Advertisement

ದಾಸೋಹ ದಿಂದ ಶಾಶ್ವತ ಸಾಧನೆ

11:02 AM Nov 12, 2018 | |

ಕಲಬುರಗಿ: ದಾಸೋಹ ಮನೋಭಾವದಿಂದ ಶಾಶ್ವತ ಸಾಧನೆ ಮಾಡಲು ಸಾಧ್ಯ ಎಂದು ಮೈಸೂರು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ನುಡಿದರು. 

Advertisement

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್‌) ಸುವರ್ಣ ಮಹೋತ್ಸವ, ಶಾಲೆಯ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉತ್ಸವದ ಮೂರನೇ ದಿನದ ಮೊದಲನೇ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿ ಅವರು ಮಾತನಾಡಿದರು.

ಮಹಾದಾಸೋಹಿ ಶರಣಬಸವೇಶ್ವರರು ತಮ್ಮ ಕಾಯಕದ ಜತೆಗೆ ದಾಸೋಹ ಕಾರ್ಯ ಅಳವಡಿಸಿಕೊಂಡಿದ್ದರಿಂದ ಮಹಾಪುರುಷರಾದರು. ಅದೇ ರೀತಿ ಶರಣಬಸವೇಶ್ವರ ಮಹಾದಾಸೋಹ ಸಂಸ್ಥಾನದ ಹಿಂದಿನ ಪೀಠಾಧಿಪತಿ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರು ಧಾರ್ಮಿಕ ನಿಷ್ಠೆ ಜತೆಗೆ ಶೃದ್ಧಾ ಭಕ್ತಿ ಹೊಂದಿ ಅದರ ತಪಸ್ಸಿನ ಫಲವನ್ನು ಸಮಾಜಕ್ಕೆ ಧಾರೆ ಎರೆದು ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದರು.

ಈಗಿನ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ದಾಸೋಹ ಸೂತ್ರ ರಚಿಸಿ ದೊಡ್ಡಪ್ಪ ಅಪ್ಪ ಹಾಕಿದ ಅಡಿಪಾಯದ ಮೇಲೆ ದೊಡ್ಡ ಹಾಗೂ ಸುಂದರ ಶಿಕ್ಷಣದ ಕೇಂದ್ರ ತೆರೆದು ಜಗತ್ತಿನಾದ್ಯಂತ ಸುವಾಸನೆ ಬೀರಿದ್ದಾರೆ ಎಂದು ಶ್ಲಾಘಿಸಿದರು. 

ಒಮ್ಮೆ ಮೈಸೂರಿನಲ್ಲಿ 20 ಕೆಎಎಸ್‌ ಅಧಿಕಾರಿಗಳ ತಂಡ ತರಬೇತಿಗೆ ಬಂದಾಗ ಅವರಲ್ಲಿ ಆರು ಜನ ಎಸ್‌ಬಿಆರ್‌ ಶಾಲೆಯ ವಿದ್ಯಾರ್ಥಿಗಳೆಂದು ಹೇಳಿದ್ದರು. ಒಟ್ಟಾರೆ ಡಾ| ಶರಣಬಸವಪ್ಪ ಅಪ್ಪ ಅವರು ಗುಣಮಟ್ಟತೆಯೊಂದಿಗೆ ಸಂಸ್ಥೆ ಮುನ್ನಡೆಸಿಕೊಂಡು ಬರುತ್ತಾ ಈ ಭಾಗಕ್ಕೆ ದೊಡ್ಡ ಕೊಡುಗಡೆ ನೀಡಿದ್ದಾರೆ. ಇದನ್ನೆಲ್ಲ ಅವಲೋಕಿಸಿದರೆ ತಾನು ಮಾಡಿದ್ದು ಎನ್ನುವ ಭಾವನೆ ಇರದೇ ದಾಸೋಹ ಭಾವನೆ ಹೊಂದಿರುವುದು ನಿರೂಪಿಸುತ್ತದೆ ಎಂದರು.

Advertisement

ರಾಜಕಾರಣ-ಸರ್ಕಾರದ ಅವಲಂಬಿತರಾಗಬೇಡಿ: ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ತಾವು ಹುಟ್ಟಿದ ಸ್ಥಳ ಹಾಗೂ ಭೂಮಿಯತ್ತ ಗಮನ ಕೊಡುವುದರ ಜತೆಗೆ ರಾಜಕಾರಣ ಹಾಗೂ ಸರ್ಕಾರದ ಮೇಲೆ ಅವಲಂಬಿತರಾಗದೇ ಬದುಕು ರೂಪಿಸಿಕೊಳ್ಳಿ ಎಂದು ಹೇಳಿದರು.

ಅಮೆರಿಕಾ ಮಾಜಿ ಅಧ್ಯಕ್ಷ ಜಾನ್‌.ಎಫ್‌. ಕೆನಡಿ ಹೇಳಿರುವಂತೆ ದೇಶ ನಮಗಾಗಿ ಏನು ಕೊಟ್ಟಿದೆ ಎನ್ನುವ ಬದಲು, ನಾವೇನು ದೇಶಕ್ಕೆ ಕೊಟ್ಟಿದ್ದೇವೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬೇಕು. ಅಲ್ಲದೇ ಶಿಕ್ಷಣ ಬದಲಾವಣೆ ತರುತ್ತದೆಯಲ್ಲದೇ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದು ವಿವರಿಸಿದರು.

ನಿಜಾಂ ಆಳ್ವಿಕೆಗೆ ಒಳಪಟ್ಟ ಈ ಭಾಗದಲ್ಲಿ ಶಿಕ್ಷಣಕ್ಕೆ ಅವಕಾಶ ಇರಲಿಲ್ಲ. ಮೈಸೂರು ಸಂಸ್ಥಾನ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರೆ ನಿಜಾಂ ಕೊಟ್ಟಿರಲಿಲ್ಲ. ಸ್ವಾತಂತ್ರ್ಯಾ ಪೂರ್ವದಲ್ಲಿ ಈ ಭಾಗದ ಜನ ಶಿಕ್ಷಣ ಪಡೆಯಬೇಕಾದರೆ ಹೈದ್ರಾಬಾದ್‌ಗೆ ಹೋಗಬೇಕಿತ್ತು. ಆ ಕಾಲದಲ್ಲಿ ಕಲಬುರಗಿ ವಿಭಾಗದಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯಿತ್ತು. ಆದರೆ ಆ ಕಾಲದಲ್ಲೇ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರು ಮಹಿಳಾ ಶಾಲೆ ತೆರೆಯುವ ಮುಖಾಂತರ ಹೊಸತನಕ್ಕೆ ನಾಂದಿ ಹಾಡಿದರು ಎಂದರು. 

ಸೇಡಂ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣ ಸಂಸ್ಥಾನ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಸಿದವರಿಗೆ ಅನ್ನ, ನೆತ್ತಿಗೆ ಬುದ್ಧಿ ನೀಡಿದ್ದಲ್ಲದೇ ಇರಲು ಆಶ್ರಯ ನೀಡಿದೆ. ಸಮಾಜಕ್ಕೆ ಇದಕ್ಕಿಂತ ದೊಡ್ಡ ಕೊಡುಗೆ ಮತ್ತೇನು ಬೇಕು? ಆಶಾವಾದ ಇರಬೇಕು-ನಿರಾಸೆವಾದ ಇರಬಾರ ದು ಎಂದು ಹೇಳಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಶರಣಬಸವಪ್ಪ ಅಪ್ಪ ಮಾತನಾಡಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಶಿಕ್ಷಣದ ಜತೆಗೆ ವ್ಯಕ್ತಿತ್ವ ಹಾಗೂ ನಾಯಕತ್ವ ರೂಪಿಸುತ್ತದೆ. ಪಬ್ಲಿಕ್‌ ಶಾಲೆಯನ್ನು ದೇಶಾದ್ಯಂತ ಸುತ್ತಿ ಪ್ರಾರಂಭಿಸಲಾಗಿದೆ. ಡೆಹ್ರಾಡೂನ್‌ ಪಬ್ಲಿಕ್‌ ಶಾಲೆಯಲ್ಲಿ ದೇಶದ ರಾಜ ಮಹಾರಾಜರ ಮಕ್ಕಳು ಓದುತ್ತಿದ್ದರು. ಅದನ್ನು ನೋಡಿದೆ.

ಈಗ ಈ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಯಿಂದ 5 ಲಕ್ಷ ರೂ. ಶುಲ್ಕ ಪಡೆಯಲಾಗುತ್ತದೆ. ಅದೇ ರೀತಿ ಹೈದ್ರಾಬಾದ್‌ನ ಜಹಾಗೀರದಾರ ಪಬ್ಲಿಕ್‌ ಶಾಲೆಗೂ ಭೇಟಿ ನೀಡಲಾಯಿತು. ಒಟ್ಟಾರೆ ಕಠಿಣ ಕಾಯಕದಿಂದ ಶ್ರಮಿಸಿದರೆ ದುಡಿತವೇ ದುಡ್ಡಿನ ತಾಯಿ ಎನ್ನುವಂತೆ ಫಲ ಸಿಗುತ್ತದೆ ಎಂದರು.
 
ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ, ವೀರಣ್ಣ ಚರಂತಿಮಠ, ಬಿ.ಜಿ. ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ಮಾಣಿಕಪ್ರಭು ಸಂಸ್ಥಾನದ ಶ್ರೀಗಳು, ಖಾಜಾ ಬಂದೇನವಾಜ್‌ ವಿವಿಯ ವಿತ್ತಾಧಿಕಾರಿ ಎಂ.ಎ. ಲತೀಫ್‌ ಷರೀಪ್‌, ನೂತನ ವಿದ್ಯಾಲಯ ಸಂಸ್ಥೆ ಅಧ್ಯಕ್ಷ ಡಾ| ಸರ್ವೋತ್ತಮರಾವ್‌, ಎಚ್‌ಕೆಇ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಪತಿ ಡಾ| ನಿರಂಜನ್‌ ನಿಷ್ಠಿ, ಉದ್ಯಮಿಗಳಾದ ಎಸ್‌.ಎಸ್‌. ಪಾಟೀಲ, ರಾಘವೇಂದ್ರ ಮೈಲಾಪುರ, ಎಸ್‌ಬಿಆರ್‌ ಪ್ರಾಚಾರ್ಯ ಪ್ರೊ| ಎನ್‌. ಎಸ್‌. ದೇವರಕಲ್‌, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ| ಭರತ ಎಲ್‌. ಕೋಣಿನ್‌, ಖಜಾಂಚಿ ಅಪ್ಪು ಕಣಕಿ ಮುಂತಾದವರಿದ್ದರು. ಅಪ್ಪಾ ಪಬ್ಲಿಕ್‌ ಶಾಲೆಯ ಪ್ರಾಚಾರ್ಯ ಶಂಕರೇಗೌಡ ಹೊಸಮನಿ ನಿರೂಪಿಸಿದರು, ಡಾ| ಚಂದ್ರಕಾಂತ ಪಾಟೀಲ ವಂದಿಸಿದರು.

ಅಪ್ಪ ಶತಾಯುಷಿಯಾಗಲಿ, ದೇವರಕಲ್‌ ನೂರು ವರ್ಷ ಪ್ರಾಚಾರ್ಯರಾಗಿರಲಿ
ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಎತ್ತರಕ್ಕೆ ಬೆಳೆಯಲು ಡಾ| ಶರಣಬಸವಪ್ಪ ಅಪ್ಪ ಪರಿಶ್ರಮ ಕಾರಣವಾಗಿದೆ. 42 ವರ್ಷಗಳ ಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಪ್ರಾಚಾರ್ಯ ಎನ್‌.ಎಸ್‌. ದೇವರಕಲ್‌ ಅವರ ಗುರುಸೇವೆ ಆಗಾಧ ಎನ್ನುವುದನ್ನು ವಿದ್ಯಾರ್ಥಿಗಳ ಉತ್ಸಾಹ ನೋಡಿದರೆ ಕಂಡು ಬರುತ್ತದೆ. ಹೀಗಾಗಿ ಡಾ| ಅಪ್ಪ ಅವರು ಶತಾಯುಷಿಗಳಾಗಿ ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ಬೆಳೆಸಲಿ ಹಾಗೂ ನೂರು ವರ್ಷಗಳಾಗುವತನಕ ದೇವರಕಲ್‌ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಲಿ ಎಂದು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಶುಭ ಹಾರೈಸಿದರು.

ವಿಶ್ವದಲ್ಲೇ ಗುರುತಿಸುವಂತಾಗಲಿದೆ ವಿವಿ
 ಶರಣಬಸವ ವಿವಿ ಮುಂದಿನ ನಾಲ್ಕೈದು ವರ್ಷಗಳಲ್ಲಿ ವಿಶ್ವದಲ್ಲೇ ಗುರುತಿಸುವ ವಿವಿ ಆಗಬೇಕು ಎನ್ನುವುದೇ ತಮ್ಮ ಉದ್ದೇಶವಾಗಿದೆ. ಮೊದಲ ವರ್ಷದಲ್ಲೇ 22 ವಿಭಾಗದ ಕೋರ್ಸುಗಳು ಪ್ರಾರಂಭವಾಗಿವೆ. ಕಠಿಣ ಕಾರ್ಯ ಮೈಗೂಡಿಸಿಕೊಂಡಲ್ಲಿ ಈ ಸಾಧನೆ ತಲುಪಬಹುದು.
  ಡಾ| ಶರಣಬಸವಪ್ಪ ಅಪ್ಪ , ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ

ಪ್ರಮುಖ ವಿವಿಯಾಗಿ ಹೊರ ಹೊಮ್ಮಲಿ
ಶರಣಬಸವ ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ಜಗತ್ತಿನ 10 ಪ್ರಮುಖ ವಿವಿಗಳಲ್ಲಿ ಒಂದಾಗಲಿ. ಡಾ| ಶರಣಬಸವಪ್ಪ ಅಪ್ಪ ದೂರದೃಷ್ಟಿ ಆಲೋಚನೆ ನೋಡಿದರೆ ಈ ಸಾಧನೆ ಸಾಧ್ಯವಾಗುತ್ತದೆ ಎನ್ನುವ ವಿಶ್ವಾಸವಿದೆ. ಎಸ್‌ಬಿಆರ್‌ ಸಂಸ್ಥೆ ಬೆಳೆದ ರೀತಿ ಅವಲೋಕಿಸಿದರೆ ಇದು ಸಾಧ್ಯವಾಗುವುದರಲ್ಲಿ ಸಂಶಯವಿಲ್ಲ.
  ಸದಾಶಿವ ಮಹಾಸ್ವಾಮೀಜಿ, ಸೇಡಂ

Advertisement

Udayavani is now on Telegram. Click here to join our channel and stay updated with the latest news.

Next