೆ.